IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!
RCB's hat trick wicket takers: ಆರ್ಸಿಬಿ ಪರ ಇಬ್ಬರು ಬೌಲರುಗಳು ಮಾತ್ರ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಮೊದಲ ಬಾರಿಗೆ ಆರ್ಸಿಬಿ ಪರ ಹ್ಯಾಟ್ರಿಕ್ ಪಡೆದಿದ್ದು ವೇಗಿ ಪ್ರವೀಣ್ ಕುಮಾರ್.
Updated on: Sep 27, 2021 | 3:11 PM

ಬಲಿಷ್ಠ ಮುಂಬೈ ಇಂಡಿಯನ್ಸ್ಗೆ ಸೋಲುಣಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದ್ವಿತಿಯಾರ್ಧದಲ್ಲಿ ಗೆಲುವಿನ ಖಾತೆ ತೆರೆದಿದೆ. 166 ರನ್ಗಳ ಸ್ಪರ್ಧಾತ್ಮಕ ಸವಾಲನ್ನು ಬೆನ್ನತ್ತಿದ ಮುಂಬೈ ಒಂದು ಹಂತದಲ್ಲಿ ಚೇಸ್ ಮಾಡುವ ಸ್ಥಿತಿಯಲ್ಲಿತ್ತು. ಆದರೆ ಇಡೀ ಪಂದ್ಯದ ಚಿತ್ರಣ ಬದಲಾಗಿದ್ದು 17ನೇ ಓವರ್ನಲ್ಲಿ. ವಿರಾಟ್ ಕೊಹ್ಲಿ ಮಾಡಿದ ಬೌಲಿಂಗ್ ಚೇಂಜ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಏಕೆಂದರೆ ಒಂದೇ ಓವರ್ನಲ್ಲಿ 3 ವಿಕೆಟ್ ಉರುಳಿದ್ದವು. ಈ ಮೂವರಲ್ಲಿ ಇಬ್ಬರು ಟಿ20 ಕ್ರಿಕೆಟ್ನ ಡೇಂಜರಸ್ ಬ್ಯಾಟ್ಸ್ಮನ್ ಎಂಬುದು ವಿಶೇಷ.

ಹೌದು, 17ನೇ ಓವರ್ನಲ್ಲಿ ಹರ್ಷಲ್ ಪಟೇಲ್ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆಯುವುದರೊಂದಿಗೆ ಆರ್ಸಿಬಿ ಗೆಲುವಿನ ಆಸೆ ಚಿಗುರಿಸಿದರು. ಇದರ ಬೆನ್ನಲ್ಲೇ ಕೀರನ್ ಪೊಲಾರ್ಡ್ರನ್ನು ಬೌಲ್ಡ್ ಮಾಡಿ ಗೆಲುವನ್ನು ಖಚಿತಪಡಿಸಿದರು. ಆ ಬಳಿಕ ಬಂದ ರಾಹುಲ್ ಚಹರ್ರನ್ನು ಎಲ್ಬಿ ಬಲೆಗೆ ಬೀಳಿಸಿ ಐಪಿಎಲ್ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಅದರಲ್ಲೂ ಆರ್ಸಿಬಿ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಹರ್ಷಲ್ ಪಟೇಲ್ ಪಾತ್ರರಾದರು.

ಇದಕ್ಕೂ ಮುನ್ನ ಆರ್ಸಿಬಿ ಪರ ಇಬ್ಬರು ಬೌಲರುಗಳು ಮಾತ್ರ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಮೊದಲ ಬಾರಿಗೆ ಆರ್ಸಿಬಿ ಪರ ಹ್ಯಾಟ್ರಿಕ್ ಪಡೆದಿದ್ದು ವೇಗಿ ಪ್ರವೀಣ್ ಕುಮಾರ್. 2010 ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರವೀಣ್ ಕುಮಾರ್ ರಾಜಸ್ಥಾನ್ ರಾಯಲ್ಸ್ ವಿರುದ್ದ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದರು.

ಅದಾದ ಬಳಿಕ ಆರ್ಸಿಬಿ ಪರ ಹ್ಯಾಟ್ರಿಕ್ ವಿಕೆಟ್ ಬಂದಿದ್ದು 2017 ರಲ್ಲಿ. ಮುಂಬೈ ಇಂಡಿಯನ್ಸ್ ವಿರುದ್ದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸ್ಯಾಮ್ಯುಯೆಲ್ ಬದ್ರಿ (ವೆಸ್ಟ್ ಇಂಡೀಸ್) ಆರ್ಸಿಬಿ ಪರ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು.

ಇದೀಗ ಹರ್ಷಲ್ ಪಟೇಲ್ ಕೂಡ ಮುಂಬೈ ಇಂಡಿಯನ್ಸ್ ವಿರುದ್ದ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ಇತಿಹಾಸ ಬರೆದಿದ್ದಾರೆ.



















