
ಓವಲ್ ಟೆಸ್ಟ್ (Oval Test) ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India), ಎರಡನೇ ದಿನದಾಟದ ಮೊದಲ ಸೆಷನ್ನಲ್ಲಿ ಕೇವಲ 20 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ 224 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. 204 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಮೊದಲ ದಿನದಾಟವನ್ನು ಮುಗಿಸಿದ್ದ ಟೀಂ ಇಂಡಿಯಾ, ಎರಡನೇ ದಿನದಾಟದಲ್ಲಿ ಕೇವಲ 5.4 ಓವರ್ ಬ್ಯಾಟ್ ಮಾಡಿ 20 ರನ್‌ಗಳಿಗೆ ಎಲ್ಲಾ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ಕರುಣ್ ನಾಯರ್ (Karun Nair) ಅತ್ಯಧಿಕ 57 ರನ್ ಬಾರಿಸಿದರೆ, ಇಂಗ್ಲೆಂಡ್ ಪರ ವೇಗಿ ಗಸ್ ಅಟ್ಕಿನ್ಸನ್ 5 ವಿಕೆಟ್ಗಳ ಗೊಂಚಲು ಪಡೆದರು.
ಮೇಲೆ ಹೇಳಿದಂತೆ ಎರಡನೇ ದಿನದಾಟದಲ್ಲಿ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅರ್ಧ ಗಂಟೆಯೊಳಗೆ ಇಡೀ ತಂಡ ಮೊದಲ ಇನ್ನಿಂಗ್ಸ್ನಲ್ಲಿ 224 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ದಿನದಾಟದಂತ್ಯಕ್ಕೆ ಕರುಣ್ ನಾಯರ್ 98 ಎಸೆತಗಳಲ್ಲಿ 52 ರನ್ ಮತ್ತು ವಾಷಿಂಗ್ಟನ್ ಸುಂದರ್ 45 ಎಸೆತಗಳಲ್ಲಿ 19 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಆದರೆ ಎರಡನೇ ದಿನದಾಟದಲ್ಲಿ ಜೋಶ್ ಟಂಗ್ ಮೊದಲು ಕರುಣ್ ನಾಯರ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು. ಅಂತಿಮವಾಗಿ ಕರುಣ್ 109 ಎಸೆತಗಳಲ್ಲಿ ಎಂಟು ಬೌಂಡರಿಗಳ ಸಹಾಯದಿಂದ 57 ರನ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು.
ಇದರ ನಂತರ, ಗಸ್ ಅಟ್ಕಿನ್ಸನ್ ವಾಷಿಂಗ್ಟನ್ ಸುಂದರ್ ಅವರನ್ನು ಬಲಿಪಶುವನ್ನಾಗಿ ಮಾಡಿದರು. ಸುಂದರ್ 55 ಎಸೆತಗಳಲ್ಲಿ 26 ರನ್ ಗಳಿಸಿ ಔಟಾದರು. ಏಳನೇ ವಿಕೆಟ್‌ಗೆ ಇಬ್ಬರ ನಡುವೆ 65 ರನ್‌ಗಳ ಪಾಲುದಾರಿಕೆ ಇತ್ತು. ಇದರ ನಂತರ, ಬ್ಯಾಟಿಂಗ್‌ಗೆ ಬಂದ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಖಾತೆ ತೆರೆಯದೆಯೇ ಔಟಾದರು. ಆಕಾಶ್ ದೀಪ್ ಖಾತೆ ತೆರೆಯದೆ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ, ಗಸ್ ಅಟ್ಕಿನ್ಸನ್ ಐದು ವಿಕೆಟ್‌ಗಳನ್ನು ಪಡೆದರೆ, ಜೋಶ್ ಟಂಗ್ ಮೂರು ವಿಕೆಟ್‌ಗಳನ್ನು ಪಡೆದರು. ಉಳಿದಂತೆ ಕ್ರಿಸ್ ವೋಕ್ಸ್ ಒಂದು ವಿಕೆಟ್ ಪಡೆದರು.
ಇಂಗ್ಲೆಂಡ್ಗೆ ಬಿಗ್ ಶಾಕ್; ಗಾಯದಿಂದ ಐದನೇ ಟೆಸ್ಟ್ನಿಂದ ಹೊರ ಹೋದ ಖ್ಯಾತ ಬೌಲರ್
ಮೊದಲ ದಿನದಾಟದಲ್ಲಿ ಕೆಎಲ್ ರಾಹುಲ್ 40 ಎಸೆತಗಳನ್ನು ಆಡಿ 14 ರನ್ ಗಳಿಸಿ ಔಟಾದರೆ, ನಾಯಕ ಗಿಲ್ 34 ಎಸೆತಗಳಲ್ಲಿ 21 ರನ್ ಗಳಿಸಿ ರನೌಟ್ ಆದರು. ಸಾಯಿ ಸುದರ್ಶನ್ 108 ಎಸೆತಗಳನ್ನು ಆಡಿ 38 ರನ್ ಗಳಿಸಿ ಔಟಾದರೆ, ಜುರೆಲ್ ಮತ್ತು ಸುಂದರ್ ಕೂಡ ಸೆಟ್ ಆದ ನಂತರ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾದ ಕೊನೆಯ ಮೂವರು ಬ್ಯಾಟ್ಸ್‌ಮನ್‌ಗಳು ತಮ್ಮ ಖಾತೆಯನ್ನು ಸಹ ತೆರೆಯಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:08 pm, Fri, 1 August 25