AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ!

India vs Sri Lanka Test: ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಗಾಲೆಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದರೆ, ದ್ವಿತೀಯ ಪಂದ್ಯವು ಆಗಸ್ಟ್ 23 ರಂದು ಕೊಲಂಬೋದ ಎಸ್‌ಎಸ್‌ಸಿ ಮೈದಾನದಲ್ಲಿ ಜರುಗಲಿದೆ.

ಭಾರತ ಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ!
Team India
ಝಾಹಿರ್ ಯೂಸುಫ್
|

Updated on:Aug 04, 2026 | 11:53 AM

Share

ಶುಭ್​ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಆಗಸ್ಟ್ 15 ರಿಂದ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಮಹತ್ವದ ಟೆಸ್ಟ್ ಸರಣಿಯನ್ನು ಆಡಲು ಸಜ್ಜಾಗುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪುವ ದೃಷ್ಟಿಯಿಂದ ಭಾರತಕ್ಕೆ ಈ ಸರಣಿ ಅತ್ಯಂತ ನಿರ್ಣಾಯಕ. ಆದರೆ, ಇತಿಹಾಸ ಮತ್ತು ಪ್ರಸ್ತುತ ಪರಿಸ್ಥಿತಿಗಳನ್ನು ಅವಲೋಕಿಸಿದರೆ, ಶ್ರೀಲಂಕಾ ನೆಲದಲ್ಲಿ ಲಂಕಾ ಪಡೆಯನ್ನು ಸೋಲಿಸುವುದು ಭಾರತಕ್ಕೆ ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಆರಂಭದಲ್ಲೇ ಆಘಾತ!

ಸರಣಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡದ ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಎಡ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ. ಬುಮ್ರಾ ಅವರ ಅನುಪಸ್ಥಿತಿಯು ಭಾರತದ ವೇಗದ ಬೌಲಿಂಗ್ ವಿಭಾಗದ ಬಲವನ್ನು ಕುಗ್ಗಿಸಿದೆ ಮತ್ತು ಯುವ ವೇಗಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳುವಂತೆ ಮಾಡಿದೆ.

ಶ್ರೀಲಂಕಾ ಸರಣಿ ಏಕೆ ಕಠಿಣ ಸವಾಲು?

ಸರಣಿಯ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 15 ರಿಂದ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಗಾಲೆ ಪಿಚ್‌ಗಳು ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ಅತಿಯಾದ ನೆರವು ನೀಡುತ್ತವೆ. ಇಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ. ಅಂದರೆ ಮೊದಲ ಪಂದ್ಯದಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸುವುದು ಖಚಿತ.

ಇದರ ಜೊತೆ ಪಂದ್ಯದ ಮೇಲೆ ಸ್ಪಿನ್ನರ್​ಗಳು ಪ್ರಭಾವ ಬೀರಲಿದ್ದಾರೆ. ಅತ್ತ ಶ್ರೀಲಂಕಾದ ಪ್ರಮುಖ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ತವರಿನ ಪಿಚ್‌ಗಳಲ್ಲಿ ಅತ್ಯಂತ ಅಪಾಯಕಾರಿ ಬೌಲರ್. ಪ್ರವಾಸಿ ಬ್ಯಾಟರ್‌ಗಳನ್ನು ಸುಲಭವಾಗಿ ಸಿಲುಕಿಸುವ ಕಲೆ ಅವರಿಗೆ ಕರಗತವಾಗಿದೆ.

ಶ್ರೀಲಂಕಾ ಇತಿಹಾಸದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಹಳೆಯ ದಾಖಲೆಗಳನ್ನೇ ಮುರಿಯುವ ಹಾದಿಯಲ್ಲಿರುವ ಪ್ರಭಾತ್ ಜಯಸೂರ್ಯ, ಗಾಲೆ ಪಿಚ್‌ನಲ್ಲಿ ಪ್ರವಾಸಿ ಬ್ಯಾಟರ್‌ಗಳನ್ನು ಸಂಪೂರ್ಣವಾಗಿ ಕಟ್ಟಿಹಾಕಿದ್ದಾರೆ. ಇದಕ್ಕೆ ಸಾಕ್ಷಿ ಅವರ ಅಂಕಿ ಅಂಶಗಳು.

ಪ್ರಭಾತ್ ಜಯಸೂರ್ಯ ಗಾಲೆ ಪಿಚ್​ನಲ್ಲಿ ಈವರೆಗೆ ಆಡಿರುವುದು 15 ಪಂದ್ಯಗಳು ಮಾತ್ರ. ಈ ವೇಳೆ ಪಡೆದಿರುವ ಒಟ್ಟು ವಿಕೆಟ್​ಗಳ ಸಂಖ್ಯೆ ಬರೋಬ್ಬರಿ 98 ಎಂದರೆ ನಂಬಲೇಬೇಕು. ಇದರ ನಡುವೆ 9 ಬಾರಿ 5 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿಯೇ ಪ್ರಭಾತ್​ರನ್ನು ಎದುರಿಸುವುದು ಟೀಮ್ ಇಂಡಿಯಾ ಬ್ಯಾಟರ್​ಗಳ ಮುಂದಿರುವ ಅತೀ ದೊಡ್ಡ ಸವಾಲು.

ಶ್ರೀಲಂಕಾದ ವಿಶಿಷ್ಟ ಹವಾಮಾನವು ವಿದೇಶಿ ಆಟಗಾರರ ದೈಹಿಕ ಸಾಮರ್ಥ್ಯಕ್ಕೆ ಒಡ್ಡುವ ಅತಿ ದೊಡ್ಡ ಸವಾಲಾಗಿದೆ. ಇಲ್ಲಿನ ವಿಪರೀತ ಸೆಕೆ ಮತ್ತು ಅತಿಯಾದ ಆರ್ದ್ರತೆಯಿಂದಾಗಿ ಆಟಗಾರರು ಮೈದಾನದಲ್ಲಿ ಬೇಗನೆ ದಣಿಯುತ್ತಾರೆ ಹಾಗೂ ನಿರ್ಜಲೀಕರಣಕ್ಕೆ ಒಳಗಾಗುತ್ತಾರೆ. ಆದ್ದರಿಂದ, ಐದು ದಿನಗಳ ಟೆಸ್ಟ್ ಪಂದ್ಯದಲ್ಲಿ ಆಟಗಾರರು ತಮ್ಮ ಶಕ್ತಿ ಮತ್ತು ಏಕಾಗ್ರತೆಯನ್ನು ಕಳೆದುಕೊಳ್ಳದಂತೆ ದೀರ್ಘಕಾಲ ಜಾಗರೂಕತೆ ವಹಿಸುವುದು ಅತ್ಯಗತ್ಯವಾಗಿದೆ.

ಇನ್ನು ಶ್ರೀಲಂಕಾ ತಂಡವು ತವರಿನಲ್ಲಿ ಆಡಿದ ಕೊನೆಯ 5 ಟೆಸ್ಟ್ ಸರಣಿಗಳಲ್ಲಿ 3 ರಲ್ಲಿ ಜಯ ಸಾಧಿಸಿದರೆ, ಒಂದನ್ನು ಡ್ರಾ ಮಾಡಿಕೊಂಡಿದ್ದಾರೆ. ಅಂದರೆ ಶ್ರೀಲಂಕಾ ಸೋತಿರುವುದು ಒಂದೇ ಒಂದು ಟೆಸ್ಟ್ ಸರಣಿಯನ್ನು ಮಾತ್ರ. ಅದು ಕೂಡ ಆಸ್ಟ್ರೇಲಿಯಾ ವಿರುದ್ಧ. ಉಳಿದೆಲ್ಲಾ ತಂಡಗಳ ವಿರುದ್ಧ ತವರಿನಲ್ಲಿ ಪಾರುಪತ್ಯ ಮೆರೆದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬುಮ್ರಾ ಅವರ ಅನುಪಸ್ಥಿತಿಯಿಂದ ಕುಗ್ಗಿರುವ ಬೌಲಿಂಗ್ ಬಲ, ಗಾಲೆ ಮೈದಾನದ ಸ್ಪಿನ್ ಚಕ್ರವ್ಯೂಹ, ಪ್ರಭಾತ್ ಜಯಸೂರ್ಯ ಅವರ ಘಾತಕ ಬೌಲಿಂಗ್ ಮತ್ತು ತವರಿನಲ್ಲಿ ಲಂಕಾ ಪಡೆಯ ಇತ್ತೀಚಿನ ಭರ್ಜರಿ ಫಾರ್ಮ್ — ಇವೆಲ್ಲವೂ ಭಾರತಕ್ಕೆ ದೊಡ್ಡ ಕಂಟಕವಾಗಲಿವೆ. ಇದರೊಂದಿಗೆ ಅಲ್ಲಿನ ಕಠಿಣ ಹವಾಮಾನವೂ ಆಟಗಾರರ ತಾಳ್ಮೆ ಪರೀಕ್ಷಿಸಲಿದೆ.

ಇದನ್ನೂ ಓದಿ: ಮಹಿಳಾ ಏಷ್ಯಾಕಪ್​ ಟೂರ್ನಿಗೆ ಡೇಟ್ ಫಿಕ್ಸ್..!

ಈ ಎಲ್ಲಾ ಸವಾಲುಗಳನ್ನು ಮೀರಿ ಗಿಲ್ ಪಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಮುನ್ನಡೆಯಬೇಕಾದರೆ, ಅಸಾಧಾರಣ ಮತ್ತು ಐತಿಹಾಸಿಕ ಪ್ರದರ್ಶನ ನೀಡಲೇಬೇಕಾಗಿದೆ. ಹೀಗಾಗಿಯೇ, ಈ ಬಾರಿ ಟೀಮ್ ಇಂಡಿಯಾಗೆ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ!

Published On - 11:53 am, Tue, 4 August 26

Follow Us