ಆಸ್ಟ್ರೇಲಿಯದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ಗೆ (T20 World Cup 2022) ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಅಭ್ಯಾಸ ಪಂದ್ಯಗಳು ಆರಂಭವಾಗಿದ್ದು, ವಿಶ್ವಕಪ್ ಆಡುವ ತಂಡಗಳೆಲ್ಲ ಕಾಂಗರೂ ನಾಡಿಗೆ ಪ್ರಯಾಣ ಬೆಳೆಸಿವೆ. ಈ ಮಧ್ಯೆ ಪ್ರಮುಖ ಮಲ್ಟಿಪ್ಲೆಕ್ಸ್ ಐನಾಕ್ಸ್ (INOX), ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಆಡುವ ಎಲ್ಲಾ ಪಂದ್ಯಗಳನ್ನು ದೇಶಾದ್ಯಂತ ಇರುವ ಐನಾಕ್ಸ್ ಚಿತ್ರ ಮಂದಿರಗಳಲ್ಲಿ ನೇರ ಪ್ರಸಾರ ಮಾಡಲಿದೆ. ಈ ಸಂಬಂಧ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಐಎನ್‌ಎಕ್ಸ್ ಲೀಸರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಐಎನ್‌ಎಕ್ಸ್ ಲೀಸರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ವಿಶಾಲ್ ಈ ಬಗ್ಗೆ ಮಾತನಾಡಿ, ಸಿನಿಮಾ ಹಾಲ್ಗಳಲ್ಲಿ ಕ್ರಿಕೆಟ್ ಅನ್ನು ಪ್ರದರ್ಶಿಸುವ ಮೂಲಕ ಬೆಳ್ಳಿ ಪರದೆಯ ಮೇಲೆ ಕ್ರಿಕೆಟ್ನ ರೋಮಾಂಚಕ ಅನುಭವನ್ನು ಭಾರತದ ಅಭಿಮಾನಿಗಳಿಗೆ ನೀಡಲು ಉತ್ಸುಕರಾಗಿದ್ದೇವೆ. ಹೀಗಾಗಿ ದೇಶದ 25 ಕ್ಕೂ ಹೆಚ್ಚು ನಗರಗಳಲ್ಲಿ ಐನಾಕ್ಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಪಂದ್ಯಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ವಿಶಾಲ್ ಹೇಳಿಕೊಂಡಿದ್ದಾರೆ.
ಐನಾಕ್ಸ್ ಸಿನಿಮಾ ಹಾಲ್ಗಳಲ್ಲಿ ನೇರ ಪ್ರಸಾರ
ಇಂಡಿಯಾ ಆಡಲಿರುವ ಎಲ್ಲಾ ಗ್ರೂಪ್ ಪಂದ್ಯಗಳನ್ನು ಐನಾಕ್ಸ್ ಸಿನಿಮಾ ಹಾಲ್ಗಳಲ್ಲಿ ನೇರ ಪ್ರಸಾರ ಮಾಡಲಿದ್ದು, ಅಕ್ಟೋಬರ್ 23 ರಂದು ಬದ್ದವೈರಿ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ರೋಹಿತ್ ಪಡೆ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಅಲ್ಲದೆ ಸೆಮಿಫೈನಲ್ ಮತ್ತು ಅಂತಿಮ ಪಂದ್ಯವನ್ನೂ ಸಹ ನೇರ ಪ್ರಸಾರ ಮಾಡುವುದಾಗಿ ಐನಾಕ್ಸ್ ತಿಳಿಸಿದೆ.
ಟಿ20 ವಿಶ್ವಕಪ್‌ನ ಎಂಟನೇ ಆವೃತ್ತಿಯು ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಸೂಪರ್ 12 ಪಂದ್ಯಗಳು ಅಕ್ಟೋಬರ್ 22 ರಂದು ಪ್ರಾರಂಭವಾಗಲಿವೆ. ಫೈನಲ್ ಪಂದ್ಯವನ್ನು ನವೆಂಬರ್ 13 ರಂದು ಮೆಲ್ಬೋರ್ನ್‌ನಲ್ಲಿ ನಿಗದಿಪಡಿಸಲಾಗಿದೆ.
ಇನ್ನು ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಆಡಲಿರುವ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಟೀಂ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಆ ಬಳಿಕ ಅಕ್ಟೋಬರ್ 27 ರಂದು ಭಾರತ ಅರ್ಹತಾ ಸುತ್ತಲ್ಲಿ ಎ ಗುಂಪಿನ ರನ್ನರ್ ಅಪ್ ತಂಡವನ್ನು ಎದುರಿಸಲಿದೆ. ಇದರ ನಂತರ ಅಕ್ಟೋಬರ್ 30 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ನಡೆಯಲಿದೆ. ನವೆಂಬರ್ 2 ರಂದು ಬಾಂಗ್ಲಾದೇಶವನ್ನು ಎದುರಿಸಲಿದ್ದು, ನವೆಂಬರ್ 6 ರಂದು ಬಿ ಗುಂಪಿನಿಂದ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಪಂದ್ಯವನ್ನಾಡಲಿದೆ.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.
ಗಮನಿಸಬೇಕಾದದ್ದು- ದೀಪಕ್ ಚಹರ್ ಟಿ20 ವಿಶ್ವಕಪ್ನಿಂದ ಹೊರಬಿದ್ದಿರುವ ಬಗ್ಗೆ ಹಾಗೂ ಶಾರ್ದೂಲ್ ಠಾಕೂರ್ ಅವರ ಸ್ಥಾನದಲ್ಲಿ ಆಯ್ಕೆಯಾದ ಬಗ್ಗೆ ಇದುವರೆಗೆ ಬಿಸಿಸಿಐನಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಹಾಗೆಯೇ ಮೊಹಮ್ಮದ್ ಸಿರಾಜ್ ಆಯ್ಕೆಯ ಬಗ್ಗೆಯೂ ಬಿಸಿಸಿಐ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ.
Published On - 12:34 pm, Wed, 12 October 22