ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ದ್ವಿತೀಯ ಏಕದಿನ ಪಂದ್ಯ ಕೂಡ ರಣ ರೋಚಕವಾಗಿತ್ತು. ಮೊದಲ ಪಂದ್ಯದಂತೆ ಎರಡನೇ ಏಕದಿನ ಕೂಡ ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಅಂತಿಮ 50ನೇ ಓವರ್ನ ಕೊನೆಯ 6 ಎಸೆದಲ್ಲಿ ಭಾರತದ ಗೆಲುವಿಗೆ 8 ರನ್‌ಗಳ ಅವಶ್ಯಕತೆಯಿತ್ತು. ಅರ್ಧಶತಕ ಸಿಡಿಸಿ ಸೆಟ್ ಆಗಿದ್ದ ಆಲ್ರೌಂಡರ್ ಅಕ್ಷರ್ ಪಟೇಲ್ (Axar Patel) ಕ್ರೀಸ್ನಲ್ಲಿದ್ದರು. ಮೊದಲ ಎಸೆತ ಡಾಟ್ ಆದರೆ, ನಂತರದ ಎರಡು ಎಸೆತಗಳಲ್ಲಿ ತಲಾ ಒಂದೊಂದು ರನ್ ಮೂಡಿ ಬಂತು. ಹೀಗಾಗಿ ಕೊನೆಯ 3 ಎಸೆತಗಳಲ್ಲಿ ಟೀಮ್ ಇಂಡಿಯಾಕ್ಕೆ (Team India) 6 ರನ್ ಬೇಕಾಗಿತ್ತು. ಖೈಲ್ ಮೇಯರ್ಸ್ ಅವರ 4ನೇ ಲೋ ಫುಲ್ಟಾಸ್ ಎಸೆತವನ್ನು ಅಕ್ಷರ್ ಲಾಂಗ್ ಆಫ್ ಕಡೆ ಅಟ್ಟಿದರು. ಚೆಂಡು ನೇರವಾಗಿ ಬೌಂಡರಿ ಗೆರೆ ದಾಟಿ ಸಿಕ್ಸ್ಗೆ ಹೋಯಿತು. 35 ಎಸೆತಗಳಲ್ಲಿ ಅಜೇಯ 64 ರನ್ ಚಚ್ಚಿದ ಅಕ್ಷರ್ ಪಟೇಲ್ ಹೀರೋ ಆಗಿ ಮಿಂಚಿದರು.
ಇತ್ತ ಗೆಲ್ಲುವ ಜೊತೆಗೆ ಸರಣಿ ವಶಪಡಿಸಿಕೊಂಡ ಟೀಮ್ ಇಂಡಿಯಾ ಪಾಳಯದಲ್ಲಿ ಖುಷಿಗೆ ಪಾರವೇ ಇರಲಿಲ್ಲ. ಹೌದು, ರೋಚಕ ಕದನದಲ್ಲಿ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಆಟಗಾರರು ಸಂಭ್ರಮಿಸಿದರು. ಪಂದ್ಯ ಮುಗಿದ ಬಳಿಕ ಆಟಗಾರರು ಸೆಲೆಬ್ರೆಟ್ ಮಾಡುತ್ತಿರುವ ವಿಡಿಯೋವನ್ನು ನಾಯಕ ಶಿಖರ್ ಧವನ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಇಶಾನ್ ಕಿಶನ್, ಅಕ್ಷರ್, ಚಹಲ್, ಠಾಕೂರ್ ಸೇರಿದಂತೆ ಭಾರತದ ಬಹತೇಕ ಆಟಗಾರರು ಸಖತ್ ಆಗಿ ಸಂಭ್ರಮಿಸಿದ್ದಾರೆ.
Talent wins game but teamwork and intelligence wins championship! ? Kudos to team for the amazing face-off! ?? #IndvsWI pic.twitter.com/jMZOjWiTN6
— Shikhar Dhawan (@SDhawan25) July 25, 2022
ಪಂದ್ಯ ಮುಗದಿ ಬಳಿಕ ಮಾತನಾಡಿದ ನಾಯಕ ಶಿಖರ್ ಧವನ್, “ನಮ್ಮ ತಂಡದ ಇಂದು ಅದ್ಭುತ ಪ್ರದರ್ಶನ ನೀಡಿದೆ. ನಮ್ಮ ಆಟಗಾರರು ಎಲ್ಲೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಅಯ್ಯರ್, ಸಂಜು, ಅಕ್ಷರ್ ಎಲ್ಲರೂ ಅಮೋಘ ಪ್ರದರ್ಶನ ನೀಡಿದ್ದಾರೆ. ಆವೇಶ್ ಖಾನ್ ಕೂಡ ತಮ್ಮ ಚೊಚ್ಚಲ ಪಂದ್ಯದಲ್ಲೇ 11 ರನ್ ಗಳಿಸಿ ಮುಖ್ಯ ಕಾಣಿಕೆ ನೀಡಿದರು. ಐಪಿಎಲ್ಗೆ ಧನ್ಯವಾದ. ಅಲ್ಲಿ ಈ ರೀತಿಯ ಪರಿಸ್ಥಿತಿ ಬಂದಾಗ ಹೇಗೆ ಆಡಬೇಕು ಎಂದು ಕಲಿತಿದ್ದಾರೆ. ವಿಂಡೀಸ್ ಪರ ಹೋಪ್ ಮತ್ತು ಪೂರನ್ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ನಮ್ಮ ಬ್ಯಾಟಿಂಗ್ ಆರಂಭ ಕೊಂಚ ನಿಧಾನವಾಗಿತ್ತು. ಅಯ್ಯರ್–ಸ್ಯಾಮ್ಸನ್ ಜೊತೆಯಾಟ ಮುಖ್ಯ ಪಾತ್ರ ವಹಿಸಿತು,” ಎಂದು ಹೇಳಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡಕ್ಕೆ ಶಾಯ್ ಹೋಪ್ ಮತ್ತು ಕೈಲ್ ಮೇಯರ್ಸ್ ಚುರುಕಿನ ಆರಂಭ ನೀಡಿದರು. ಮೊದಲ ವಿಕೆಟ್ಗೆ ಇವರಿಬ್ಬರು 65 ರನ್ ಗಳಿಸಿದರು. ಬಳಿಕ ನಾಯಕ ನಿಕೋಲಸ್ ಪೂರನ್ (74) ಅವರು ಹೋಪ್ (115) ಜೊತೆಗೂಡಿ ಭಾರತೀಯ ಬೌಲರ್ಗಳನ್ನು ದಂಡಿಸಿದರು. ಪರಿಣಾಮ ವೆಸ್ಟ್ ಇಂಡೀಸ್ ನಿಗದಿತ 50 ಓವರ್‌ಗಳಲ್ಲಿ 311 ರನ್ ಗಳಿಸಿತು.
ವಿಂಡೀಸ್ ನೀಡಿದ್ದ 312 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 49.4 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಶ್ರೇಯಸ್ ಅಯ್ಯರ್(63), ಸಂಜು ಸಾಮ್ಸನ್(54) ಹಾಗೂ ಅಕ್ಷರ್ ಪಟೇಲ್ ಅರ್ಧಶತಕ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ತಂದಿಟ್ಟರು.