India Tour of New Zealand: ಟಿ20 ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ಪ್ರವಾಸ ಮಾಡಲಿದೆ ಭಾರತ; ವೇಳಾಪಟ್ಟಿ ಪ್ರಕಟ
India Tour of New Zealand: ಭಾರತ ಮತ್ತು ನ್ಯೂಜಿಲೆಂಡ್ ನಡುವೆ 13 ದಿನಗಳಲ್ಲಿ ಒಟ್ಟು 6 ಕ್ರಿಕೆಟ್ ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಮೂರು ಟಿ20 ಪಂದ್ಯ ಮತ್ತು 3 ಏಕದಿನ ಪಂದ್ಯಗಳು ಸೇರಿವೆ.
ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ ಪ್ರಸ್ತುತ ಟಿ20 ವಿಶ್ವಕಪ್ಗಾಗಿ (T20 World Cup 2022) ಆಸ್ಟ್ರೇಲಿಯಾದಲ್ಲಿದೆ. ಹಾಗೆಯೇ ಶಿಖರ್ ಧವನ್ (Shikhar Dhawan) ನೇತೃತ್ವದ ಭಾರತ ಬಿ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಏಕದಿನ ಸರಣಿಯನ್ನು ಗೆದ್ದು ಬೀಗಿದೆ. ಈಗ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಆಡಲಿರುವ ಮೊದಲ ಸರಣಿಯ ಬಗ್ಗೆ ಮಾಹಿತಿ ಹೊರಬಿದ್ದಿದೆ. ಒಂದು ವೇಳೆ ಭಾರತ ತಂಡ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದರೆ, ಆ ಬಳಿಕ ಕೇವಲ ನಾಲ್ಕು ದಿನಗಳ ನಂತರ ರೋಹಿತ್ ಪಡೆ ಕಿವೀಸ್ ವಿರುದ್ಧ ಸರಣಿಯನ್ನು ಆಡಬೇಕಾಗುತ್ತದೆ. ಕ್ರಿಕ್‌ಬಜ್ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಮುಗಿದ ನಂತರ, ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಯಲ್ಲಿ ಸೆಣಸಲಿದೆ.
ಆಸ್ಟ್ರೇಲಿಯಾದಲ್ಲಿ 2022 ರ ಟಿ20 ವಿಶ್ವಕಪ್ ನಂತರ, ಟೀಮ್ ಇಂಡಿಯಾ ನ್ಯೂಜಿಲೆಂಡ್‌ಗೆ ತೆರಳಲಿದ್ದು, ಅಲ್ಲಿ ನವೆಂಬರ್ 18 ರಂದು ಉಭಯ ತಂಡಗಳ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ 13 ದಿನಗಳಲ್ಲಿ ಒಟ್ಟು 6 ಕ್ರಿಕೆಟ್ ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಮೂರು ಟಿ20 ಪಂದ್ಯ ಮತ್ತು 3 ಏಕದಿನ ಪಂದ್ಯಗಳು ಸೇರಿವೆ. ಟಿ20 ವಿಶ್ವಕಪ್ 2022 ರ ಫೈನಲ್ ಪಂದ್ಯವು ನವೆಂಬರ್ 13 ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಆದ್ದರಿಂದ ಕ್ರಿಕ್‌ಬಜ್ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ವಿಶ್ವಕಪ್ ಮುಗಿದ ನಂತರ ಭಾರತದ ನ್ಯೂಜಿಲೆಂಡ್ ಪ್ರವಾಸ ಪ್ರಾರಂಭವಾಗಲಿದೆ.
ಕಳೆದ ವರ್ಷ ಯುಎಇಯಲ್ಲಿ ಟಿ20 ವಿಶ್ವಕಪ್ ಪಂದ್ಯ ಆಡಿದ ಬಳಿಕ ಕಿವೀಸ್ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ನವೆಂಬರ್ 14 ರಂದು ವಿಶ್ವಕಪ್ ಫೈನಲ್ ಆಡಿದ್ದ ಕಿವೀಸ್ ತಂಡ ಎರಡು ದಿನಗಳ ನಂತರ ನವೆಂಬರ್ 17 ರಂದು ಟಿ20 ಸರಣಿಯ ಮೊದಲ ಪಂದ್ಯವನ್ನು ಭಾರತದ ವಿರುದ್ಧ ಆಡಿತ್ತು.
ಇನ್ನು ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಆಡಲಿರುವ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಟೀಂ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಆ ಬಳಿಕ ಅಕ್ಟೋಬರ್ 27 ರಂದು ಭಾರತ ಅರ್ಹತಾ ಸುತ್ತಲ್ಲಿ ಎ ಗುಂಪಿನ ರನ್ನರ್ ಅಪ್ ತಂಡವನ್ನು ಎದುರಿಸಲಿದೆ. ಇದರ ನಂತರ ಅಕ್ಟೋಬರ್ 30 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ನಡೆಯಲಿದೆ. ನವೆಂಬರ್ 2 ರಂದು ಬಾಂಗ್ಲಾದೇಶವನ್ನು ಎದುರಿಸಲಿದ್ದು, ನವೆಂಬರ್ 6 ರಂದು ಬಿ ಗುಂಪಿನಿಂದ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಪಂದ್ಯವನ್ನಾಡಲಿದೆ.
ಭಾರತದ- ನ್ಯೂಜಿಲೆಂಡ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ
ಟಿ20 ಸರಣಿ
1 ನೇ T20I – ನವೆಂಬರ್ 18 ವೆಲ್ಲಿಂಗ್ಟನ್‌ನಲ್ಲಿ
2 ನೇ T20I – ನವೆಂಬರ್ 20 ಮೌಂಟ್ ಮೌಂಗನುಯಿ ಬೇ ಓವಲ್
3ನೇ T20I – ನವೆಂಬರ್ 22 ನೇಪಿಯರ್
ಏಕದಿನ ಸರಣಿ
ಮೊದಲ ODI – ನವೆಂಬರ್ 25 ಆಕ್ಲೆಂಡ್
ಎರಡನೇ ODI – ನವೆಂಬರ್ 27 ಹ್ಯಾಮಿಲ್ಟನ್
ಮೂರನೇ ODI – ನವೆಂಬರ್ 30 ಕ್ರೈಸ್ಟ್‌ಚರ್ಚ್
Published On - 11:08 am, Wed, 12 October 22