ತಟ್ಟೆಗೆ ಬೀಳೋಕು ಮುಂಚೆ ಜನರ ಜೇಬು ಸುಡಲಾರಂಭಿಸಿದ ಅನ್ನ: ಸತತ 4 ತಿಂಗಳಲ್ಲಿ 4ನೇ ಬಾರಿ ಅಕ್ಕಿ ದರ ಏರಿಕೆ
ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್, ನಂದಿನಿ ಹಾಲು ದರ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಹಾಲಿನ ದರ ಪ್ರತಿ ಲೀಟರ್ಗೆ ಬರೋಬ್ಬರಿ 8 ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರ ತಿರ್ಮಾನಿಸಿದೆ. ಅಧಿಕೃತ ಆದೇಶ ಹೊರಬಿದ್ದ ಬಳಿಕ ಹಾಲಿನ ಉತ್ಪನ್ನಗಳು ಸಹ ದುಬಾರಿಯಾಗುವ ಸಾಧ್ಯತೆಗಳಿವೆ. ಇದರ ಮಧ್ಯೆ ಇದೀಗ ಸತತ 4 ತಿಂಗಳಲ್ಲಿ 4ನೇ ಬಾರಿ ಅಕ್ಕಿ ದರ ಏರಿಕೆಯಾಗಿದೆ.

ಬೆಂಗಳೂರು, (ಅಕ್ಟೋಬರ್ 07): ಬಿಸಿ ಬಿಸಿ ಅನ್ನ, ತಟ್ಟೆಗೆ ಬೀಳೋಕು ಮುಂಚೆಯೇ ಜನರ ಜೇಬು ಸುಡಲಾರಂಭಿಸಿದೆ. ಹೌದು… ಸತತ ನಾಲ್ಕು ತಿಂಗಳಲ್ಲಿ ಬರೋಬ್ಬರಿ ನಾಲ್ಕನೇ ಬಾರಿಗೆ ಅಕ್ಕಿ ಬೆಲೆ ಗಗನಕ್ಕೇರಿದೆ. ಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ ಜೇಬಿಗೆ ಕತ್ತರಿ ಖಚಿತ ಅನ್ನೋ ಹಾಗಾಗಿದೆ ಇವತ್ತಿನ ಪರಿಸ್ಥಿತಿ. ಯಶವಂತಪುರ ಮಾರುಕಟ್ಟೆಯಲ್ಲೇ ಇದೀಗ ಅಕ್ಕಿ ಬೆಲೆ ಏರಿಕೆ ಆಗಿದೆ. ಸೋನಾ ಮಸೂರಿಯಿಂದ ಹಿಡಿದು ಬಾಸುಮತಿವರೆಗೆ ಪ್ರತಿಯೊಂದು ಅಕ್ಕಿಯೂ ಈಗ ಗ್ರಾಹಕರಿಗೆ ಶಾಕ್ ಕೊಡ್ತಿದೆ. ಇದರ ಮಧ್ಯೆ ಸೋನಾಮಸೂರಿ ಅಕ್ಕಿ 1 ಕೆ.ಜಿಗೆ 90ರ ಗಡಿ ದಾಟಿ 100ರತ್ತ ಹೆಜ್ಜೆ ಹಾಕುತ್ತಿದೆ.
ಜನಸಾಮಾನ್ಯರಿಗೆ ಮತ್ತೆ ತಟ್ಟಿದ ಬೆಲೆ ಏರಿಕೆಯ ಬಿಸಿ
ದಿನಸಿ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಬೆಂಕಿಯಂತೆ ಉರಿಯುತ್ತಿದೆ. ಕಳೆದ ನಾಲ್ಕು ತಿಂಗಳಿಂದ ಸತತವಾಗಿ ಅಕ್ಕಿ ದರ ಏರಿಕೆಯಾಗುತ್ತಲೇ ಇದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ 25 ಕೆ.ಜಿ. ಸೋನಾ ಮಸೂರಿ ಅಕ್ಕಿ ಚೀಲದ ದರ ಬರೋಬ್ಬರಿ 1,430ರಿಂದ 1,820 ರೂ.ಗೆ ಏರಿಕೆಯಾಗಿದೆ. ಕೇವಲ ಎರಡು ತಿಂಗಳಲ್ಲೇ ಬರೋಬ್ಬರಿ 400 ರೂ. ದರ ಹೆಚ್ಚಳವಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಕೆ.ಜಿಗೆ 90ರ ಗಡಿ ದಾಟಿ 100ರತ್ತ ಹೆಜ್ಜೆ ಹಾಕುತ್ತಿದೆ.ಇನ್ನು ಮುಂಗಾರು ಕೈಕೊಟ್ಟಿದ್ದೇ ನೆಪವಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಇದನ್ನೂ ಓದಿ: Vegetable Price: ಬೆಂಗಳೂರಿನಲ್ಲಿ ಗಗನಕ್ಕೇರಿದ ತರಕಾರಿ ದರ, ದುಪ್ಪಟ್ಟಾಯ್ತು ಟೊಮೆಟೊ ಬೆಲೆ
ಯಾವ ಅಕ್ಕಿ ಎಷ್ಟು ಏರಿಕೆ
- ಸೋನಾ ಮಸೂರಿ: ಕೆ.ಜಿ 69 ರಿಂದ 90 ರೂ.ಗೆ ಏರಿಕೆ.
- ಕೋಲಂ ಅಕ್ಕಿ: 75ರಿಂದ 110 ರೂ.
- ಸ್ಟೀಮ್ ಅಕ್ಕಿ: 60 ರಿಂದ 88 ರೂ.
- ಬಾಸುಮತಿ ಅಕ್ಕಿ: 105 ರಿಂದ 120 ರೂ.
- ಜೀರಾ ರೈಸ್: 115 ರಿಂದ 125 ರೂ.
- ರಾಜಮುಡಿ ಅಕ್ಕಿ: 125 ರಿಂದ 150 ರೂ.
ಅಕ್ಕಿ ದರ ಏರಿಕೆಗೆ ಕಾರಣವೇನು?
ಸತತ ನಾಲ್ಕು ತಿಂಗಳಲ್ಲಿ ಬರೋಬ್ಬರಿ ನಾಲ್ಕು ಬಾರಿ ಅಕ್ಕಿ ದರ ಏರಿಕೆಯಾಗಿದ್ದು, ಮಳೆ ಅಭಾವದಿಂದ ಇಳುವರಿ ಕುಸಿತವೇ ಮುಖ್ಯ ಕಾರಣವಾಗಿದೆ. ಮುಂಗಾರು ಕೈಕೊಟ್ಟಿದ್ದರಿಂದ ರಾಜ್ಯದ ಪ್ರಮುಖ ಭತ್ತದ ಬೆಳೆಗಾರ ಪ್ರದೇಶಗಳಾದ ರಾಯಚೂರು, ಸಿಂಧನೂರು, ಸಿರುಗುಪ್ಪ ಹಾಗೂ ಭದ್ರಾವತಿ ಭಾಗಗಳಲ್ಲಿ ಭತ್ತದ ಉತ್ಪಾದನೆ ತೀವ್ರವಾಗಿ ಕುಸಿದಿದೆ. ಅಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಶೇ. 50ರಷ್ಟು ಮಾತ್ರ ಭತ್ತದ ಇಳುವರಿ ಕಡಿಮೆ ಆಗಿದೆ. ಇದರಿಂದಾಗಿ ಮಾರುಕಟ್ಟೆಗೆ ಪೂರೈಕೆಯಾಗುವ ಅಕ್ಕಿ ಪ್ರಮಾಣ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದೆ.
ಬೆಳಿಗ್ಗೆಯಿಂದ ಸಂಜೆವರೆಗೆ ಬೆವರು ಹರಿಸಿ ದುಡಿಯುವ ಕೂಲಿ ಕಾರ್ಮಿಕರಾಗಲಿ, ತಿಂಗಳ ಸಂಬಳ ನೆಚ್ಚಿಕೊಂಡು ಸಂಸಾರ ನಡೆಸುವ ಮಧ್ಯಮ ವರ್ಗದ ಜನರು ಮಾರುಕಟ್ಟೆಗೆ ಹೋಗಿ ಅಕ್ಕಿ ಬೆಲೆ ಕೇಳಿದರೆ ಎದೆ ಬಡಿತ ಹೆಚ್ಚಾಗುತ್ತಿದೆ. ಸಂಪಾದನೆ ಕಮ್ಮಿ, ಖರ್ಚು ಜಾಸ್ತಿ ಅಂತ ಪ್ರತಿದಿನ ಕಷ್ಟಪಟ್ಟು ಬದುಕು ಜಟಕಾ ಬಂಡಿ ಎಳೆಯುತ್ತಿರೋ ಬಡವ ಮತ್ತು ಮಧ್ಯಮ ವರ್ಗದ ಜೇಬಿಗೆ ಭಾರಿ ಪ್ರಮಾಣದಲ್ಲಿ ಕತ್ತರಿ ಬೀಳುತ್ತಿದೆ.
ತಿಂಗಳಿಗೆ 100ರಂತೆ ಅಕ್ಕಿ ದರ ಏರಿಕೆಯಾಗುತ್ತಿದ್ದು, ಅಂಗಡಿಗೆ ಬರುವ ಗ್ರಾಹಕರು ಬೆಲೆ ಕೇಳಿ ಬೆಚ್ಚಿಬಿದ್ದು ಖಾಲಿ ಕೈಯಲ್ಲಿ ವಾಪಸ್ ಹೋಗುತ್ತಿದ್ದಾರೆ. ಸರ್ಕಾರ ಸಮಯಕ್ಕೆ ಸರಿಯಾಗಿ ಕೃಷಿ ಸಚಿವರನ್ನು ನೇಮಕ ಮಾಡಲಿಲ್ಲ, ಜೊತೆಗೆ ಮುನ್ನೆಚ್ಚರಿಕೆ ವಹಿಸದೆ ರಫ್ತು ಮಾಡಿದ್ದರಿಂದಲೇ ಇಂದು ಈ ಕೃತಕ ಅಭಾವ ಸೃಷ್ಟಿಯಾಗಿದೆ ಎಂಬುವುದು ಸಾರ್ವಜನಿಕರ ಆಕ್ರೋಶ. ಮುಂದಿನ ದಿನಗಳಲ್ಲಿ ಅಕ್ಕಿ ಮಾತ್ರವಲ್ಲದೆ ಇತರ ದಿನಸಿ ಪದಾರ್ಥಗಳ ಬೆಲೆಯೂ ಮತ್ತಷ್ಟು ಏರಿಕೆಯಾಗುವ ಲಕ್ಷಣಗಳು ಕಾಣಿಸುತ್ತಿವೆ.
ಒಟ್ಟಿನಲ್ಲಿ ಮುಂಗಾರು ಅಭಾವದ ಜೊತೆಗೆ ಸರ್ಕಾರದ ತಪ್ಪಾದ ನಿರ್ಧಾರಗಳಿಂದ ಇಂದು ಬಡ ಮತ್ತು ಮಧ್ಯಮ ವರ್ಗದ ಜನ ಹೊಟ್ಟೆಗೆ ಕಲ್ಲು ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಅಕ್ಕಿ ದರಕ್ಕೆ ಸರ್ಕಾರ ತಕ್ಷಣವೇ ಕಡಿವಾಣ ಹಾಕುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.




