Neeraj Chopra: ಬೆಳ್ಳಿ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ: ಇತಿಹಾಸ ನಿರ್ಮಿಸಿದ ಚಿನ್ನದ ಹುಡುಗ
World Athletics Championships 2022: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ರ ಜಾವೆಲಿನ್ ಥ್ರೋ ವಿಭಾಗದ ಫೈನಲ್ನಲ್ಲಿ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. 89.23 ಮೀಟರ್ ಎಸೆಯುವ ಮೂಲಕ ಎರಡನೇ ಸ್ಥಾನ ಅಲಂಕರಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ರ (World Athletics Championships 2022) ಜಾವೆಲಿನ್ ಥ್ರೋ ವಿಭಾಗದ ಫೈನಲ್ನಲ್ಲಿ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. 89.23 ಮೀಟರ್ ಎಸೆಯುವ ಮೂಲಕ ಎರಡನೇ ಸ್ಥಾನ ಅಲಂಕರಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ ನೀರಜ್ ಮೊದಲ ಪ್ರಯತ್ನದಲ್ಲಿ ಫೌಲ್ ಅನುಭವಿಸಿದರೆ ಎರಡನೇ ಯತ್ನದಲ್ಲಿ 82.39 ಮೀಟರ್, ಮೂರನೇ ಪ್ರಯತ್ನದಲ್ಲಿ 86.37 ಮೀಟರ್ ದೂರ ಎಸೆದರಷ್ಟೆ. ಆದರೆ, ನಾಲ್ಕನೇ ಪ್ರಯತ್ನದಲ್ಲಿ 88.13 ಎಸೆದು ದಿಢೀರ್ ಎರಡನೇ ಸ್ಥಾನಕ್ಕೆ ಜಿಗಿದರು. ಐದನೇ ಮತ್ತು ಆರನೇ ರೌಂಡ್ನಲ್ಲಿ ಮತ್ತೆ ಫೌಲ್ ಆಗಿದ್ದು ಹೊಡೆತ ಬಿದ್ದಿತು. ಆದರೂ 88.13 ಶ್ರೇಷ್ಠ ಸಾಧನೆಯ ದೂರ ಎಸೆದು ಅಂತಿಮವಾಗಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ. ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತಕ್ಕೆ ಇದು ಚೊಚ್ಚಲ ಪದಕವಾಗಿದೆ. ಭಾರತದ ಮತ್ತೊಬ್ಬ ಫೈನಲಿಸ್ಟ್ ರೋಹಿತ್ ಯಾದವ್ 77.96, 78.05, 78.72 ಮೀಟರ್ ದೂರ ಎಸೆದರು. ಗ್ರೆನೇಡಾದ ಆಂಡರ್ಸನ್ ಪೀಟರ್ಸ್ 90.54 ದೂರ ಎಸೆದು ಚಿನ್ನದ ಪದಕಕ್ಕೆ ಮುತ್ತಿಟ್ಟರು. ಜೆಕ್ ಜಾಕುಬ್ ವಾಡ್ಲೆಜ್ (88.09) ಮೂರನೇ ಸ್ಥಾನ ಅಲಂಕರಿಸಿದ್ದಾರೆ.
ಇದಕ್ಕೂ ಮುನ್ನ ನೀರಜ್ ಅರ್ಹತಾ ಸುತ್ತಿನಲ್ಲಿ 88.39 ಮೀ. ದೂರವನ್ನು ದಾಖಲಿಸಿ ಪದಕ ಸುತ್ತಿಗೆ ನೆಗೆದದ್ದು ವಿಶೇಷವಾಗಿತ್ತು. ಈ ಋತುವಿನಲ್ಲಿ ಅದ್ಭುತ ಫಲಿತಾಂಶಗಳನ್ನು ಕಂಡಿದ್ದ ಸ್ಟಾರ್ ಅಥ್ಲೀಟ್ ಎರಡು ಬಾರಿ ತನ್ನ ವೈಯಕ್ತಿಕ ಸಾಧನೆಯನ್ನೇ ಮುರಿದಿದ್ದಾರೆ. ಕಳೆದ ಜೂನ್ 14 ರಂದು ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ 89.30 ಮೀ. ಮತ್ತು ಕಳೆದ ತಿಂಗಳು 89.94 ಮೀ ಎಸೆದ ಸಾಧನೆ ಗೈದಿದ್ದರು. ಆದರೆ, ಈ ಬಾರಿ ಯಶಸ್ಸು ಸಿಗಲಿಲ್ಲ.
39 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಪದಕ ಗೆದ್ದಿದ್ದು ಕೇವಲ 1 ಬಾರಿ ಮಾತ್ರ. 2003 ರಲ್ಲಿ ಪ್ಯಾರಿಸ್ನಲ್ಲಿ ನಡೆದ ಕೂಟದಲ್ಲಿ ಲೆಜೆಂಡರಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಅವರು 6.70 ಮೀ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದಾದ ಬಳಿಕ ಯಾವುದೇ ಕ್ರೀಡಾಪಟುವು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆದಿಡಲು ಸಾಧ್ಯವಾಗಿಲ್ಲ. ಇದೀಗ ಸುದೀರ್ಘ ಇತಿಹಾಸದಲ್ಲಿ ದೇಶದ ಮೊಟ್ಟಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ವಿಶ್ವ ಚಾಂಪಿಯನ್ ಆಗುವ ಗುರಿಯನ್ನು ಹೊಂದಿದ್ದ ನೀರಜ್ ಚೋಪ್ರಾಗೆ ಬೆಳ್ಳಿ ದಕ್ಕಿದೆ.
ಅಣ್ಣು ರಾಣಿಗೆ 7ನೇ ಸ್ಥಾನ:
ಇನ್ನು ಮಹಿಳೆಯರ ಜಾವೆಲಿನ್ ಥ್ರೋ ಫೈನಲ್ನಲ್ಲಿ ಭಾರತದ ಅಣ್ಣು ರಾಣಿ ಏಳನೇ ಸ್ಥಾನ ಪಡೆದಿದ್ದಾರೆ. 61.12 ಮೀಟರ್ ದೂರ ಎಸೆದು ತಮ್ಮ ಅಭಿಯಾನವನ್ನು ಕೊನೆಗೊಳಿಸಿದರು. 56.18mಮೀಟರ್ ದೂರ ಎಸೆಯುವ ಮೂಲಕ ತನ್ನ ಫೈನಲ್ಗೆ ಲಗ್ಗೆಯಿಟ್ಟಿದ್ದ ಅಣ್ಣು ನಂತರ 61.12 ಮೀ ಎರಡನೇ ಎಸೆತದೊಂದಿಗೆ ಅದನ್ನು ಅನುಸರಿಸಿದರು. ತನ್ನ ಮುಂದಿನ ನಾಲ್ಕು ಪ್ರಯತ್ನಗಳಲ್ಲಿ ಅವರು ಮಾರ್ಕ್ಗೆ ಹತ್ತಿರವಾಗದ ಕಾರಣ ಎರಡನೇ ಎಸೆತವು ಅತ್ಯುತ್ತಮವಾಗಿತ್ತು.
Published On - 8:20 am, Sun, 24 July 22