ನೀರಜ್ ಚಿನ್ನದ ಕನಸಿಗೆ ಅಡ್ಡಿಯಾದ ವೇಗದ ಬೌಲರ್ ಆಂಡರ್ಸನ್ ಪೀಟರ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
World Athletics Championships: ನೀರಜ್ ಮತ್ತು ಆಂಡರ್ಸನ್ 2016 ರಲ್ಲಿ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಎದುರು ಬದುರಾಗಿದ್ದರು. ಈ ಸ್ಪರ್ಧೆಯಲ್ಲಿ ನೀರಜ್ 86.48 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಜೂನಿಯರ್ ವಿಶ್ವ ಚಾಂಪಿಯನ್ ಆದರು.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ರ (World Athletics Championships 2022) ಜಾವೆಲಿನ್ ಥ್ರೋ ವಿಭಾಗದ ಫೈನಲ್‌ನಲ್ಲಿ ನೀರಜ್ ಚೋಪ್ರಾ (Neeraj Chopra) ಇತಿಹಾಸ ನಿರ್ಮಿಸಿದ್ದಾರೆ. 89.23 ಮೀಟರ್ ಎಸೆಯುವ ಮೂಲಕ ಎರಡನೇ ಸ್ಥಾನ ಅಲಂಕರಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಹಾಗಾದರೆ ಚಿನ್ನದ ಪದಕ ಗೆದ್ದ ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ ಬಗ್ಗೆ ಕುತೂಹಲ ಮೂಡಿಸುವ ಆಸಕ್ತದಾಯಕ ವಿಚಾರ ಇಲ್ಲಿದೆ ನೋಡಿ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಎಸೆತದ ಫೈನಲ್‌ನಲ್ಲಿ ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ ಮೂರು ಬಾರಿ 90 ಮೀಟರ್‌ಗೂ ಹೆಚ್ಚು ದೂರ ಜಾವೆಲಿನ್ ಎಸೆಯುವ ಮೂಲಕ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರ ಕನಸನ್ನು ಮುರಿದರು. ಹೀಗೆ ನೀರಜ್ರ ಚಿನ್ನದ ಕನಸಿಗೆ ತಣ್ಣೀರೆರೆಚಿದ ಪೀಟರ್ಸ್ ಮೊದಲು ಕ್ರಿಕೆಟ್ನಲ್ಲಿ ಬೌಲರ್ ಆಗಿದ್ದರು ಎಂದರೆ ನೀವು ನಂಬುತ್ತೀರಾ?
ವೇಗದ ಬೌಲರ್ ಆಗಿದ್ದ ಆಂಡರ್ಸನ್ ಪೀಟರ್ಸ್
ಈ ಹಿಂದೆ ತನ್ನ ಘಾತಕ ವೇಗದಿಂದ ಬ್ಯಾಟ್ಸ್ಮನ್ಗಳನ್ನು ಬೆಚ್ಚಿ ಬೀಳಿಸಿದ ಆಟಗಾರ ಈ ಬಾರಿ ನೀರಜ್ರನ್ನು ಸೋಲಿಸಿದರು. ವಾಸ್ತವವಾಗಿ, ಆಂಡರ್ಸನ್ ಬಾಲ್ಯದಿಂದಲೂ ಕ್ರಿಕೆಟ್ ಆಡಲು ಆರಂಭಿಸಿದರು. ಆದರೆ ಅದನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಉಸೇನ್ ಬೋಲ್ಟ್ ಅವರ ವಿಶ್ವ ದಾಖಲೆ ನೋಡಿ ಓಟದ ಬಗ್ಗೆ ಆಸಕ್ತಿ ಮೂಡಿ ಓಟಗಾರರಾದರು. ಆದರೆ ಗಾಯದಿಂದಾಗಿ ಪೀಟರ್ಸ್ ಅವರು ಜಾವೆಲಿನ್ ಎಸೆತಗಾರರಾದರು. ವಿಶ್ವ ಅಥ್ಲೆಟಿಕ್ಸ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಪೀಟರ್ಸ್, ನಾನು ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತೇನೆ. ಹೀಗಾಗಿ ನಾನು ಕ್ರಿಕೆಟ್ ಮತ್ತು ಟ್ರ್ಯಾಕ್ ಮತ್ತು ಫೀಲ್ಡ್ ಎರಡನ್ನೂ ಹೆಚ್ಚು ಅಭ್ಯಾಸ ಮಾಡುತ್ತಿದೆ. ಜೊತೆಗೆ ಕ್ರಿಕೆಟ್ನಲ್ಲಿ ನಾನು ವೇಗದ ಬೌಲರ್ ಆಗಿದ್ದೆ. ಬೌಲಿಂಗ್ನಲ್ಲಿ 90 mph ವೇಗದಲ್ಲಿ ಚೆಂಡನ್ನು ಎಸೆಯುವ ಸಾಮಥ್ರ್ಯ ಹೊಂದಿದ್ದೆ ಎಂದು ಆಂಡರ್ಸನ್ ಹೇಳಿದರು.
ಬೋಲ್ಟ್ ನೋಡಿ ಓಟಗಾರನೂ ಆದೆ
ಬೋಲ್ಟ್ ವಿಶ್ವ ದಾಖಲೆ ಮಾಡಿದ್ದನ್ನು ನೋಡಿದ ನಂತರ ನಾನು ಓಟಗಾರನಾಗಲು ಬಯಸಿದ್ದೆ. ಆದಾಗ್ಯೂ, ಇದರ ನಂತರ ಇಂಜುರಿಯಿಂದ ನಾನು ಜಾವೆಲಿನ್ ಕಡೆ ಮನಸ್ಸು ಮಾಡಿದೆ ಎಂದು ಪೀಟರ್ಸ್ ಹೇಳಿಕೊಂಡಿದ್ದಾರೆ. ಪೀಟರ್ಸ್, ಪ್ರತಿ ಬಾರಿಯೂ ಜಾವೆಲಿನ್ ಮೈದಾನದಲ್ಲಿ ನೀರಜ್ ಚೋಪ್ರಾ ಅವರಿಗೆ ಎದುರಾಳಿಯಾಗಿ ಸ್ಪರ್ಧಿಸಿದ್ದಾರೆ. ನೀರಜ್ ಮತ್ತು ಆಂಡರ್ಸನ್ 2016 ರಲ್ಲಿ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಎದುರು ಬದುರಾಗಿದ್ದರು. ಈ ಸ್ಪರ್ಧೆಯಲ್ಲಿ ನೀರಜ್ 86.48 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಜೂನಿಯರ್ ವಿಶ್ವ ಚಾಂಪಿಯನ್ ಆದರು. ಆಂಡರ್ಸನ್ 79.65 ಮೀ.ನೊಂದಿಗೆ ಮೂರನೇ ಸ್ಥಾನ ಪಡೆದರು. 2016 ಮತ್ತು 2022 ರ ನಡುವೆ, ಆಂಡರ್ಸನ್ ತಮ್ಮ ಆಟವನ್ನು ಮತ್ತಷ್ಟು ಸುಧಾರಿಸಿದರು, ಅದರ ಫಲಿತಾಂಶ ಭಾನುವಾರ ಬೆಳಿಗ್ಗೆ ಕಂಡುಬಂದಿತು. ಆಂಡರ್ಸನ್ ಪ್ರಸ್ತುತ ವಿಶ್ವದ ಅತ್ಯುತ್ತಮ ಜಾವೆಲಿನ್ ಎಸೆತಗಾರರಲ್ಲಿ ಒಬ್ಬರಾಗಿದ್ದು, ಈಗ ನೀರಜ್ ಮತ್ತು ಆಂಡರ್ಸನ್ ಆಗಸ್ಟ್ 7 ರಂದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ನೀರಜ್ ಹೊರತಾಗಿ ಭಾರತದ ಎರಡನೇ ಜಾವೆಲಿನ್ ಎಸೆತಗಾರ ರೋಹಿತ್ ಯಾದವ್ 10ನೇ ಸ್ಥಾನ ಪಡೆದರು.
Published On - 3:27 pm, Sun, 24 July 22