IPL 2022: ಐಪಿಎಲ್ ಕ್ವಾರಂಟೈನ್ ಕಡ್ಡಾಯ: ಸಂಕಷ್ಟಕ್ಕೆ ಸಿಲುಕಿದ ವಿದೇಶಿ ಆಟಗಾರರು..!

IPL 2022: ಐಪಿಎಲ್ ಕ್ವಾರಂಟೈನ್ ಕಡ್ಡಾಯ: ಸಂಕಷ್ಟಕ್ಕೆ ಸಿಲುಕಿದ ವಿದೇಶಿ ಆಟಗಾರರು..!
IPL 2022

IPL 2022: ಲೀಗ್​ ಹಂತದ ಒಟ್ಟು 70 ಪಂದ್ಯಗಳನ್ನು ಮುಂಬೈ ಹಾಗೂ ಪುಣೆಯ 4 ಸ್ಟೇಡಿಯಂಗಳಲ್ಲಿ ಆಡಲಾಗುತ್ತದೆ. ಅದರಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ನಡೆಯಲಿದೆ.

TV9kannada Web Team

| Edited By: Zahir PY

Mar 02, 2022 | 4:22 PM

ಇಂಡಿಯನ್ ಪ್ರೀಮಿಯರ್ ಲೀಗ್  (IPL 2022) ಸೀಸನ್ 15 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಟೂರ್ನಿಗಾಗಿ ಸಿದ್ದತೆಗಳನ್ನು ಆರಂಭಿಸಿದೆ. ಇತ್ತ ಬಿಸಿಸಿಐ ಕೂಡ ಟೂರ್ನಿಗೆ ನಿಯಮಾವಳಿಯನ್ನು ರೂಪಿಸಿದೆ. ಅದರಂತೆ ಐಪಿಎಲ್​ನಲ್ಲಿ ಭಾಗವಹಿಸುವ ಆಟಗಾರರಿಗೆ ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಲಾಗಿದೆ. ಕೊರೋನಾಂತಕದ ನಡುವೆ ಈ ಬಾರಿ ನಾಲ್ಕು ಸ್ಟೇಡಿಯಂಗಳಲ್ಲಿ ಟೂರ್ನಿ ನಡೆಸಲಾಗುತ್ತದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ನಡೆಯಲಿದೆ. ಹಾಗೆಯೇ ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 15 ಪಂದ್ಯಗಳನ್ನು ಆಡಲಾಗುತ್ತದೆ. ಆದರೆ ಈ ಪಂದ್ಯಗಳಿಗೆ ಆಗಮಿಸುವ ಪ್ರತಿ ಆಟಗಾರರೂ ಕೂಡ ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ.

ಮಾರ್ಚ್​ 26 ರಿಂದ ಟೂರ್ನಿ ಶುರುವಾಗಲಿದ್ದು, ಅದಕ್ಕೂ ಮುನ್ನ ಭಾರತೀಯ ಆಟಗಾರರು 3 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಬೇಕಾಗುತ್ತದೆ. ಇನ್ನು ವಿದೇಶದಿಂದ ಬರುವ ಆಟಗಾರರಿಗೆ 5 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಇದರಿಂದ ಕೆಲ ವಿದೇಶಿ ಆಟಗಾರರು ಐಪಿಎಲ್​ನ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಏಕೆಂದರೆ ಆಸ್ಟ್ರೇಲಿಯಾ ಆಟಗಾರರು ಮಾರ್ಚ್​ನಲ್ಲಿ ಪಾಕಿಸ್ತಾನದ ವಿರುದ್ದ ಸರಣಿ ಆಡುತ್ತಿದೆ. ಈ ಸರಣಿಯಲ್ಲಿ ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಮಾರ್ಷ್, ಜೋಶ್ ಹ್ಯಾಝಲ್​ವುಡ್​ ಸೇರಿದಂತೆ ಐಪಿಎಲ್​ನಲ್ಲಿರುವ ಕೆಲ ಆಟಗಾರರು ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿದ್ದಾರೆ.

ಅಂದರೆ ಆಸ್ಟ್ರೇಲಿಯಾ-ಪಾಕಿಸ್ತಾನ್ ಟೆಸ್ಟ್ ಸರಣಿ ಮುಗಿಯುವುದು ಮಾರ್ಚ್ 25 ಕ್ಕೆ, ಹೀಗಾಗಿ ಈ ಆಟಗಾರರು ಮಾರ್ಚ್ 26 ಕ್ಕೆ ಭಾರತಕ್ಕೆ ಆಗಮಿಸಿದರೂ 5 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತದೆ. ಅದರಂತೆ ಏಪ್ರಿಲ್ 1 ರ ಬಳಿಕವಷ್ಟೇ ತಮ್ಮ ತಂಡಗಳನ್ನು ಕೂಡಿಕೊಳ್ಳಬಹುದು. ಇದರಿಂದಾಗಿ ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಮಾರ್ಷ್, ಜೋಶ್ ಹ್ಯಾಝಲ್​ವುಡ್​ ಸೇರಿದಂತೆ ಕೆಲ ಆಟಗಾರರು ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವುದು ಖಚಿತವಾಗಿದೆ.

ಇನ್ನು ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಕೂಡ ಮಾರ್ಚ್ ತಿಂಗಳಲ್ಲೇ ಟೆಸ್ಟ್ ಸರಣಿ ಆಡಲಿದೆ. ಈ ಸರಣಿ ಮುಗಿಯುವುದು ಕೂಡ ಮಾರ್ಚ್ 29 ಕ್ಕೆ. ಇದರಿಂದ ಈ ಎರಡು ತಂಡಗಳಲ್ಲಿರುವ ಆಟಗಾರರು ಕೂಡ ಕ್ವಾರಂಟೈನ್ ಮುಗಿಸಿ ಐಪಿಎಲ್​ನಲ್ಲಿ ಭಾಗವಹಿಸಲು 5 ದಿನಗಳನ್ನು ತೆಗೆದುಕೊಳ್ಳಲಿದೆ. ಅಷ್ಟರಲ್ಲಾಗಲೇ ಒಂದೆರಡು ಆರಂಭಿಕ ಪಂದ್ಯಗಳು ಕೈತಪ್ಪಲಿದೆ.

ಇನ್ನು ಮೂರು/ಐದು ದಿನಗಳ ಕ್ವಾರಂಟೈನ್ ಸಂದರ್ಭದಲ್ಲಿ, ಪ್ರತಿದಿನ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಎಲ್ಲಾ ಮೂರು ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿದ್ದರೆ ಮಾತ್ರ ತಂಡವನ್ನು ಕೂಡಿಕೊಳ್ಳಬಹುದು. ಒಟ್ಟಿನಲ್ಲಿ ಸಂಪೂರ್ಣ ಸುರಕ್ಷತೆಯೊಂದಿಗೆ ಐಪಿಎಲ್ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಆದರೆ ಇತ್ತ ಬಿಸಿಸಿಐ ರೂಪಿಸಿರುವ ನಿಯಮಗಳು ಇದೀಗ ಐಪಿಎಲ್ ಫ್ರಾಂಚೈಸಿಗಳಿಗೆ ಹೊಸ ಚಿಂತೆಯನ್ನುಂಟು ಮಾಡಿರುವುದಂತು ಸುಳ್ಳಲ್ಲ.

ಹೊಸ ಫಾರ್ಮಾಟ್​ನಲ್ಲಿ ಐಪಿಎಲ್​:

ಈ ಬಾರಿ ಐಪಿಎಲ್​ನ (IPL 2022 format explained) ಫಾರ್ಮಾಟ್ ಬದಲಿಸಲಾಗಿದ್ದು, ಅದರಂತೆ ಈ ಬಾರಿ​ ಒಟ್ಟು 10 ತಂಡಗಳು ಎರಡು ಗುಂಪುಗಳಾಗಿ ಕಣಕ್ಕಿಳಿಯಲಿದೆ. ಈ ಹಿಂದಿನ ಫಾರ್ಮಾಟ್​ನಲ್ಲಿ ಪಂದ್ಯ ನಡೆಸಿದರೆ ಒಟ್ಟು 94 ಪಂದ್ಯಗಳನ್ನು ಆಡಬೇಕಾಗುತ್ತದೆ. ಹೀಗಾಗಿ ಬಿಸಿಸಿಐ (BCCI) ರೌಂಡ್ ರಾಬಿನ್ ಫಾರ್ಮಾಟ್​ನಲ್ಲಿ ಟೂರ್ನಿ ನಡೆಸಲಿದೆ. ಅಂದರೆ ಇಲ್ಲಿ 10 ತಂಡಗಳನ್ನು 5 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆ ಬಳಿಕ ತಲಾ 14 ಪಂದ್ಯಗಳನ್ನು ಆಡಿಸಲಾಗುತ್ತದೆ. ಅಂದರೆ ಗ್ರೂಪ್ A-ನಲ್ಲಿರುವ 5 ತಂಡಗಳು ಪರಸ್ಪರ ಎರಡೆರಡು ಪಂದ್ಯಗಳನ್ನು ಆಡಲಿದೆ. ಆ ಬಳಿಕ ಗ್ರೂಪ್ ಬಿ-ನಲ್ಲಿರುವ ತಂಡದ ವಿರುದ್ದ ಒಂದೊಂದು ಪಂದ್ಯವಾಡಲಿದೆ. ಇದೇ ಮಾದರಿಯಲ್ಲಿ ಗ್ರೂಪ್ ಬಿ ತಂಡಗಳು ಕೂಡ ಆಡಲಿದೆ.

ಉದಾಹರಣೆಗೆ: RCB ಗ್ರೂಪ್ B-ನಲ್ಲಿದ್ದು, ತನ್ನದೇ ಗ್ರೂಪ್​ನಲ್ಲಿರುವ 4 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಇಲ್ಲಿ ಒಟ್ಟು ಪಂದ್ಯಗಳ ಸಂಖ್ಯೆ 8 ಆಗುತ್ತೆ. ಹಾಗೆಯೇ ಗ್ರೂಪ್ A-ನಲ್ಲಿರುವ 5 ತಂಡಗಳ ತಂಡಗಳ ವಿರುದ್ದ ತಲಾ ಒಂದು ಪಂದ್ಯಗಳನ್ನು ಆಡಲಿದೆ. ಇದರೊಂದಿಗೆ ಪ್ರತಿ ತಂಡಗಳ ಪಂದ್ಯಗಳ ಸಂಖ್ಯೆ 13 ಆಗಲಿದೆ. ಇದರ ಜೊತೆಗೆ ಗ್ರೂಪ್ A ನಲ್ಲಿರುವ ಒಂದು ತಂಡದ ವಿರುದ್ದ ಎರಡು ಪಂದ್ಯ ಆಡಲಿದೆ. ಈ ಮೂಲಕ 14 ಪಂದ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ. ಈ ಬಾರಿ ಆರ್​ಸಿಬಿ ಗ್ರೂಪ್ ಎ ನಲ್ಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ದ 2 ಪಂದ್ಯಗಳನ್ನು ಆಡಲಿದೆ. ಅಂದರೆ ಪ್ರತಿ ತಂಡಗಳು 5 ತಂಡಗಳ ವಿರುದ್ದ ತಲಾ ಎರೆಡೆರಡು ಪಂದ್ಯಗಳನ್ನು ಹಾಗೂ ನಾಲ್ಕು ತಂಡಗಳ ವಿರುದ್ದ ಒಂದೊಂದು ಪಂದ್ಯಗಳನ್ನು ಆಡಲಿದೆ. ಈ ಮೂಲಕ ಒಟ್ಟು 70 ಲೀಗ್ ಪಂದ್ಯಗಳನ್ನು ಆಡಲಿದೆ.

ಇದಾಗ್ಯೂ ಪಾಯಿಂಟ್​ ಟೇಬಲ್​ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ 10 ತಂಡಗಳಿಗೂ ಒಂದೇ ಪಾಯಿಂಟ್ ಟೇಬಲ್​ ಇರಲಿದೆ. ಇಲ್ಲಿ ಟಾಪ್-4 ನಲ್ಲಿ ಸ್ಥಾನ ಪಡೆಯುವ ನಾಲ್ಕು ತಂಡಗಳು ಪ್ಲೇ ಆಫ್​ಗೆ ಪ್ರವೇಶಿಸಲಿದೆ. ಇನ್ನು ಪ್ಲೇಆಫ್​ ಈ ಹಿಂದಿನಂತೆ ಇರಲಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯ, ಬಳಿಕ ಎಲಿಮಿನೇಟರ್ ಪಂದ್ಯ…ಆ ನಂತರ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಅದರಂತೆ ಫೈನಲ್ ಸೇರಿದಂತೆ ಪ್ಲೇಆಫ್​ನಲ್ಲಿ 4 ಪಂದ್ಯಗಳನ್ನು ಆಡಲಾಗುತ್ತದೆ.

ಇನ್ನು ಲೀಗ್​ ಹಂತದ ಒಟ್ಟು 70 ಪಂದ್ಯಗಳನ್ನು ಮುಂಬೈ ಹಾಗೂ ಪುಣೆಯ 4 ಸ್ಟೇಡಿಯಂಗಳಲ್ಲಿ ಆಡಲಾಗುತ್ತದೆ. ಅದರಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ನಡೆಯಲಿದೆ. ಹಾಗೆಯೇ ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 15 ಪಂದ್ಯಗಳು ಜರುಗಲಿದೆ. ಈ ಪಂದ್ಯಗಳ ಬಳಿಕ ಪ್ಲೇ ಆಫ್​ಗೆ ಮೈದಾನವನ್ನು ನಿರ್ಧರಿಸಲಾಗುತ್ತದೆ. ಸದ್ಯ ಮಾಹಿತಿ ಪ್ರಕಾರ ಪ್ಲೇ ಆಫ್ ಪಂದ್ಯವು ಅಹಮದಾಬಾದ್​ನಲ್ಲಿ ನಡೆಯುವ ಸಾಧ್ಯತೆಯಿದೆ. ಇನ್ನು ಫೈನಲ್ ಪಂದ್ಯವು ಮೇ 29 ರಂದು ನಡೆಯಲಿದೆ.

ಗ್ರೂಪ್- A ತಂಡಗಳು:

ಮುಂಬೈ ಇಂಡಿಯನ್ಸ್​

ಕೊಲ್ಕತ್ತಾ ನೈಟ್ ರೈಡರ್ಸ್​

ರಾಜಸ್ಥಾನ್ ರಾಯಲ್ಸ್

ಡೆಲ್ಲಿ ಕ್ಯಾಪಿಟಲ್ಸ್​

ಲಕ್ನೋ ಸೂಪರ್ ಜೈಂಟ್ಸ್​

ಗ್ರೂಪ್- B ತಂಡಗಳು:

ಚೆನ್ನೈ ಸೂಪರ್ ಕಿಂಗ್ಸ್​

ರಾಯಲ್ ಚಾಲೆಂಜರ್ಸ್​ ಬೆಂಗಳೂರು

ಪಂಜಾಬ್ ಕಿಂಗ್ಸ್​

ಸನ್​ರೈಸರ್ಸ್​ ಹೈದರಾಬಾದ್

ಗುಜರಾತ್ ಟೈಟನ್ಸ್

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada