ಐಪಿಎಲ್ನ (IPL 2021) ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ಸತತ ಸೋಲಿನಿಂದ ಕಂಗೆಟ್ಟಿದೆ. ದ್ವಿತಿಯಾರ್ಧದಲ್ಲಿ ಆಡಿದ 3 ಪಂದ್ಯಗಳಲ್ಲಿ ಸೋಲನುಭವಿಸುವಾಗ ಸಂಕಷ್ಟಕ್ಕೆ ಸಿಲುಕಿದೆ. ಅಷ್ಟೇ ಅಲ್ಲದೆ ಮೊದಲಾರ್ಧದಲ್ಲಿ 4ನೇ ಸ್ಥಾನದಲ್ಲಿದ್ದ ತಂಡವು ಇದೀಗ 7ನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ 10 ಪಂದ್ಯಗಳಲ್ಲಿ ನಾಲ್ಕರಲ್ಲಿ ಮಾತ್ರ ಗೆದ್ದಿರುವ ರೋಹಿತ್ ಪಡೆಗೆ ಇನ್ನು ಉಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಹೀಗಾಗಿಯೇ ಮುಂಬೈಗೆ ಮುಂದಿನ ಪಂದ್ಯವು ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಏಕೆಂದರೆ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋತರೆ ಪ್ಲೇ ಆಫ್ ಕನಸು ಭಗ್ನಗೊಳ್ಳುವ ಸಾಧ್ಯತೆಯಿದೆ.
ಈಗಾಗಲೇ ಸಿಎಸ್ಕೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿದೆ. ಇನ್ನು ಆರ್ಸಿಬಿ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನುಳಿದ 4 ಪಂದ್ಯಗಳಲ್ಲಿ ಆರ್ಸಿಬಿ 2 ಗೆದ್ದರೆ ಪ್ಲೇ ಆಫ್ ಪ್ರವೇಶಿಸಬಹುದು. ಇತ್ತ ಕೆಕೆಆರ್, ಪಂಜಾಬ್ ಕಿಂಗ್ಸ್ ತಂಡಗಳು ಕೂಡ 4 ಪಂದ್ಯಗಳನ್ನು ಆಡಬೇಕಿದೆ. ರಾಜಸ್ಥಾನ್, ಪಂಜಾಬ್ ಹಾಗೂ ಕೆಕೆಆರ್ ತಂಡಗಳಿಗೂ ಪ್ಲೇ ಆಫ್ ಪ್ರವೇಶಿಸಲು ಅವಕಾಶವಿದ್ದು, ಹೀಗಾಗಿ ಈ ತಂಡಗಳ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜಯಿಸಲೇಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಮುಂಬೈ ಸೋತರೆ ಕೆಎಲ್ ರಾಹುಲ್ ಪಡೆಗೆ ಪ್ಲೇ ಆಫ್ ಪ್ರವೇಶಿಸುವ ಹಾದಿ ಸುಗಮವಾಗಲಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ದ ಪಂದ್ಯವು ಮುಂಬೈ ಪಾಲಿಗೆ ಮಹತ್ವದ್ದು.
ಇನ್ನು ಪಂಜಾಬ್ ವಿರುದ್ದ ಮುಂಬೈ ಗೆದ್ದರೆ, ಉಳಿದ ಮೂರು ಪಂದ್ಯಗಳನ್ನು ಗೆಲ್ಲಬೇಕು. ಅಂದರೆ ಮುಂಬೈ ಇಂಡಿಯನ್ಸ್ ಮುಂದಿನ 4 ಪಂದ್ಯಗಳನ್ನು ಗೆದ್ದರೆ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇರಲಿದೆ. ಒಂದು ವೇಳೆ ನಾಲ್ಕರಲ್ಲಿ ಒಂದು ಸೋತು ಉಳಿದ ಮೂರು ಪಂದ್ಯಗಳನ್ನು ಗೆದ್ದುಕೊಂಡರೆ ಪ್ಲೇ ಆಫ್ನಲ್ಲಿ ನಾಲ್ಕನೇ ಸ್ಥಾನ ಪಡೆಯಲು ರನ್ ರೇಟ್ ಮೊರೆ ಹೋಗಬೇಕಾಗುತ್ತದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಮುಂಬೈ ಉತ್ತಮ ರನ್ ರೇಟ್ನೊಂದಿಗೆ ಗೆಲ್ಲುವುದು ಸಹ ಅನಿವಾರ್ಯ. ಒಟ್ಟಿನಲ್ಲಿ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಲವು ಬಾರಿ ಕಂಬ್ಯಾಕ್ ಮಾಡಿ ಚಾಂಪಿಯನ್ ಪಟ್ಟ ಅಲಂಕರಿಸಿದ ಇತಿಹಾಸವಿದೆ. ಹೀಗಾಗಿ ಮುಂದಿನ ನಾಲ್ಕು ಪಂದ್ಯಗಳಲ್ಲಿ ರೋಹಿತ್ ಪಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.
ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB
ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!
ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು
(IPL 2021: mumbai indians playoff scenarios)
Published On - 2:23 pm, Tue, 28 September 21