ಇಂಗ್ಲೆಂಡ್​ನಲ್ಲಿ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ

England Women vs India Women: ಇಂಗ್ಲೆಂಡ್​ನಲ್ಲಿ ನಡೆದ ಮೂರನೇ ಮಹಿಳಾ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 50 ಓವರ್​ಗಳಲ್ಲಿ 318 ರನ್​ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಮಹಿಳಾ ತಂಡವು 305 ರನ್​ಗಳಿಗೆ ಆಲೌಟ್ ಆಗಿದ್ದಾರೆ. ಈ ಮೂಲಕ ಭಾರತ ಮಹಿಳಾ ತಂಡ 13 ರನ್​ಗಳ ಜಯ ಸಾಧಿಸಿದೆ.

ಇಂಗ್ಲೆಂಡ್​ನಲ್ಲಿ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ
Team India

Updated on: Jul 23, 2025 | 8:18 AM

ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ವಿಶೇಷ ಎಂದರೆ ಭಾರತ ಮಹಿಳಾ ತಂಡ ಇದೇ ಮೊದಲ ಬಾರಿಗೆ ಇಂಗ್ಲೆಂಡ್​ನಲ್ಲಿ ಏಕದಿನ ಹಾಗೂ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸುವಲ್ಲಿ ಹರ್ಮನ್​ಪ್ರೀತ್ ಕೌರ್ ಪಡೆ ಯಶಸ್ವಿಯಾಗಿದೆ.

ಇದಕ್ಕೂ ಮುನ್ನ ನಡೆದ 5 ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 3-2 ಅಂತರದಿಂದ ಗೆದ್ದುಕೊಂಡಿದ್ದರು. ಇದೀಗ ಏಕದಿನ ಸರಣಿಯಲ್ಳೂ ಆತಿಥೇಯರನ್ನು ಬಗ್ಗು ಬಡಿಯುವಲ್ಲಿ ಭಾರತೀಯ ವನಿತಾ ಪಡೆ ಯಶಸ್ವಿಯಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 49 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿದ್ದಾರೆ.

ಇನ್ನು ಈ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 4 ವಿಕೆಟ್​ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಏಕದಿನ ಪಂದ್ಯದಲ್ಲಿ 8 ವಿಕೆಟ್​ಗಳ ಗೆಲುವು ಸಾಧಿಸಿ ಇಂಗ್ಲೆಂಡ್ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದ್ದರು. ಹೀಗಾಗಿ ಮೂರನೇ ಏಕದಿನ ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಟ್ಟಿತು.

ಸರಣಿ ನಿರ್ಣಾಯಕ ಪಂದ್ಯ:

ಚೆಸ್ಟರ್-ಲೆ-ಸ್ಟ್ರೀಟ್​ನ ರಿವರ್​ಸೈಡ್ ಮೈದಾನದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಆಟಗಾರ್ತಿ ಸ್ಮೃತಿ ಮಂಧಾನ (45) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ಹರ್ಲೀನ್ ಡಿಯೋಲ್ ಕೂಡ 45 ರನ್​ಗಳ ಕೊಡುಗೆ ನೀಡಿದರು.

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕಿ ಹರ್ಮನ್​ಪ್ರೀತ್ ಕೌರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಹರ್ಮನ್​ ಕೇವಲ 84 ಎಸೆತಗಳಲ್ಲಿ 14 ಫೋರ್​ಗಳೊಂದಿಗೆ 102 ರನ್ ಚಚ್ಚಿದರು.

ಹರ್ಮನ್​ಪ್ರೀತ್ ಕೌರ್​ಗೆ ಉತ್ತಮ ಸಾಥ್ ನೀಡಿದ ಜೆಮಿಮಾ ರೊಡ್ರಿಗಸ್ 45 ಎಸೆತಗಳಲ್ಲಿ 50 ರನ್ ಕಲೆಹಾಕಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 318 ರನ್​ ಗಳಿಸಿತು.

319 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರ ಎಮ್ಮಾ ಲಾಂಬ್ 68 ರನ್ ಬಾರಿಸಿದರೆ, ನಾಯಕಿ ನ್ಯಾಟ್ ಸಿವರ್ ಬ್ರಂಟ್ 98 ರನ್​ಗಳಿಸಿದರು. ಇನ್ನು ಸೋಫಿಯಾ ಡಂಕ್ಲಿ 34 ರನ್​, ಆಲೀಸ್ ಡೇವಿಡ್ಸನ್ 44 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಇಂಗ್ಲೆಂಡ್ ತಂಡ 40 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿದ್ದರು.

ಆದರೆ ಅಂತಿಮ 10 ಓವರ್​ಗಳಲ್ಲಿ ಬಿಗು ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಬೌಲರ್​ಗಳು ರನ್​ ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಅಲ್ಲದೆ 49.5 ಓವರ್​ಗಳಲ್ಲಿ 305 ರನ್​ಗಳಿಗೆ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿ 13 ರನ್​ಗಳ ಗೆಲುವು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಟೀಮ್ ಇಂಡಿಯಾ ಪರ ಯುವ ಬೌಲರ್ ಕ್ರಾಂತಿ ಗೌಡ್ 9.5 ಓವರ್​ಗಳಲ್ಲಿ 52 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದರು.

ಈ ಗೆಲುವಿನೊಂದಿಗೆ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಆಂಗ್ಲರ ನಾಡಿನಲ್ಲಿ ಭಾರತ ಮಹಿಳಾ ತಂಡ ಏಕದಿನ ಹಾಗೂ ಟಿ20 ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ.

ಇಂಗ್ಲೆಂಡ್ ಪ್ಲೇಯಿಂಗ್ 11:  ಟ್ಯಾಮಿ ಬ್ಯೂಮಾಂಟ್ , ಆ್ಯಮಿ ಜೋನ್ಸ್ (ವಿಕೆಟ್ ಕೀಪರ್) , ಎಮ್ಮಾ ಲಾಂಬ್ , ನ್ಯಾಟ್ ಸಿವರ್-ಬ್ರಂಟ್ (ನಾಯಕಿ) , ಸೋಫಿಯಾ ಡಂಕ್ಲಿ , ಆಲಿಸ್ ಡೇವಿಡ್ಸನ್ ರಿಚರ್ಡ್ಸ್ , ಷಾರ್ಲೆಟ್ ಡೀನ್ , ಸೋಫಿ ಎಕ್ಲೆಸ್ಟೋನ್ , ಲಿನ್ಸೆ ಸ್ಮಿತ್ , ಲಾರೆನ್ ಫೈಲರ್ , ಲಾರೆನ್ ಬೆಲ್.

ಇದನ್ನೂ ಓದಿ: ಹದಿನೈದಕ್ಕೆ ಐದು… ಅತ್ಯಂತ ಹೀನಾಯ ದಾಖಲೆ ಬರೆದ ಪಾಕಿಸ್ತಾನ್

ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಪ್ರತೀಕಾ ರಾವಲ್ , ಹರ್ಲೀನ್ ಡಿಯೋಲ್ , ಹರ್ಮನ್​ಪ್ರೀತ್ ಕೌರ್ (ನಾಯಕಿ) , ಜೆಮಿಮಾ ರೊಡ್ರಿಗಸ್ , ರಿಚಾ ಘೋಷ್ (ವಿಕೆಟ್ ಕೀಪರ್) , ದೀಪ್ತಿ ಶರ್ಮಾ , ರಾಧಾ ಯಾದವ್ , ಸ್ನೇಹ್ ರಾಣಾ , ಶ್ರೀ ಚರಣಿ , ಕ್ರಾಂತಿ ಗೌಡ್.