ಗಾಯದ ಕಾರಣದಿಂದಾಗಿ 2022 ರ ಕಾಮನ್‌ವೆಲ್ತ್ ಗೇಮ್ಸ್‌ನಿಂದ (Commonwealth Games 2022) ಹಿಂದೆ ಸರಿದಿದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಅವರ ಫಿಟ್ನೆಸ್ ಕುರಿತು ಬಿಗ್ ಅಪ್ಡೇಟ್ ಸಿಕ್ಕಿದೆ. ಟೋಕಿಯೊ ಒಲಿಂಪಿಕ್ (Tokyo Olympic) ಚಾಂಪಿಯನ್ ನೀರಜ್ ಅವರು ವೈದ್ಯಕೀಯವಾಗಿ ಫಿಟ್ ಆದ ನಂತರವೇ ಆಗಸ್ಟ್ 26 ರಂದು ನಡೆಯಲ್ಲಿರುವ ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಆದಿಲೆ ಸುಮರಿವಾಲಾ ಅವರ ಫಿಟ್ನೆಸ್ ಕುರಿತು ಹೇಳಿಕೆ ನೀಡಿದ್ದು, ಆಗಸ್ಟ್ 26 ರಿಂದ ನಡೆಯಲಿರುವ ಪಂದ್ಯಾವಳಿಯ ಸ್ಪರ್ಧಿಗಳ ಪಟ್ಟಿಯಲ್ಲಿ ಭಾರತದ ಸ್ಟಾರ್ ಆಟಗಾರ ನೀರಜ್ ಚೋಪ್ರಾ ಹೆಸರು ಕೂಡ ಇದೆ. ಪಿಟಿಐ ಜೊತೆ ಮಾತನಾಡಿದ ಸುಮರಿವಾಲಾ, ನೀರಜ್ ವೈದ್ಯಕೀಯ ಆಧಾರದ ಮೇಲೆ ಫಿಟ್ ಆಗಿದ್ದರೆ ಮಾತ್ರ ಅವರು ಈ ಪಂದ್ಯಾವಳಿಯಲ್ಲಿ ಆಡಲಿದ್ದಾರೆ ಎಂದಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್ ವೇಳೆ ಗಾಯಗೊಂಡಿದ್ದ ನೀರಜ್
ಯುಜೀನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ನೀರಜ್, ನಾಲ್ಕನೇ ಪ್ರಯತ್ನದಲ್ಲಿ ಗಾಯಗೊಂಡಿದ್ದರು. ಹೀಗಾಗಿ ನೀರಜ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇಡೀ ದೇಶ ಅವರಿಂದ ಚಿನ್ನವನ್ನು ನಿರೀಕ್ಷಿಸಿತ್ತು, ಆದರೆ ಇಂಜುರಿಯಿಂದ ಇದು ಅವರಿಂದ ಸಾಧ್ಯವಾಗಲಿಲ್ಲ. ಫೈನಲ್‌ನಲ್ಲಿ ನೀರಜ್ ಆರಂಭವೇ ಉತ್ತಮವಾಗಿರಲಿಲ್ಲ, ಆದರೆ ನಾಲ್ಕನೇ ಎಸೆತದಲ್ಲಿ ಲಯಕ್ಕೆ ಮರಳಿದ್ದ ನೀರಜ್ ಭಾರತಕ್ಕೆ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದರು. ಕೊನೆಯ 2 ಎಸೆತಗಳಲ್ಲಿ ಅವರಿಂದ ಚಿನ್ನ ನಿರೀಕ್ಷಿಸಲಾಗಿದ್ದರೂ ನಾಲ್ಕನೇ ಎಸೆತದ ಬಳಿಕ ನೀರಜ್ಗೆ ಇಂಜುರಿ ಸಮಸ್ಯೆ ಹೆಚ್ಚಾಗತೊಡಗಿತು. ಹೀಗಾಗಿ ಚಿನ್ನ ಗೆಲ್ಲುವ ನೀರಜ್ ಕನಸು ಕನಸ್ಸಾಗಿಯೇ ಉಳಿಯಿತು. ಆದರೆ ನೀರಜ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿದಿದ್ದ ನೀರಜ್
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗಾಯಗೊಂಡಿದ್ದ ನೀರಜ್, ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿಯಬೇಕಾಯಿತು. ನೀರಜ್ ಅನುಪಸ್ಥಿತಿಯಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ನೀರಜ್ ಕನಸನ್ನು ಭಗ್ನಗೊಳಿಸಿದ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ ಅವರನ್ನು ಸೋಲಿಸಿ ಪಾಕ್ನ ಅರ್ಷದ್ ಕಾಮನ್ ವೆಲ್ತ್ ಪ್ರಶಸ್ತಿ ಗೆದ್ದಿದ್ದರು. ಅರ್ಷದ್ ಮತ್ತು ನೀರಜ್ ಕೆಲವು ಸಮಯದಿಂದ ರೋಚಕ ಸ್ಪರ್ಧೆಗೆ ಸಾಕ್ಷಿಯಾಗಿದ್ದಾರೆ. ಇಬ್ಬರೂ ಒಳ್ಳೆಯ ಸ್ನೇಹಿತರು ಕೂಡ. ಅರ್ಷದ್ ಟೋಕಿಯೊ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಎರಡರಲ್ಲೂ 5ನೇ ಸ್ಥಾನ ಪಡೆದಿದ್ದರು. ಇಬ್ಬರ ನಡುವಿನ ಈ ಪೈಪೋಟಿಯೂ 2016 ರ ಗುವಾಹಟಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದೊಂದಿಗೆ ಪ್ರಾರಂಭವಾಯಿತು. ಸುಮಾರು 5 ವರ್ಷಗಳ ಹಿಂದೆ ನೀರಜ್ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದಾಗ ಅರ್ಷದ್ ಕಂಚಿನ ಪದಕ ಗೆದ್ದಿದ್ದರು.
Published On - 3:06 pm, Sun, 21 August 22