INDW vs AUSW: ಟೀಮ್ ಇಂಡಿಯಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ
India Women vs Australia Women: 339 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಯಾಸ್ತಿಕಾ ಭಾಟಿಯಾ (6) ಹಾಗೂ ಸ್ಮೃತಿ ಮಂಧಾನ (29) ಬೇಗನೆ ವಿಕೆಟ್ ಒಪ್ಪಿಸಿದರು. ಇನ್ನು ರಿಚಾ ಘೋಷ್ 19 ರನ್ಗಳಿಸಿದರೆ, ನಾಯಕಿ ಹರ್ಮನ್ಪ್ರೀತ್ ಕೌರ್ 3 ರನ್ಗಳಿಸಿ ಔಟಾದರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ (Team India) ಮಹಿಳಾ ತಂಡದ ವಿರುದ್ಧ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ (Australia) ಮಹಿಳಾ ತಂಡ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್ಗಳ ಗೆಲುವು ದಾಖಲಿಸಿತು. ಇನ್ನು 2ನೇ ಪಂದ್ಯದಲ್ಲಿ ಆಸೀಸ್ ವನಿತೆಯರು 3 ರನ್ಗಳ ರೋಚಕ ಜಯ ಸಾಧಿಸಿತ್ತು.
ಮಂಗಳವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸೀಸ್ ಪಡೆಗೆ ಯುವ ಆಟಗಾರ್ತಿ ಫೋಬೆ ಲಿಚ್ಫೀಲ್ಡ್ ಹಾಗೂ ಅಲಿಸ್ಸಾ ಹೀಲಿ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 189 ರನ್ಗಳ ಜೊತೆಯಾಟವಾಡಿದ ಬಳಿಕ ಹೀಲಿ (82) ವಿಕೆಟ್ ಒಪ್ಪಿಸಿದರು. ಇದಾಗ್ಯೂ ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಫೋಬೆ ಲಿಚ್ಫೀಲ್ಡ್ ಭರ್ಜರಿ ಶತಕ ಪೂರೈಸಿದರು.
ಅಂತಿಮವಾಗಿ 125 ಎಸೆತಗಳನ್ನು ಎದುರಿಸಿದ 20 ವರ್ಷದ ಫೋಬೆ ಲಿಚ್ಫೀಲ್ಡ್ 1 ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ 119 ರನ್ ಬಾರಿಸಿ ಔಟಾದರು. ಈ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 338 ರನ್ ಕಲೆಹಾಕಿತು.
339 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಯಾಸ್ತಿಕಾ ಭಾಟಿಯಾ (6) ಹಾಗೂ ಸ್ಮೃತಿ ಮಂಧಾನ (29) ಬೇಗನೆ ವಿಕೆಟ್ ಒಪ್ಪಿಸಿದರು. ಇನ್ನು ರಿಚಾ ಘೋಷ್ 19 ರನ್ಗಳಿಸಿದರೆ, ನಾಯಕಿ ಹರ್ಮನ್ಪ್ರೀತ್ ಕೌರ್ 3 ರನ್ಗಳಿಸಿ ಔಟಾದರು.
ಈ ಹಂತದಲ್ಲಿ ಜೊತೆಗೂಡಿದ ಜೆಮಿಮಾ ರೊಡ್ರಿಗಾಸ್ ಹಾಗೂ ದೀಪ್ತಿ ಶರ್ಮಾ ತಂಡಕ್ಕೆ ಆಸರೆಯಾಗಿ ನಿಂತರು. ಇದಾಗ್ಯೂ ಇಬ್ಬರು ತಲಾ 25 ರನ್ಗಳ ಕೊಡುಗೆ ನೀಡಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 32.4 ಓವರ್ಗಳಲ್ಲಿ ಟೀಮ್ ಇಂಡಿಯಾ 148 ರನ್ಗಳಿಗೆ ಆಲೌಟ್ ಮಾಡಿ ಆಸ್ಟ್ರೇಲಿಯಾ ತಂಡವು 190 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಆಸ್ಟ್ರೇಲಿಯಾ ತಂಡ ಕ್ವೀನ್ ಸ್ವೀಪ್ ಮಾಡಿಕೊಂಡಿದೆ.
ಭಾರತ ಪ್ಲೇಯಿಂಗ್ ಇಲೆವೆನ್: ಯಾಸ್ತಿಕಾ ಭಾಟಿಯಾ , ಸ್ಮೃತಿ ಮಂಧಾನ , ರಿಚಾ ಘೋಷ್ (ವಿಕೆಟ್ ಕೀಪರ್) , ಜೆಮಿಮಾ ರೊಡ್ರಿಗಾಸ್ , ಹರ್ಮನ್ಪ್ರೀತ್ ಕೌರ್ (ನಾಯಕಿ) , ದೀಪ್ತಿ ಶರ್ಮಾ , ಮನ್ನತ್ ಕಶ್ಯಪ್ , ಅಮನ್ಜೋತ್ ಕೌರ್ , ಪೂಜಾ ವಸ್ತ್ರಾಕರ್ , ಶ್ರೇಯಾಂಕಾ ಪಾಟೀಲ್ , ರೇಣುಕಾ ಠಾಕೂರ್ ಸಿಂಗ್.
ಇದನ್ನೂ ಓದಿ: IPL 2024: RCB ತಂಡದ ನಾಯಕತ್ವದಲ್ಲಿ ಮತ್ತೆ ಬದಲಾವಣೆ..?
ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್: ಫೋಬೆ ಲಿಚ್‌ಫೀಲ್ಡ್ , ಅಲಿಸ್ಸಾ ಹೀಲಿ (ನಾಯಕಿ) , ಎಲ್ಲಿಸ್ ಪೆರ್ರಿ , ಬೆತ್ ಮೂನಿ , ತಹ್ಲಿಯಾ ಮೆಕ್‌ಗ್ರಾತ್ , ಆಶ್ಲೀ ಗಾರ್ಡ್ನರ್ , ಅನ್ನಾಬೆಲ್ ಸದರ್ಲ್ಯಾಂಡ್ , ಜಾರ್ಜಿಯಾ ವೇರ್ಹ್ಯಾಮ್ , ಅಲಾನಾ ಕಿಂಗ್ , ಕಿಮ್ ಗಾರ್ತ್ , ಮೇಗನ್ ಶುಟ್.