
ಮನೀಶ್ ಪಾಂಡೆ ಭಾರತೀಯ ಕ್ರಿಕೆಟ್ನಲ್ಲಿ ಅತ್ಯಂತ ಫಿಟ್ ಮತ್ತು ಸ್ಟೈಲಿಶ್ ಆಟಗಾರರಲ್ಲಿ ಒಬ್ಬರು. 19 ನೇ ವಯಸ್ಸಿನಲ್ಲಿ ವಿಶ್ವಕಪ್ ಗೆದ್ದ ನಂತರ, ಐಪಿಎಲ್‌ನಲ್ಲಿ ಶತಕ ಗಳಿಸಿದ ಮನೀಶ್ ಈಗ ನಿಧಾನವಾಗಿ ಭಾರತ ತಂಡದಿಂದ ದೂರವಾಗುತ್ತಿದ್ದಾರೆ. ಯಾವುದೇ ಪ್ರಮುಖ ಟೂರ್ನಿಯಲ್ಲಿ ಸ್ಥಾನ ಪಡೆಯದ ಮನೀಶ್, ಇತ್ತೀಚೆಗಿನ ಶ್ರೀಲಂಕಾ ಪ್ರವಾಸದ ವೇಳೆ ಎಲ್ಲರನ್ನೂ ನಿರಾಸೆಗೊಳಿಸಿದರು. ಪರಿಣಾಮವಾಗಿ, ಮುಂಬರುವ ಟಿ 20 ವಿಶ್ವಕಪ್‌ಗಾಗಿ ಅವರು ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಹೀಗೆ ವೃತ್ತಿ ಬದುಕಿನಲ್ಲಿ ಏರಳಿತ ಕಂಡಿರುವ ಮನೀಶ್ಗೆ ಇಂದು ಹುಟ್ಟುಹಬ್ಬ.
ಮನೀಶ್ ಪಾಂಡೆ ಸೆಪ್ಟೆಂಬರ್ 10, 1989 ರಂದು ಕುಮಾನ್ ಜಿಲ್ಲೆಯ ಬಾಗೇಶ್ವರದಲ್ಲಿ ಜನಿಸಿದರು. ಆದರೆ ಆತ 15 ವರ್ಷದವನಿದ್ದಾಗ, ಅವರ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಅವರ ತಂದೆ ಭಾರತೀಯ ಸೇನೆಯಲ್ಲಿದ್ದರು. ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಮನೀಶ್ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಪರ ಆಡಿದರು. ಇಲ್ಲಿಂದ ಆರಂಭವಾದ ಮನೀಶ್ ಅವರ ಕ್ರಿಕೆಟ್ ಜೀವನದಲ್ಲಿ 2008 ರಲ್ಲಿ ಒಂದು ದೊಡ್ಡ ಸಂಗತಿ ಸಂಭವಿಸಿತು. ವಿರಾಟ್ ನಾಯಕತ್ವದಲ್ಲಿ ಭಾರತ ಅಂಡರ್ -19 ವಿಶ್ವಕಪ್ ಗೆದ್ದಿತ್ತು. ಆ ತಂಡದಲ್ಲಿ ಮನೀಶ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು.
ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ
2008 ವರ್ಷವು ಮನೀಶ್ ಪಾಂಡೆಯವರಿಗೆ ಬಹಳ ಅದೃಷ್ಟಕರವಾಗಿತ್ತು. ಒಂದೆಡೆ, ವಿಶ್ವಕಪ್ ಗೆದ್ದ ನಂತರ, 2009ನೇ ಇಸವಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರ ಕ್ರೀಸಿಗಿಳಿದ ಯುವ ಸ್ಫೋಟಕ ಓಪನರ್ ಮನೀಶ್ ಪಾಂಡೆ ಭರ್ಜರಿ ಶತಕ ಸಾಧನೆ ಮಾಡಿದರು. ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ನಿಂದ ದಾಖಲಾದ ಮೊದಲ ಶತಕವಾಗಿದೆ. ಹಾಗೆಯೇ ಆರ್‌ಸಿಬಿ ಪರ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೂ ಮನೀಶ್ ಪಾಂಡೆ ಭಾಜನವಾದರು. ಇದು ಅವರ ಮೊದಲ ಐಪಿಎಲ್ ಶತಕವಾಗಿದ್ದು, ಐಪಿಎಲ್ ಶತಕ ಬಾರಿಸಿದ ಮೊದಲ ಭಾರತೀಯ ಎನಿಸಿಕೊಂಡರು. 2014 ರಲ್ಲಿ ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದರು. ಫೈನಲ್‌ನಲ್ಲಿ 94 ರನ್ ಗಳಿಸಿ ತಂಡಕ್ಕೆ ಟ್ರೋಫಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
ಭಾರತೀಯ ತಂಡದಲ್ಲಿ ಪಾದಾರ್ಪಣೆ
ಮನೀಶ್ ಪಾಂಡೆ 2015 ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನಕ್ಕೆ ಪಾದಾರ್ಪಣೆ ಮಾಡಿದರು. ಅವರು ಆರಂಭಿಕ ಪಂದ್ಯದಲ್ಲಿ ಕೇದಾರ್ ಜಾಧವ್ ಜೊತೆ 144 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಅದೇ ಪ್ರವಾಸದಲ್ಲಿ ಅವರನ್ನು ಟಿ -20 ತಂಡದಲ್ಲಿ ಸೇರಿಸಲಾಯಿತು. 2016 ಆಸ್ಟ್ರೇಲಿಯಾ ಪ್ರವಾಸದಲ್ಲಿ, ಅವರು ಸಿಡ್ನಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ 104 ರನ್ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಅವರು 2016 ರ ಟಿ 20 ವಿಶ್ವಕಪ್ ಮತ್ತು 2017 ಚಾಂಪಿಯನ್ಸ್ ಟ್ರೋಫಿಗೆ 15 ಸದಸ್ಯರ ತಂಡದಲ್ಲಿದ್ದರು. ಆದರೆ ಅವರ ಸ್ಟ್ರೈಕ್ ರೇಟ್ ಕುಸಿಯುತ್ತಿರುವ ಕಾರಣ ಮತ್ತು ಇತ್ತೀಚೆಗೆ ಫಾರ್ಮ್ ಕುಸಿಯುತ್ತಿರುವ ಕಾರಣ, ಹೈದರಾಬಾದ್ ತಂಡದಲ್ಲಿ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಅವರಿಗೆ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಲಿಲ್ಲ.