IND vs WI: ಇಂದು ಎರಡನೇ ಏಕದಿನ: ಭಾರತದ ಪ್ಲೇಯಿಂಗ್ XI ನಿಂದ ಹೊರಬೀಳಲಿದ್ದಾರೆ ಈ ಆಟಗಾರ?

India Playing XI vs WI, 2nd ODI: ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಈಗಾಗಲೇ 1-0 ಮುನ್ನಡೆ ಪಡೆದುಕೊಂಡಿದೆ. ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ವೆಸ್ಟ್​ ಇಂಡೀಸ್​ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.

IND vs WI: ಇಂದು ಎರಡನೇ ಏಕದಿನ: ಭಾರತದ ಪ್ಲೇಯಿಂಗ್ XI ನಿಂದ ಹೊರಬೀಳಲಿದ್ದಾರೆ ಈ ಆಟಗಾರ?
IND vs WI 2nd ODI
Follow us
TV9 Web
| Updated By: Vinay Bhat

Updated on:Jul 24, 2022 | 9:02 AM

ಟ್ರಿನಿಡಾದ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವೆ ಎರಡನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಇದೇ ಮೈದಾನದಲ್ಲಿ ನಡೆದ ಪ್ರಥಮ ಪಂದ್ಯದಲ್ಲಿ ಭಾರತ 3 ರನ್​ಗಳ ರೋಚಕ ಜಯ ಸಾಧಿಸಿತ್ತು. ಹೀಗಾಗಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ (Team India) ಈಗಾಗಲೇ 1-0 ಮುನ್ನಡೆ ಪಡೆದುಕೊಂಡಿದೆ. ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ವೆಸ್ಟ್​ ಇಂಡೀಸ್​ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಉಳಿದ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಹೀಗಾಗಿ ದ್ವಿತೀಯ ಏಕದಿನ (2nd ODI) ಸಾಕಷ್ಟು ಕುತೂಹಲ ಕೆರಳಿಸಿದೆ.

ಮೊದಲ ಪಂದ್ಯದಲ್ಲಿ ಭಾರತ ತಂಡದ ಸ್ಕೋರ್ 300ರ ಗಡಿ ದಾಟಿತ್ತು. ಇಂದುಕೂಡ ಇದೇ ಪ್ರದರ್ಶನ ನೀಡಬೇಕಿದೆ. ನಾಯಕ ಶಿಖರ್ ಧವನ್ ಭರ್ಜರಿ ಫಾರ್ಮ್​ನಲ್ಲಿದ್ದರೆ ಶುಭ್ಮನ್ ಗಿಲ್ ಕೂಡ ಅರ್ಧಶತಕ ಸಿಡಿಸಿ ಭರವಸೆ ಮೂಡಿಸಿದ್ದಾರೆ. ಶ್ರೇಯಸ್ ಅಯ್ಯರ್ ಮೂರನೇ ಕ್ರಮಾಂಕಕ್ಕೆ ಫಿಟ್ ಆಗಿದ್ದಾರೆ. ಆದರೆ, ಕಳೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಸಂಜು ಸ್ಯಾಮ್ಸನ್ ಕಡೆಯಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬಂದಿರಲಿಲ್ಲ. ಸೂರ್ಯ 13 ಹಾಗೂ ಸಂಜು 12 ರನ್​ಗೆ ಬ್ಯಾಟ್ ಕೆಳಗಿಟ್ಟಿದ್ದರು. ಹೀಗಾಗಿ ಇವರು ಮಿಂಚಬೇಕಿದೆ.

ಅಂತೆಯೆ ದೀಪಕ್ ಹೂಡ ಹಾಗೂ ಅಕ್ಷರ್ ಪಟೇಲ್ ಕಡೆಯಿಂದಲೂ ಇನ್ನಷ್ಟು ಕೊಡುಗೆ ನಿರೀಕ್ಷಿಸಲಾಗಿದೆ. ಭಾರತದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಮೊಹಮ್ಮದ್ ಸಿರಾಜ್ ಹಾಗೂ ಯುಜ್ವೇಂದ್ರ ಚಹಲ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್ ಹಾಗೂ ಹೂಡ ಕೂಡ ಪ್ರಯತ್ನ ಪಟ್ಟಿದ್ದರು. ಆದರೆ, ಪ್ರಸಿದ್ಧ್ ಕೃಷ್ಣ ಕಳೆದ ಕೆಲವು ಪಂದ್ಯಗಳಿಂದ ವಿಕೆಟ್ ಕೀಳಲು ಪರದಾಡುತ್ತಿದ್ದಾರೆ. ಹೀಗಾಗಿ ತಂಡದಲ್ಲಿ ಒಂದು ಮುಖ್ಯ ಬದಲಾವಣೆ ನಿರೀಕ್ಷಿಸಲಾಗಿದೆ. ಪ್ರಸಿದ್ಧ್ ಬದಲಿಗೆ ಅರ್ಶ್​​ದೀಪ್ ಸಿಂಗ್ ಕಣಕ್ಕಿಳಿಯುವ ಸಂಭವವಿದೆ.

ಇದನ್ನೂ ಓದಿ
Image
Neeraj Chopra: ಬೆಳ್ಳಿ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ: ಇತಿಹಾಸ ನಿರ್ಮಿಸಿದ ಚಿನ್ನದ ಹುಡುಗ
Image
Sam Northeast: ಏಕಾಂಗಿಯಾಗಿ 410 ರನ್ ಗಳಿಸಿದ ಇಂಗ್ಲೆಂಡ್‌ ಬ್ಯಾಟರ್! 18 ವರ್ಷಗಳ ನಂತರ ಲಾರಾ ದಾಖಲೆ ನೆನಪು
Image
Hardik Pandya: ಏಕದಿನ ಕ್ರಿಕೆಟ್​ಗೆ ಹಾರ್ದಿಕ್ ಪಾಂಡ್ಯ ನಿವೃತ್ತಿ! ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಕೋಚ್ ರವಿಶಾಸ್ತ್ರಿ
Image
Happy Birthday Yuzvendra Chahal: ‘ನಾನು ನಿಮ್ಮ ದೊಡ್ಡ ಅಭಿಮಾನಿ’; ಚಹಲ್ ಹುಟ್ಟು ಹಬ್ಬಕ್ಕೆ ಮಡದಿಯಿಂದ ವಿಶೇಷ ಸಂದೇಶ

ಇತ್ತ ವೆಸ್ಟ್​ ಇಂಡೀಸ್ ಭಾರತ ನೀಡಿದ್ದ 309 ರನ್​ಗಳ ಟಾರ್ಗೆಟ್ ಹತ್ತಿರ ಬಂದು ಸೋತಿತ್ತು. ನಾಯಕ ನಿಕೋಲಸ್ ಪೂರನ್ ಕೂಡ ನಮಗೆ ಸೋತಂತೆ ಭಾಸವಾಗುತ್ತಿಲ್ಲ ಎಂದು ಪಂದ್ಯ ಮುಗಿದ ಬಳಿಕ ಹೇಳಿದ್ದರು. ಹೀಗಾಗಿ ಕೆರಿಬಿಯನ್ ಪಡೆಯನ್ನು ಕಡೆಗಣಿಸುವಂತಿಲ್ಲ. ಖೈಲ್ ಮೇರ್ಸ್, ಬ್ರಾಂಡನ್ ಕಿಂಗ್ ಹಾಗೂ ಶಮರ್ಥ್ ಬ್ರೂಕ್ಸ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಅಖೆಲ್ ಹುಸೈನ್ ಮತ್ತು ರೊಮಾರಿಯೊ ಶೆಫರ್ಡ್​ ಫಿನಿಶರ್​ಗಳಾಗಿ ಗುರುತಿಸಿಕೊಂಡಿದ್ದಾರೆ. ಬೌಲಿಂಗ್​ನಲ್ಲೂ ವಿಂಡೀಸ್ ಪಡೆ ಮಾರಕವಾಗಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆಯಲಿರುವ 138ನೇ ಅಂತರರಾಷ್ಟ್ರೀಯ ಏಕದಿನ ಪಂದ್ಯ ಇದಾಗಿದ್ದು, ಈ ಪೈಕಿ ಟೀಮ್ ಇಂಡಿಯಾ 68 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದರೆ, ವಿಂಡೀಸ್ 63 ಪಂದ್ಯಗಳಲ್ಲಿ ಗೆದ್ದಿದೆ, 4 ಪಂದ್ಯಗಳು ಯಾವುದೇ ಫಲಿತಾಂಶ ಕಂಡಿಲ್ಲ. ಉಳಿದ 2 ಪಂದ್ಯಗಳು ಡ್ರಾನಲ್ಲಿ ಮುಕ್ತಾಯಗೊಂಡಿವೆ.

ಭಾರತ ಸಂಭಾವ್ಯ ಪ್ಲೇಯಿಂಗ್ XI: ಶಿಖರ್ ಧವನ್ (ನಾಯಕ), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್‌), ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ/ಅರ್ಷದೀಪ್ ಸಿಂಗ್.

ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7 ಗಂಟೆಯಿಂದ ಶುರುವಾಗಲಿದೆ. ನೇರಪ್ರಸಾರ ಡಿಡಿ ನ್ಯಾಷನಲ್ ಚಾನೆಲ್​ನಲ್ಲಿ ಇರಲಿದೆ. ಹಾಗೆಯೇ ಸ್ಪೋರ್ಟ್ಸ್ ಮ್ಯಾಕ್ಸ್​ (SportsMax) ಚಾನೆಲ್​ನಲ್ಲೂ ಲೈವ್ ಇರಲಿದೆ. ಫ್ಯಾನ್‌ಕೋಡ್ ಆ್ಯಪ್​ ಮತ್ತು ವೆಬ್​ಸೈಟ್ ಮೂಲಕ ಲೈವ್ ಸ್ಟೀಮಿಂಗ್ ವೀಕ್ಷಿಸಬಹುದು.

Published On - 9:02 am, Sun, 24 July 22