AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗಳ ಆಗಿಯೇ ಆಗುತ್ತೆ ಅಂತ ಮೊದಲೇ ಗೊತ್ತಿತ್ತು: ಅನಿಲ್ ಚೌಧರಿ

ಐಪಿಎಲ್ 2013ರ 12ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದಾಗ ಕೆಕೆಆರ್ ತಂಡದ ನಾಯಕ ಗೌತಮ್ ಗಂಭೀರ್ ಅತಿಯಾಗಿ ಸಂಭ್ರಮಿಸಿದ್ದರು. ಇದರಿಂದ ಆಕ್ರೋಶಗೊಂಡ ಕೊಹ್ಲಿ ಮೈದಾನದಲ್ಲೇ ಗಂಭೀರ್ ಜೊತೆ ಜಗಳಕ್ಕಿಳಿದಿದ್ದರು.

ಜಗಳ ಆಗಿಯೇ ಆಗುತ್ತೆ ಅಂತ ಮೊದಲೇ ಗೊತ್ತಿತ್ತು: ಅನಿಲ್ ಚೌಧರಿ
Virat Kohli - Gautam GambhirImage Credit source: IPL
ಝಾಹಿರ್ ಯೂಸುಫ್
|

Updated on: Aug 04, 2026 | 3:09 PM

Share

ಕ್ರಿಕೆಟ್ ಮೈದಾನದಲ್ಲಿ ದಾಖಲೆಗಳು ಸೃಷ್ಟಿಯಾಗುತ್ತವೆ, ಹಳೇ ದಾಖಲೆಗಳು ಧೂಳೀಪಟವಾಗುತ್ತವೆ. ಆದರೆ, ಕೆಲವು ಆನ್-ಫೀಲ್ಡ್ ಘಟನೆಗಳು ಮಾತ್ರ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಅಚ್ಚೊತ್ತಿಬಿಡುತ್ತವೆ. ಅಂತಹದ್ದೇ ಒಂದು ಹೈ-ವೋಲ್ಟೇಜ್ ಘಟನೆಯೇ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಮುಖಾಮುಖಿ. 2013ರ ಆ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಬ್ಬರು ದಿಲ್ಲಿ ಸಿಂಹಗಳು ಪರಸ್ಪರ ಅಬ್ಬರಿಸಿದ ಆ ಕ್ಷಣ, ಕ್ರಿಕೆಟ್ ಲೋಕದಲ್ಲಿ ಎಂದಿಗೂ ಮರೆಯಲಾಗದ ಇತಿಹಾಸ. ಈ ಐತಿಹಾಸಿಕ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ಮಾಜಿ ಅಂತರರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ, ಇತ್ತೀಚೆಗೆ ಜಿಯೋಸ್ಟಾರ್ (JioStar) ವಾಹಿನಿಯ ‘ಚೀಕಿ ಸಿಂಗಲ್ಸ್’ ಕಾರ್ಯಕ್ರಮದಲ್ಲಿ ಅಂದಿನ ಘಟನೆಯ ಹಿಂದಿನ ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಜಗಳ ಆಗಿಯೇ ಆಗುತ್ತದೆ ಎಂದು ಗೊತ್ತಿತ್ತು!

ಈ ಬಗ್ಗೆ ಮಾತನಾಡಿದ ಅನಿಲ್ ಚೌಧರಿ,

ಆ ಪಂದ್ಯದಲ್ಲಿ ಜಗಳ ಆಗೇ ಆಗುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು. ಏಕೆಂದರೆ ಉತ್ತರ ಭಾರತದ (ವಿಶೇಷವಾಗಿ ದೆಹಲಿ ಮೂಲದ) ಆಟಗಾರರು ಮೈದಾನದಲ್ಲಿ ಅತಿ ಹೆಚ್ಚು ಆಕ್ರಮಣಶೀಲತೆಯಿಂದ ಆಡುತ್ತಾರೆ. ಹೀಗಾಗಿ ಈ ಇಬ್ಬರಿಂದ ಆಕ್ರಮಣಕಾರಿ ವರ್ತನೆ ಮೂಡಿ ಬರುತ್ತದೆ ಎಂದು ನಾನು ಊಹಿಸಿದ್ದೆ. ಅದರಂತೆ ಇಬ್ಬರೂ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದರು ಎಂದು ಅನಿಲ್ ಚೌಧರಿ ಹೇಳಿದ್ದಾರೆ.

ಆಕ್ರಮಣಕಾರಿ ಆಟ ಬೇಕು, ಮಿತಿ ಇರಬೇಕು!

ಮೈದಾನದಲ್ಲಿ ಆಟಗಾರರ ಆಕ್ರಮಣಕಾರಿ ಸ್ವಭಾವದ ಬಗ್ಗೆ ಮಾತನಾಡಿದ ಅನಿಲ್ ಚೌಧರಿ, ಮೈದಾನದಲ್ಲಿ ಆಟಗಾರರಿಗೆ ಅತಿಯಾದ ನಿರ್ಬಂಧಗಳನ್ನು ಹೇರಿದರೆ, ಅವರ ಅತ್ಯುತ್ತಮ ಪ್ರದರ್ಶನ ಹೊರಬರುವುದಿಲ್ಲ. ಆಟಗಾರರಲ್ಲಿ ಇಂತಹ ಜಿದ್ದಾಜಿದ್ದಿನ ಕಿಚ್ಚು ಇರಬೇಕು, ಆಗಲೇ ಪಂದ್ಯಗಳು ರೋಚಕವಾಗಿರುತ್ತವೆ. ಆದರೆ ಪ್ರತಿಯೊಂದಕ್ಕೂ ಒಂದು ಮಿತಿ ಇರಬೇಕು ಮತ್ತು ಆ ಮಿತಿಯನ್ನು ಯಾರೂ ದಾಟಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಮನಸ್ಸಿನಲ್ಲಿ ದ್ವೇಷವಿಲ್ಲ!

ವಿರಾಟ್ ಕೊಹ್ಲಿ ಜೂನಿಯರ್ ಕ್ರಿಕೆಟ್ ಆಡುತ್ತಿದ್ದ ದಿನಗಳಿಂದಲೂ ನಾನು ಅವರನ್ನು ನೋಡುತ್ತಿದ್ದೇನೆ. ಅವರು ಮೈದಾನದಲ್ಲಿ ಭಾವನಾತ್ಮಕವಾಗಿ ಬೇಗನೆ ಪ್ರತಿಕ್ರಿಯಿಸುತ್ತಾರೆಯೇ ಹೊರತು, ಅವರ ಮನಸ್ಸಿನಲ್ಲಿ ಯಾರ ಮೇಲೂ ವೈಯಕ್ತಿಕ ದ್ವೇಷ ಅಥವಾ ಕೆಟ್ಟ ಆಲೋಚನೆ ಇರುವುದಿಲ್ಲ. ಅಂಪೈರ್‌ಗಳ ತೀರ್ಪು ಸರಿಯಾಗಿದ್ದಾಗ ಕೊಹ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ದೊಡ್ಡ ಗುಣ ಹೊಂದಿದ್ದಾರೆ ಎಂದು ಇದೇ ವೇಳೆ ಅನಿಲ್ ಚೌಧರಿ ಸ್ಮರಿಸಿದ್ದಾರೆ.

2013ರಲ್ಲಿ ಏನಾಗಿತ್ತು?

ಏಪ್ರಿಲ್ 11, 2013 ರಂದು ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೊಹ್ಲಿ ಔಟಾದಾಗ ಕೆಕೆಆರ್ ನಾಯಕ ಗಂಭೀರ್ ಅತಿಯಾಗಿ ಸಂಭ್ರಮಿಸಿದ್ದರು. ಇದರಿಂದ ಆಕ್ರೋಶಗೊಂಡ ಕೊಹ್ಲಿ ಮೈದಾನದಲ್ಲೇ ಗಂಭೀರ್ ಜೊತೆ ಮಾತಿನ ಚಕಮಕಿಗೆ ಇಳಿದಿದ್ದರು. ಇಬ್ಬರೂ ಆಟಗಾರರು ಮುಖಾಮುಖಿ ಜಗಳಕ್ಕೆ ನಿಂತಾಗ, ಕೆಕೆಆರ್ ಆಟಗಾರ ರಜತ್ ಭಾಟಿಯಾ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದರು. ಈ ಘಟನೆಯನ್ನೇ ಇದೀಗ ಅಂದು ಅಂಪೈರ್​ ಆಗಿದ್ದ ಅನಿಲ್ ಚೌಧರಿ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ಭಾರತ ಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ!

ಇನ್ನು 2013 ಮತ್ತು 2023ರ ಐಪಿಎಲ್ ಆವೃತ್ತಿಗಳಲ್ಲಿ ಕಡು ವೈರಿಗಳಂತೆ ಮುಖಾಮುಖಿಯಾಗಿದ್ದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್, ಪ್ರಸ್ತುತ ಭಾರತ ತಂಡದಲ್ಲಿ ಕ್ರಮವಾಗಿ ಹಿರಿಯ ಆಟಗಾರ ಮತ್ತು ಮುಖ್ಯ ತರಬೇತುದಾರನಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಮಾಜಿ ಅಂಪೈರ್ ಅನಿಲ್ ಚೌಧರಿ ಹೇಳಿರುವಂತೆ, ಅವರಿಬ್ಬರ ನಡುವಿನ ಹಳೆಯ ಕಹಿ ನೆನಪುಗಳು ಈಗ ಸಂಪೂರ್ಣವಾಗಿ ಮರೆಯಾಗಿದ್ದು, ಭಾರತೀಯ ಕ್ರಿಕೆಟ್‌ನ ಒಳಿತಿಗಾಗಿ ಇಬ್ಬರೂ ಒಟ್ಟಾಗಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ.

Follow Us