ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಹಾಗೂ ವಿಶ್ವಕಪ್ (ICC World Cup 2023) ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ (Mohammad Shami) ಬಿಗ್ ರಿಲೀಫ್ ಸಿಕ್ಕಿದೆ. ಕೌಟುಂಬಿಕ ಹಿಂಸಾಚಾರದ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಮೊಹಮ್ಮದ್ ಶಮಿ, ಅವರ ಸಹೋದರ ಮೊಹಮ್ಮದ್ ಹಾಸಿಮ್ ಹಾಗೂ ಕುಟುಂದ ಇತರ ಸದಸ್ಯರಿಗೆ ಮಂಗಳವಾರ ಕೋಲ್ಕತ್ತಾದ ಎಸಿಜೆಎಂ ನ್ಯಾಯಾಲಯ (Trial Court in Alipore) 2000 ರೂಪಾಯಿಯ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದೆ.
ವಾಸ್ತವವಾಗಿ 2018 ರಲ್ಲಿ ಮೊಹಮ್ಮದ್ ಶಮಿ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್, ಜಾದವ್‌ಪುರ ಪೊಲೀಸ್ ಠಾಣೆಯಲ್ಲಿ ಶಮಿ, ಅವರ ಸಹೋದರ ಹಾಸಿಮ್ ಮತ್ತು ಆಕೆಯ ಅತ್ತೆಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದರು. ಹಸೀನ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡು ಭಾರತೀಯ ದಂಡ ಸಂಹಿತೆಯ 498A, 323, 307, 376, 506, 328 ಮತ್ತು 34 ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ಶಮಿ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದರು.
Mohammad Shami: ವಿಶ್ವಕಪ್‌ಗೂ ಮುನ್ನ ಸಂಕಷ್ಟಕ್ಕೆ ಸಿಲುಕಿದ ಮೊಹಮ್ಮದ್ ಶಮಿ, ಬಂಧನ ಸಾಧ್ಯತೆ!
ವಾಸ್ತವವಾಗಿ ಕೌಟುಂಬಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೊಲ್ಕತ್ತಾದ ಕೆಳ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಆ ಬಳಿಕ ಶಮಿ ಮಡದಿ ಹಸಿನ್ ಜಹಾನ್ ಅವರು ಬಂಧನಕ್ಕೆ ತಡೆ ಮತ್ತು ವಿಚಾರಣೆಯ ಪ್ರಕ್ರಿಯೆಯಲ್ಲಿ ವಿಳಂಬವಾಗುವುದರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ಮಾಡಿದ್ದ ಸುಪ್ರೀಂ ಕೋರ್ಟ್, ನಾಲ್ಕು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ತಿಂಗಳೊಳಗೆ ಈ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಅಲಿಪುರ ಸೆಷನ್ಸ್ ನ್ಯಾಯಾಲಯಕ್ಕೆ ಆದೇಶಿಸಿತ್ತು. ಅಲ್ಲದೆ ಒಂದು ತಿಂಗಳೊಳಗೆ ಪ್ರಕರಣ ಇತ್ಯರ್ಥವಾಗದಿದ್ದರೆ ಬಂಧನದ ತಡೆಯಾಜ್ಞೆಯನ್ನು ಅಮಾನತುಗೊಳಿಸುವ ಬಗ್ಗೆ ಚಿಂತನೆ ನಡೆಸುವಂತೆ ಆದೇಶಿಸಿತ್ತು.
ಇದೀಗ ಪ್ರಕರಣ ದಾಖಲಾದ ಬಳಿಕ ಇದೇ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಶಮಿ ಜಾಮೀನು ಪಡೆದುಕೊಂಡಿದ್ದಾರೆ. ಪೊಲೀಸರು ಶಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು ಎಂದು ಶಮಿ ಪರ ವಕೀಲ ಸಲೀಂ ರೆಹಮಾನ್ ಹೇಳಿಕೆ ನೀಡಿದ್ದು, ಶಮಿ ಅಗತ್ಯವಿದ್ದಾಗ ಕೋರ್ಟ್‌ಗೆ ಹಾಜರಾಗುವುದನ್ನು ಮುಂದುವರಿಸುತ್ತಾರೆ ಎಂದು ಖಚಿತಪಡಿಸಿದ್ದಾರೆ.
ಏತನ್ಮಧ್ಯೆ, ಮುಂಬರುವ ವಿಶ್ವಕಪ್‌ಗಾಗಿ ಬಿಸಿಸಿಐ ಪ್ರಕಟಿಸಿರುವ 15 ಸದಸ್ಯರ ತಂಡದಲ್ಲಿ ಶಮಿ ಕೂಡ ಸೇರಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಸ್ವದೇಶಿ ಸರಣಿಯಲ್ಲಿಯೂ ಶಮಿಗೆ ಸ್ಥಾನ ಸಿಕ್ಕಿದೆ. ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಜೊತೆಗೆ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ಶಮಿ ಅವರ ಉಪಸ್ಥಿತಿಯು ಭಾರತದ ವೇಗದ ದಾಳಿಗೆ ಅಶ್ಯಕವಾಗಿದೆ. ಇದೀಗ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿರುವುದು ಶಮಿಗೆ ಭಿಗ್ ರಿಲೀಫ್ ಸಿಕ್ಕಂತ್ತಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Wed, 20 September 23