AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs DC, IPL 2021 Qualifier 2: 7 ರನ್ ಅಂತರದಲ್ಲಿ ಕೆಕೆಆರ್​ನ 6 ವಿಕೆಟ್ ಪತನ: ಆದರೂ ಗೆಲ್ಲಲಿಲ್ಲ ಡೆಲ್ಲಿ: ಚೊಚ್ಚಲ ಪ್ರಶಸ್ತಿಯ ಕನಸು ಮತ್ತೆ ಭಗ್ನ

KKR Beat DC to Set up Final vs CSK: ಕೊಲ್ಕತ್ತಾ ನೈಟ್ ರೈಡರ್ಸ್‌ ಗೆಲುವಿಗೆ 24 ಎಸೆತಗಳಲ್ಲಿ ಕೇವಲ 13 ರನ್​ಗಳ ಅವಶ್ಯಕತೆಯಿತ್ತು. ಆಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್‌ಗಳು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ತಿರುಗಿ ಬಿದ್ದರು.

KKR vs DC, IPL 2021 Qualifier 2: 7 ರನ್ ಅಂತರದಲ್ಲಿ ಕೆಕೆಆರ್​ನ 6 ವಿಕೆಟ್ ಪತನ: ಆದರೂ ಗೆಲ್ಲಲಿಲ್ಲ ಡೆಲ್ಲಿ: ಚೊಚ್ಚಲ ಪ್ರಶಸ್ತಿಯ ಕನಸು ಮತ್ತೆ ಭಗ್ನ
IPL 2021 Qualifier 2 KKR vs DC
TV9 Web
| Updated By: Vinay Bhat|

Updated on: Oct 14, 2021 | 7:44 AM

Share

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಎರಡನೇ ಕ್ವಾಲಿಫೈಯರ್ (Qualifier 2) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (DC vs KKR) ತಂಡ ರೋಚಕ ಜಯ ಸಾಧಿಸಿ ಐಪಿಎಲ್ 2021 ಫೈನಲ್​ಗೆ (IPL 2021 Final) ಲಗ್ಗೆಯಿಟ್ಟಿದೆ. ಡೆಲ್ಲಿ ನೀಡಿದ್ದ ಟಾರ್ಗೆಟ್ ಬೆನ್ನಟ್ಟಲು ಶುರುಮಾಡಿದಾಗಿನಿಂದ ಗೆಲುವು ಕೆಕೆಆರ್ ಕಡೆಯೇ ಇತ್ತು. ಆದರೆ, ಅಂತಿಮ ಹಂತದಲ್ಲಿ ಒಮ್ಮೆಗೆ ಎಲ್ಲವೂ ಅದಲು ಬದಲಾಯಿತು. ಕೊನೆಯ ಒಂದು ಬಾಲ್ ಬಾಕಿಯಿರುವಾಗ ರೋಚಕಾತಿರೋಚಕ ರೀತಿಯಲ್ಲಿ ಸೋಲಿನ ದವಡೆಯಿಂದ ಪಾರಾಗಿ ಮಾರ್ಗನ್ (Eion Morgan) ಪಡೆ ಗೆಲುವು ಪಡೆಯಿತು. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಅಂತಿಮ ಕ್ಷಣದಲ್ಲಿ ನೀಡಿದ ಟ್ವಿಸ್ಟ್ ಅಭಿಮಾನಿಗಳನ್ನು ಕಾಡಿದ್ದು ಸುಳ್ಳಲ್ಲ. 7 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡರೂ ಕೆಕೆಆರ್ ತಂಡ ಅಂತಿಮವಾಗಿ ಗೆಲುವಿನ ನಗೆ ಬೀರಿತು. ಸದ್ಯ ಮೂರನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಫೈನಲ್ ತಲುಪಿರುವ ಕೋಲ್ಕತ್ತಾ ಅ. 15 ರಂದು ಚೆನ್ನೈ (CSK vs KKR) ವಿರುದ್ಧ ಟ್ರೋಫಿಗಾಗಿ ಹೋರಾಟ ನಡೆಸಲಿದೆ.

ಈ ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟಿಂಗ್ ಶುರುಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಿಂದಿನ ಪಂದ್ಯದಂತೆ ಉತ್ತಮ ಆರಂಭ ಪಡೆದುಕೊಂಡಿರಲಿಲ್ಲ. ಪೃಥ್ವಿ ಶಾ 12 ಎಸೆತಗಳಲ್ಲಿ 18 ರನ್​ಗೆ ಔಟ್ ಆದರು. 32 ರನ್​ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಶಿಖರ್ ಧವನ್ ಹಾಗೂ ಮಾರ್ಕಸ್ ಸ್ಟಾಯಿನಿಸ್ ಕೊಂಚ ರನ್ ಕಲೆಹಾಕಿದರು. ಧವನ್ 36 ಮತ್ತು ಸ್ಟಾಯಿನಿಸ್ 18 ರನ್ ಬಾರಿಸಿ ನಿರ್ಗಮಿಸಿದ ಬಳಿಕ ಶ್ರೇಯಸ್ ಅಯ್ಯರ್ ಹೋರಾಟ ನಡೆಸಿದರೆ ನಾಯಕ ರಿಷಭ್ ಪಂತ್ ಕೇವಲ 6 ರನ್​ಗೆ ಮತ್ತು ಶಿಮ್ರೋನ್ ಹೆಟ್ಮೇರ್ ಕೇವಲ 17 ರನ್​ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.

ಅಂತಿಮವಾಗಿ ಡೆಲ್ಲಿ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಕಲೆಹಾಕಿತು. ಅಯ್ಯರ್ 27 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದರು. ಕೆಕೆಆರ್ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ವರುಣ್ ಚಕ್ರವರ್ತಿ 4 ಓವರ್​ಗೆ ಕೇವಲ 26 ರನ್ ನೀಡಿ 2 ವಿಕೆಟ್ ಕಿತ್ತರು. ಲೂಕಿ ಫರ್ಗುಸನ್ ಮತ್ತು ಶಿವಂ ಮಾವಿ ತಲಾ 1 ವಿಕೆಟ್ ಪಡೆದರು.

ಕಠಿಣ ಪಿಚ್​ನಲ್ಲಿ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಶುಭ್ಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಅಮೋಘ ಬ್ಯಾಟಿಂಗ್ ನಡೆಸಿ ತಂಡದ ಗೆಲುವನ್ನು ಖಚಿತ ಪಡಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ 12.2 ಓವರ್​ನಲ್ಲಿ 96 ರನ್​ಗಳ ಕಾಣಿಕೆ ನೀಡಿತು. ಗಿಲ್ 46 ಎಸೆತಗಳಲ್ಲಿ 46 ರನ್ ಬಾರಿಸಿದರೆ, ಅಯ್ಯರ್ 41 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿಯೊಂದಿಗೆ 55 ರನ್ ಚಚ್ಚಿದರು.

ಈ ಹಂತದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ ಗೆಲುವಿಗೆ 24 ಎಸೆತಗಳಲ್ಲಿ ಕೇವಲ 13 ರನ್​ಗಳ ಅವಶ್ಯಕತೆಯಿತ್ತು. ಆಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್‌ಗಳು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ತಿರುಗಿ ಬಿದ್ದರು. ರನ್‌ ನಿಯಂತ್ರಣ ಮಾಡುವ ಜೊತೆಗೆ ವಿಕೆಟ್ ಕೂಡ ಕಬಳಿಸುತ್ತಾ ಸಾಗಿದರು. ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್, ಶಕೀಬ್ ಅಲ್ ಹಸನ್, ಸುನಿಲ್ ನರೈನ್ ಎಲ್ಲರೂ ಶೂನ್ಯ ಸುತ್ತಿಕೊಂಡು ಒಬ್ಬರ ನಂತರ ಮತ್ತೊಬ್ಬರು ಔಟಾಗುತ್ತಾ ಸಾಗಿದರು. ಅಮೋಘ ಪ್ರದರ್ಶನ ನೀಡಿದ ಡೆಲ್ಲಿ ಬೌಲರ್‌ಗಳು ಗೆಲುವಿನ ಸಾಧ್ಯತೆ ತೆರೆದಿಟ್ಟರು.

ಅಂತಿಮ ಓವರ್‌ನಲ್ಲಿ ಕೆಕೆಆರ್ ತಂಡಕ್ಕೆ 7 ರನ್‌ಗಳ ಅಗತ್ಯವಿತ್ತು. ಆರ್. ಅಶ್ವಿನ್ ಬೌಲಿಂಗ್ ದಾಳಿಗೆ ಇಳಿದಿದ್ದರು. ಈ ಓವರ್‌ನಲ್ಲಿಯೂ ಅಶ್ವಿನ್ ಆರಂಭಿಕ ನಾಲ್ಕು ಎಸೆತಗಳಲ್ಲಿ ಕೇವಲ ಒಂದು ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು. ಈ ಮೂಲಕ ಸಂಪೂರ್ಣ ಕೈ ಜಾರಿದ್ದ ಪಂದ್ಯದಲ್ಲಿ ಡೆಲ್ಲಿ ನಿಯಂತ್ರಣ ಸಾಧಿಸಿತ್ತು. ಕೆಕೆಆರ್ ಗೆಲುವಿಗೆ ಅಂತಿಮ ಎರಡು ಎಸೆತಗಳಲ್ಲಿ ಆರು ರನ್‌ಗಳ ಅಗತ್ಯವಿತ್ತು. ಆರ್ ಅಶ್ವಿನ್ ಐದನೇ ಎಸೆತವನ್ನು ಕ್ರೀಸ್‌ನಲ್ಲಿದ್ದ ರಾಹುಲ್ ತ್ರಿಪಾಠಿಗೆ ಎಸೆದರು. ತ್ರಿಪಾಠಿ ಈ ಎಸೆತವನ್ನು ಭರ್ಜರಿಯಾಗಿ ಸಿಕ್ಸರ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ ಕೆಕೆಆರ್ ಒಂದು ಎಸೆತ ಬಾಕಿಯಿರುವಂತೆಯೇ ಗೆದ್ದು ಬೀಗಿತು.

KKR vs DC , IPL 2021 Qualifier 2: ರೋಚಕ ಗೆಲುವಿನೊಂದಿಗೆ ಫೈನಲ್​ ಪ್ರವೇಶಿಸಿದ ಕೆಕೆಆರ್

(IPL 2021 Qualifier 2 KKR vs DC highlights Kolkata Knight Riders lose 6 wickets for 7 runs but wins by 3 wickets)