Neeraj Chopra: ನೀರಜ್ ಚೋಪ್ರಾ ಮನೆಯಲ್ಲಿ ಸಂಭ್ರಮದ ಕಣ್ಣೀರು: ನೃತ್ಯ ಮಾಡಿ ಖುಷಿ ಹಂಚಿಕೊಂಡ ತಂದೆ-ತಾಯಿ
World Athletics Championships: ದ್ವಿತೀಯ ಸ್ಥಾನ ಪಡೆದು ಚಿನ್ನ ಗೆಲ್ಲುತ್ತಿದ್ದಂತೆ ಅತ್ತ ನೀರಜ್ ಚೋಪ್ರಾ ಮನೆ ಸಂಭ್ರಮದ ಅಲೆಯಲ್ಲಿ ತೇಲಾಡಿತು. ಹರಿಯಾಣದ ಪಾನಿಪತ್ನಲ್ಲಿರುವ ಚೋಪ್ರಾ ಮನೆಯಲ್ಲಿ ನೀರಜ್ ತಾಯಿ ನೃತ್ಯ ಮಾಡಿ ಸಂಭ್ರಮ ಹಂಚಿಕೊಂಡರು.
ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ (World Athletics Championships) ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ನಲ್ಲಿ ಭಾರತದ ನೀರಜ್ ಚೋಪ್ರಾ (Neeraj Chopra) ಜಯಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. 89.23 ಮೀಟರ್ ದೂರ ಎಸೆದು ಎರಡನೇ ಸ್ಥಾನ ಅಲಂಕರಿಸಿದ ನೀರಜ್ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ 19 ವರ್ಷಗಳ ಬಳಿಕ ಭಾರತಕ್ಕೆ ಪದಕ ಗೆದ್ದುಕೊಟ್ಟರು. ನೀರಜ್ ಮೊದಲ ಪ್ರಯತ್ನದಲ್ಲಿ ಫೌಲ್ ಅನುಭವಿಸಿ ಆಘಾತ ನೀಡಿದರೆ ನಂತರ ಎರಡನೇ ಯತ್ನದಲ್ಲಿ 82.39 ಮೀಟರ್, ಮೂರನೇ ಪ್ರಯತ್ನದಲ್ಲಿ 86.37 ಮೀಟರ್ ದೂರ ಎಸೆದರಷ್ಟೆ. ಆದರೆ, ನಾಲ್ಕನೇ ಪ್ರಯತ್ನದಲ್ಲಿ 88.13 ಎಸೆದು ದಿಢೀರ್ ಎರಡನೇ ಸ್ಥಾನಕ್ಕೆ ಜಿಗಿದು ಭರ್ಜರಿ ಕಮ್ಬ್ಯಾಕ್ ಮಾಡಿದರು. ಐದನೇ ಮತ್ತು ಆರನೇ ರೌಂಡ್ನಲ್ಲಿ ಮತ್ತೆ ಫೌಲ್ ಆದ ಕಾರಣ ಚಿನ್ನ (Gold) ಕನಸು ನನಸಾಗಲಿಲ್ಲ. ಆದರೂ 88.13 ಶ್ರೇಷ್ಠ ಸಾಧನೆಯ ದೂರ ಎಸೆದು ಅಂತಿಮವಾಗಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡರು.
ಇತ್ತ ದ್ವಿತೀಯ ಸ್ಥಾನ ಪಡೆದು ಚಿನ್ನ ಗೆಲ್ಲುತ್ತಿದ್ದಂತೆ ಅತ್ತ ನೀರಜ್ ಮನೆ ಸಂಭ್ರಮದ ಅಲೆಯಲ್ಲಿ ತೇಲಾಡಿತು. ಸಿಹಿ ತಿನಿಸುಗಳನ್ನು ಹಂಚಿ ಖುಷಿ ಪಟ್ಟರು. ಹರಿಯಾಣದ ಪಾನಿಪತ್ನಲ್ಲಿರುವ ಚೋಪ್ರಾ ಮನೆಯಲ್ಲಿ ನೀರಜ್ ತಾಯಿ ನೃತ್ಯ ಮಾಡಿ ಸಂಭ್ರಮ ಹಂಚಿಕೊಂಡರು. “ಇದರಿಂದ ತುಂಬಾ ಸಂತಸವಾಗಿದೆ. ನೀರಜ್ ಕಷ್ಟ ಪಟ್ಟು ಶ್ರಮ ವಹಿಸಿದಕ್ಕೆ ಪ್ರತಿಫಲ ಸಿಕ್ಕಿದೆ,” ಎಂದು ನೀರಜ್ ತಾಯಿ ಸರೋಜ ಚೋಪ್ರಾ ಹೇಳಿದರು. “ನಾವು ಚಿನ್ನದ ನಿರೀಕ್ಷೆಯಲ್ಲಿದ್ದೆವು. ಆದರೆ, ಬೆಳ್ಳಿ ಪದಕ ಗೆದ್ದಿದ್ದಕ್ಕೆ ಖುಷಿ ಇದೆ,” ಎಂದು ನೀರಜ್ ಅವರ ಅಜ್ಜ ಧರಮ್ಸಿಂಗ್ ಚೋಪ್ರಾ ಖುಷಿಯ ಕಣ್ಣೀರಲಿಲ್ಲ ಮಾತನಾಡಿದರು.
“ನಾನೂಕೂಡ ಚಿನ್ನದ ನಿರೀಕ್ಷೆಯಲ್ಲಿದ್ದೆ. ಆದರೆ, ಬೆಳ್ಳಿ ಗೆದ್ದಿದ್ದು ಇತಿಹಾಸವಾಗಿದೆ. ಈ ಹಿಂದೆ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಕಂಚು ಗೆದ್ದಿದ್ದರು. ಇಂದು ನೀರಜ್ ಇತಿಹಾಸ ನಿರ್ಮಿಸಿದ್ದಾರೆ. ಅವರು ಯಾವಾಗಲೂ ಇತಿಹಾಸ ಸೃಷ್ಟಿಸಲೇ ಇರುತ್ತಾರೆ,” ಎಂದು ನೀರಜ್ ಸಂಬಂಧಿಕರೊಬ್ಬರು ಹೇಳಿದ್ದಾರೆ.
#WATCH Family and friends celebrate Neeraj Chopra’s silver medal win in the World Athletics Championships at his hometown in Panipat, #Haryana
Neeraj Chopra secured 2nd position with his 4th throw of 88.13 meters in the men’s Javelin finals. pic.twitter.com/khrUhmDgHG
— ANI (@ANI) July 24, 2022
ಇನ್ನು ನೀರಜ್ ಚೋಪ್ರಾ ಈ ಐತಿಹಾಸಿಕ ಸಾಧನೆ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ, ಯೋಗಿ ಆದಿತ್ಯನಾಥ್, ರಾಜ್ನಾಥ್ ಸಿಂಗ್ ಸೇರಿದಂತೆ ಅನೇಕ ಕ್ರೀಡಾ ದಿಗ್ಗಜರು, ಅಭಿಮಾನಿಗಳು ಚೋಪ್ರಾ ಸಾಧನೆಯನ್ನು ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದು, “ನಮ್ಮ ಅತ್ಯಂತ ಪ್ರತಿಷ್ಠಿತ ಕ್ರೀಡಾಪಟುವಾದ ನೀರಜ್ ಚೋಪ್ರಾ ವಿಶೇಷ ಸಾಧನೆ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಭಾರತೀಯ ಕ್ರೀಡೆಗೆ ಇದೊಂದು ವಿಶೇಷ ಕ್ಷಣ. ನೀರಜ್ ಅವರ ಮುಂಬರುವ ಪ್ರಯತ್ನಗಳಿಗೆ ಶುಭಾಶಯಗಳು,” ಎಂದು ಬರೆದುಕೊಂಡಿದ್ದಾರೆ.
Published On - 10:54 am, Sun, 24 July 22