ಐಪಿಎಲ್ ಸೀಸನ್ 15 ನಲ್ಲಿ ಆರ್‌ಸಿಬಿ ಪರ ದಿನೇಶ್ ಕಾರ್ತಿಕ್ ಅಬ್ಬರಿಸುತ್ತಿದ್ದಾರೆ. ಆಡಿರುವ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ತಂಡದ ಫಿನಿಶರ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ರಾಜಸ್ಥಾನ್ ರಾಯಲ್ಸ್ ವಿರುದ್ದ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಮಿಂಚಿದ್ದರು. ಈ ಭರ್ಜರಿ ಬ್ಯಾಟಿಂಗ್ ಬೆನ್ನಲ್ಲೇ ಇದೀಗ ದಿನೇಶ್ ಕಾರ್ತಿಕ್ ಅವರ ಟೀಮ್ ಇಂಡಿಯಾ ಕಂಬ್ಯಾಕ್ ಬಗ್ಗೆ ಚರ್ಚೆಗಳು ಶುರುವಾಗಿದೆ. ಏಕೆಂದರೆ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಇದಕ್ಕಾಗಿ ಆಯ್ಕೆ ಮಾಡಲಾಗುವ ತಂಡದಲ್ಲಿ ದಿನೇಶ್ ಕಾರ್ತಿಕ್ ಸ್ಥಾನ ಪಡೆಯಲಿದ್ದಾರೆ ಎಂದಿದ್ದಾರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ.
ದಿನೇಶ್ ಕಾರ್ತಿಕ್ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗಾಗಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದಾರೆ. ದಿನೇಶ್ ಕಾರ್ತಿಕ್ ಇಲ್ಲಿಯವರೆಗೆ 204.55 ಸ್ಟ್ರೈಕ್ ರೇಟ್‌ನಲ್ಲಿ 90 ರನ್ ಗಳಿಸಿದ್ದಾರೆ. ವಿಶೇಷ ಎಂದರೆ ಅವರು ಒಂದೇ ಒಂದು ಪಂದ್ಯದಲ್ಲೂ ಔಟ್ ಆಗಿಲ್ಲ. ಪ್ರಸ್ತುತ ಅವರ ಫಾರ್ಮ್ ಗಮನಿಸಿದರೆ ಟಿ20 ವಿಶ್ವಕಪ್ಗೆ ಡಿಕೆ ಆಯ್ಕೆಯಾಗಲಿದ್ದಾರೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಡಿಕೆ ನಿಜವಾಗಿಯೂ ಉತ್ತಮವಾಗಿ ಆಡುತ್ತಿದ್ದಾರೆ. ವಯಸ್ಸು ಕೇವಲ ಸಂಖ್ಯೆಯಾಗಿದೆ. ಯಾರಾದರೂ ಚೆನ್ನಾಗಿ ಆಡುತ್ತಿದ್ದರೆ ವಯಸ್ಸು ಹೇಗೆ ಮುಖ್ಯವಾಗುತ್ತದೆ? ಒಂದು ದೊಡ್ಡ ವಿಷಯವೆಂದರೆ ಅವರು ಬ್ಯಾಟಿಂಗ್ ಮಾಡುತ್ತಿರುವ ಕ್ರಮಾಂಕವೇ, ಈಗ ಟೀಮ್ ಇಂಡಿಯಾಗೆ ಮುಖ್ಯವಾಗಿದೆ. ಆದರೆ ಅವರ ಪ್ರತಿಸ್ಪರ್ಧಿ ಯಾರು ಎಂಬುದನ್ನು ನೀವು ನೋಡಬೇಕು. ದೀಪಕ್ ಹೂಡಾ ಕೂಡ ಸ್ಪರ್ಧಿಯಾಗಿದ್ದು, ಅವರು ಸ್ವಲ್ಪ ಆಫ್ ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಆದರೆ ಇದೇ ಫಾರ್ಮ್ ಮುಂದುವರೆಸಿದರೆ ಕಾರ್ತಿಕ್ ಮೊದಲ ಆಯ್ಕೆಯಾಗಲಿದ್ದಾರೆ ಎಂದು ಚೋಪ್ರಾ ಹೇಳಿದರು.
ಐಪಿಎಲ್ ಸೀಸನ್ 15ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೆ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದಿದೆ. ಈ ಎಲ್ಲಾ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಅವರ ಪ್ರದರ್ಶನ ಅದ್ಭುತವಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 44 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿ ತಂಡದ ಸ್ಮರಣೀಯ ಗೆಲುವಿಗೆ ಕಾರಣರಾದರು. 2019 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಪರ ದಿನೇಶ್ ಕಾರ್ತಿಕ್ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಆ ಬಳಿಕ ಟೀಂ ಇಂಡಿಯಾಗೆ ಮರಳಲು ಸಾಧ್ಯವಾಗಿಲ್ಲ. ಇದೀಗ ಅಬ್ಬರದ ಬ್ಯಾಟಿಂಗ್ ಮೂಲಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಡುವ ಇರಾದೆಯಲ್ಲಿದ್ದಾರೆ ದಿನೇಶ್ ಕಾರ್ತಿಕ್.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?