ಸರಣಿಗೂ ಮುನ್ನ ಟೀಮ್ ಇಂಡಿಯಾಗೆ 15 ದಿನಗಳ ಕ್ಯಾಂಪ್..!

Team India: ಭಾರತ ತಂಡವು ಈ ವರ್ಷ ಆಡಲಿರುವುದು ಕೇವಲ 4 ಟೆಸ್ಟ್ ಪಂದ್ಯಗಳನ್ನು ಮಾತ್ರ. ಆಗಸ್ಟ್​ನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದಾದ ಬಳಿಕ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ 2 ಮ್ಯಾಚ್​ಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಈ ಸರಣಿಗಳಿಗೂ ಮುನ್ನ ವಿಶೇಷ ಶಿಬಿರ ಆಯೋಜಿಸಲು ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ.

ಸರಣಿಗೂ ಮುನ್ನ ಟೀಮ್ ಇಂಡಿಯಾಗೆ 15 ದಿನಗಳ ಕ್ಯಾಂಪ್..!
Shubman Gill

Updated on: Jan 05, 2026 | 11:56 AM

ಪ್ರತಿ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡದ ಆಟಗಾರರು 15 ದಿನಗಳ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂತಹದೊಂದು ವಿಶೇಷ ಯೋಜನೆಗೆ ಮನವಿ ಮಾಡಿರುವುದು ಟೀಮ್ ಇಂಡಿಯಾದ ನಾಯಕ ಶುಭ್​​ಮನ್ ಗಿಲ್. ಪ್ರತಿ ಟೆಸ್ಟ್ ಸರಣಿಗೂ ಮುನ್ನ ಕ್ಯಾಂಪ್​ ಆಯೋಜಿಸುವಂತೆ ಗಿಲ್ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಭಾರತ ಟೆಸ್ಟ್ ತಂಡದ ನಾಯಕನ ಈ ಮನವಿಗೆ ಬಿಸಿಸಿಐ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ವರದಿಯಾಗಿದೆ.

ಅದರಂತೆ ಮುಂಬರುವ ಟೆಸ್ಟ್ ಸರಣಿಗಳಿಗೂ ಮುನ್ನ ಟೀಮ್ ಇಂಡಿಯಾ 15 ದಿನಗಳ ಅಭ್ಯಾಸ ಶಿಬಿರಗಳನ್ನು ಆಯೋಜಿಸಲಿದೆ. ಈ ಯೋಜನೆಗಳ ಮೂಲಕ ಬಲಿಷ್ಠ ಟೆಸ್ಟ್ ತಂಡವನ್ನು ರೂಪಿಸುವ ಇರಾದೆಯಲ್ಲಿದ್ದಾರೆ ಶುಭ್​ಮನ್ ಗಿಲ್.

ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಗರಡಿಯಲ್ಲಿ ಭಾರತ ತಂಡವು ಏಕದಿನ ಮತ್ತು ಟಿ20 ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಇದಾಗ್ಯೂ ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾ ಪ್ರದರ್ಶನ ಅಷ್ಟಕ್ಕಷ್ಟೇ.

ಅದರಲ್ಲೂ ಇತ್ತೀಚೆಗೆ ನಡೆದ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-0 ಅಂತರದಿಂದ ಸೋಲನುಭವಿಸಿತ್ತು. ಇದಕ್ಕೂ ಮುನ್ನ ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ಹೀನಾಯವಾಗಿ ಭಾರತ ತಂಡ ಸೋಲೊಪ್ಪಿಕೊಂಡಿತ್ತು.

ಅದು ಕೂಡ 93 ವರ್ಷಗಳ ಬಳಿಕ ಎಂಬುದು ಕಟು ವಾಸ್ತವ. ಅಂದರೆ 93 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡವು ತವರಿನಲ್ಲಿ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಸೋತಿರಲಿಲ್ಲ. ಆದರೆ ಗಂಭೀರ್ ಕೋಚ್ ಆದ ಬಳಿಕ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ತವರಿನಲ್ಲಿ ಅವಮಾನಕರ ಸೋಲನುಭವಿಸಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು.

ಅಷ್ಟೇ ಅಲ್ಲದೆ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿರುವುದು ಬರೋಬ್ಬರಿ 408 ರನ್​ಗಳ ಅಂತರದಿಂದ. ಇದು ಭಾರತದ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು. ಅಂದರೆ ಇದಕ್ಕೂ ಮುನ್ನ ಟೀಮ್ ಇಂಡಿಯಾ ಟೆಸ್ಟ್ ಪಂದ್ಯದಲ್ಲಿ 400+ ರನ್​ಗಳ ಅಂತರದಿಂದ ಸೋತೇ ಇರಲಿಲ್ಲ.

ಈ ಸೋಲುಗಳಿಂದ ಭಾರೀ ಮುಖಭಂಗಕ್ಕೆ ಒಳಗಾಗಿರುವ ಟೀಮ್ ಇಂಡಿಯಾ ಇದೀಗ ಟೆಸ್ಟ್ ಕ್ರಿಕೆಟ್​ಗಾಗಿ ಹೊಸ ಯೋಜನೆ ರೂಪಿಸಿದೆ. ಅದರಂತೆ ಭಾರತ ತಂಡದ ಮುಂದಿನ ಟೆಸ್ಟ್ ಸರಣಿಗಳಿಗೂ ಮುನ್ನ 15 ದಿನಗಳ ಕ್ಯಾಂಪ್ ನಡೆಯಲಿದೆ.

ಈ ಅಭ್ಯಾಸ ಶಿಬಿರಗಳ ಮೂಲಕ ಭಾರತ ತಂಡದ ಯೋಜನೆಗಳನ್ನು ರೂಪಿಸಲು ಶುಭ್​ಮನ್ ಗಿಲ್​ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲು ಬಿಸಿಸಿಐ ಸಿದ್ಧವಾಗಿದೆ. ಈ ಮೂಲಕ ಯುವ ಪಡೆಯ ಹೊಸ ಯೋಜನೆಗಳೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಮತ್ತೆ ಪ್ರಭಾವ ಬೀರಲು ಬಿಸಿಸಿಐ ಕೂಡ ಪ್ಲ್ಯಾನ್ ರೂಪಿಸುತ್ತಿದೆ.