WTC Points Table: ದಾಖಲೆ ಜಯ ಸಾಧಿಸಿದರೂ 6ನೇ ಸ್ಥಾನದಲ್ಲೇ ಉಳಿದ ಟೀಂ ಇಂಡಿಯಾ

WTC Points Table: ಭಾರತ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಸರಣಿ ಗೆದ್ದರೂ, ಈ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರಲಿಲ್ಲ. ಹಾಗಾಗಿ ಭಾರತಕ್ಕೆ WTC ಪಾಯಿಂಟ್ಸ್ ಸಿಕ್ಕಿಲ್ಲ, 6ನೇ ಸ್ಥಾನದಲ್ಲಿ ಉಳಿದಿದೆ. ಇತ್ತೀಚಿನ ನ್ಯೂಜಿಲೆಂಡ್ ಸೋಲಿನಿಂದ WTC ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಭಾರತದ ಮುಂದಿನ ಸರಣಿಗಳು ಫೈನಲ್‌ ತಲುಪಲು ನಿರ್ಣಾಯಕವಾಗಿವೆ.

WTC Points Table: ದಾಖಲೆ ಜಯ ಸಾಧಿಸಿದರೂ 6ನೇ ಸ್ಥಾನದಲ್ಲೇ ಉಳಿದ ಟೀಂ ಇಂಡಿಯಾ
Team India
Image Credit source: PTI

Updated on: Jun 08, 2026 | 5:30 PM

ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಭಾರತ ಪ್ರವಾಸ ಮಾಡಿರುವ ಅಫ್ಘಾನಿಸ್ತಾನ  (India vs Afghanistan) ತಂಡ ಟೆಸ್ಟ್ ಸೋಲಿನೊಂದಿಗೆ ತನ್ನ ಪ್ರವಾಸವನ್ನು ಆರಂಭಿಸಿದೆ. ಚಂಡೀಗಢದ ಮಹಾರಾಜ ಯಾದವಿಂದರ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ (ಮುಲ್ಲನ್‌ಪುರ) ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ದಾಖಲೆಯ ಗೆಲುವು ಸಾಧಿಸಿತು. ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಗೆದ್ದು ಏಕೈಕ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು. ಈ ಟೆಸ್ಟ್ ಪಂದ್ಯವನ್ನು ಭಾರತ ಭಾರಿ ಅಂತರದಿಂದ ಗೆದ್ದುಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ ಈ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC Points Table) ಭಾಗವಾಗಿರಲಿಲ್ಲ. ಹೀಗಾಗಿ ಭಾರತ 300 ರನ್​ಗಳಿಂದ ಗೆದ್ದರೂ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

WTC ಪಾಯಿಂಟ್‌ಗಳ ಪಟ್ಟಿ ಹೇಗಿದೆ?

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರದ ಕಾರಣ ಪಾಯಿಂಟ್ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಆದಾಗ್ಯೂ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದ ಬಳಿಕ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ 115 ರನ್‌ಗಳಿಂದ ಸೋತಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಕುಸಿತಕ್ಕೆ ಕಾರಣವಾಗಿದೆ. ಕಿವೀಸ್ ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿ ಗಮನಾರ್ಹ ಲಾಭವನ್ನು ಗಳಿಸಿವೆ. ಉಳಿದಂತೆ ಆಸ್ಟ್ರೇಲಿಯಾ 87.5 ಪ್ರತಿಶತದಷ್ಟು ಗೆಲುವಿನ ಶೇಕಡವಾರುವಿನೊಂದಿಗೆ ಅಗ್ರಸ್ಥಾನದಲ್ಲಿದೆ.

IND vs AFG: ಟೆಸ್ಟ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿದ ಭಾರತ

6ನೇ ಸ್ಥಾನದಲ್ಲೇ ಉಳಿದ ಭಾರತ

ಇತ್ತ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಜಯಗಳಿಸಿದರೂ, ಪಾಯಿಂಟ್ಸ್ ಟೇಬಲ್‌ನಲ್ಲಿ ಯಾವುದೇ ಪ್ರಯೋಜನವನ್ನು ಪಡೆದಿಲ್ಲ. ಇಂಗ್ಲೆಂಡ್ ತಂಡವು ಭಾರತದ ನಂತರ ಏಳನೇ ಸ್ಥಾನದಲ್ಲಿದ್ದು, ಪಾಕಿಸ್ತಾನ ಎಂಟನೇ ಸ್ಥಾನದಲ್ಲಿದೆ. ಪ್ರಸ್ತುತ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ಇಲ್ಲಿಯವರೆಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಜಯ ದಾಖಲಿಸಿದೆ. ಭಾರತ ಈ ವರ್ಷ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಮುಂದಿನ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾಕ್ಕೆ ಆತಿಥ್ಯ ವಹಿಸಲಿದೆ. ಈ ಮೂರು ಸರಣಿಗಳು ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್‌ಗೆ ತಲುಪುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Mon, 8 June 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us