IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಬಾರಿಯ ಐಪಿಎಲ್ನಲ್ಲಿ ಕೇವಲ ಆಟಗಾರನಾಗಿ ಮಾತ್ರ ಕಾಣಿಸಿಕೊಂಡಿರುವ ಕೊಹ್ಲಿ ರನ್ಗಳಿಸಲು ಪರದಾಡುತ್ತಿರುವುದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ. ಏಕೆಂದರೆ ಕಳೆದ 8 ಪಂದ್ಯಗಳಿಂದ ವಿರಾಟ್ ಕೊಹ್ಲಿ ಕಲೆಹಾಕಿದ್ದು ಕೇವಲ 119 ರನ್ ಮಾತ್ರ. ಅಂದರೆ ಎರಡು ಇನಿಂಗ್ಸ್ಗಳಲ್ಲಿ 40 ಕ್ಕಿಂತ ಅಧಿಕ ರನ್ಗಳಿಸಿದ ಬಳಿಕ ಕೊಹ್ಲಿ ಸತತವಾಗಿ ವಿಫಲರಾಗಿದ್ದಾರೆ. ಅಲ್ಲದೆ ಎರಡು ಇನಿಂಗ್ಸ್ನಲ್ಲಿ ಬ್ಯಾಕ್ ಟು ಬ್ಯಾಕ್ ಗೋಲ್ಡನ್ ಡಕ್ ಔಟ್ ಆಗಿದ್ದಾರೆ. ಹೀಗಾಗಿಯೇ ವಿರಾಟ್ ಕೊಹ್ಲಿಯ ಫಾರ್ಮ್ ಇದೀಗ ಭಾರೀ ಚರ್ಚಗೆ ಗ್ರಾಸವಾಗಿದೆ. ಆದರೆ ಕೊಹ್ಲಿಯ ಕೆಟ್ಟ ಪ್ರದರ್ಶನದ ಬಗ್ಗೆ ಆರ್ಸಿಬಿ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ವಿರಾಟ್ ಕೊಹ್ಲಿ ಕಳಪೆ ಫಾರ್ಮ್ನಲ್ಲಿದ್ದಾರೆ ನಿಜ. ಆದರೆ ಅವರಿಗೆ ಆರ್ಸಿಬಿ ಟೀಮ್ ಮ್ಯಾನೇಜ್‌ಮೆಂಟ್ ಯಾವುದೇ ಸಲಹೆ ನೀಡಬಾರದು. ಅವರ ಫಾರ್ಮ್ ಬಗ್ಗೆ ಅವರೇ ಯೋಚಿಸಲಿ. ಈ ಮೂಲಕ ಖುದ್ದು ಕೊಹ್ಲಿಯೇ ತಮ್ಮ ತಪ್ಪುಗಳನ್ನು ತಿದ್ದಿ ಕಂಬ್ಯಾಕ್ ಮಾಡಲಿ ಎಂದು ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ.
ಕಳಪೆ ಫಾರ್ಮ್‌ನಿಂದ ಹೊರಬರಲು ವಿರಾಟ್ ಕೊಹ್ಲಿ ತಮ್ಮದೇ ಆದ ಮಾರ್ಗವನ್ನು ಕಂಡುಕೊಳ್ಳಬೇಕು. ಏಕೆಂದರೆ ಕೊಹ್ಲಿಗೆ ಯಾರ ಸಲಹೆಯೂ ಬೇಕಾಗಿಲ್ಲ. ಅವರು ಕೂಡ ಅನುಭವಿ ಆಟಗಾರ. ಹೀಗಾಗಿ ಅವರ ತಪ್ಪುಗಳು ಅವರಿಗೂ ಕೂಡ ಗೊತ್ತಿರುತ್ತದೆ. ಅದರಂತೆ ಅವರು ಮುಂದಿನ ಪಂದ್ಯಗಳಲ್ಲಿ ತಮ್ಮ ತಪ್ಪುಗಳನ್ನು ಸರಿಪಡಿಸಲಿದ್ದಾರೆ ಎಂಬುದರ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ ಎಂದು ವೆಟ್ಟೋರಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಕೊಹ್ಲಿ ಕಳಪೆ ಫಾರ್ಮ್ನಲ್ಲಿದ್ದಾರೆ ಎಂದು ಅವರಿಗೆ ಸಲಹೆಗಳನ್ನು ನೀಡಲು ಹೋದರೆ ಅದು ದೊಡ್ಡ ತಪ್ಪಾಗುತ್ತದೆ. ಇದರಿಂದ ಅವರ ಬ್ಯಾಟಿಂಗ್ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು. ಹೀಗಾಗಿ ಅವರ ತಪ್ಪುಗಳನ್ನು ಅವರೇ ತಿದ್ದಿಕೊಳ್ಳುವುದು ಉತ್ತಮ. ಹಾಗಾಗಿ ಆರ್ಸಿಬಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಗಲಿ ಅಥವಾ ಇನ್ನಿತರರಾಗಲಿ ಯಾರು ಕೂಡ ಸಲಹೆ ನೀಡಬೇಡಿ ಎಂದು ವೆಟ್ಟೋರಿ ಇದೇ ವೇಳೆ ತಿಳಿಸಿದರು.
ಅಲ್ಲದೆ ನಿಮ್ಮ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ನೀವು ಪಂದ್ಯಗಳನ್ನು ಗೆಲ್ಲುವಂತೆ ಮಾಡುತ್ತೀರಿ ಎಂದು ಈ ಸಮಯದಲ್ಲಿ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಹೇಳಬೇಕಿದೆ. ಈ ಮೂಲಕ ಅವರರಲ್ಲಿ ಆತ್ಮವಿಶ್ವಾಸ ಮೂಡುವಂತೆ ಮಾಡಬೇಕಿದೆ ಎಂದು ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ.
ಇದನ್ನೂ ಓದಿ: Virat Kohli: IPL ನಲ್ಲಿ ವಿರಾಟ್ ಕೊಹ್ಲಿ ಎಷ್ಟು ಬಾರಿ ಝೀರೊಗೆ ಔಟಾಗಿದ್ದಾರೆ ಗೊತ್ತಾ?
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್