IPL 2022: ಆರ್ಸಿಬಿ (RCB) ವಿರುದ್ದದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ತಂಡವು ಸೋತಿರಬಹುದು. ಆದರೆ ಆರ್ಸಿಬಿ ವಿರುದ್ದವೇ ವಿಶೇಷ ದಾಖಲೆಯೊಂದನ್ನು ಬರೆಯುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಯಶಸ್ವಿಯಾಗಿದ್ದಾರೆ. ಈ ಪಂದ್ಯದಲ್ಲಿ ವಾರ್ನರ್ 38 ಎಸೆತಗಳಲ್ಲಿ 66 ರನ್ ಬಾರಿಸಿದ್ದರು. ಇದರಲ್ಲಿ 4 ಫೋರ್ ಹಾಗೂ 5 ಸಿಕ್ಸ್ ಒಳಗೊಂಡಿತ್ತು. ಈ ಐದು ಸಿಕ್ಸ್ನೊಂದಿಗೆ ಆರ್ಸಿಬಿ ವಿರುದ್ದ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆಯನ್ನು ವಾರ್ನರ್ ಬರೆದಿದ್ದಾರೆ.
ವಾರ್ನರ್ ಐಪಿಎಲ್ನಲ್ಲಿ ಇದುವರೆಗೆ 207 ಸಿಕ್ಸ್ ಬಾರಿಸಿದ್ದಾರೆ. ಇದರಲ್ಲಿ ಆರ್ಸಿಬಿ ವಿರುದ್ದ ಬಾರಿಸಿರುವುದು 54 ಸಿಕ್ಸ್ಗಳು. ಅಂದರೆ ಐಪಿಎಲ್ನಲ್ಲಿ ಆರ್ಸಿಬಿ ವಿರುದ್ದ 50 ಸಿಕ್ಸ್ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಡೇವಿಡ್ ವಾರ್ನರ್ ಬರೆದಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ವಿರುದ್ದ ಯಾರೂ ಕೂಡ ಮಾಡದ ದಾಖಲೆಯನ್ನು ಡೇವಿಡ್ ವಾರ್ನರ್ ನಿರ್ಮಿಸಿದ್ದಾರೆ. ಸದ್ಯ ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಒಟ್ಟು 357 ಸಿಕ್ಸ್ ಬಾರಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಅನೂಜ್ ರಾವತ್ ಶೂನ್ಯಕ್ಕೆ ಔಟಾದರೆ, ಫಾಫ್ ಡುಪ್ಲೆಸಿಸ್ 8 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ರನೌಟ್ ಆಗಿ ಹೊರನಡೆದಿದ್ದರು. ಈ ಹಂತದಲ್ಲಿ ಅಬ್ಬರಿಸಿದ ಗ್ಲೆನ್ ಮ್ಯಾಕ್ಸ್ವೆಲ್ 34 ಎಸೆತಗಳಲ್ಲಿ 55 ರನ್ ಬಾರಿಸಿ ನಿರ್ಗಮಿಸಿದರು.
ತಂಡದ ಮೊತ್ತ 95 ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್ಸಿಬಿಗೆ ಈ ಹಂತದಲ್ಲಿ ಆಸರೆಯಾಗಿದ್ದು ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹ್ಮದ್. 6ನೇ ವಿಕೆಟ್ಗೆ ಅತ್ಯುತ್ತಮ ಜೊತೆಯಾಟವಾಡಿದ ಈ ಜೋಡಿ ತಂಡದ ರನ್ಗತಿಯನ್ನು ಹೆಚ್ಚಿಸಿದರು. ಅದರಲ್ಲೂ ದಿನೇಶ್ ಕಾರ್ತಿಕ್ ಅಕ್ಷರಶಃ ಅಬ್ಬರಿಸಿದರು. ಮುಸ್ತಫಿಜುರ್ ರೆಹಮಾನ್ ಎಸೆದ 18ನೇ ಓವರ್ನಲ್ಲಿ 28 ರನ್ ಬಾರಿಸುವ ಮೂಲಕ ಡಿಕೆ ಅರ್ಧಶತಕ ಪೂರೈಸಿದ್ದರು. ಅಲ್ಲದೆ ಅಂತಿಮ ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಶಹಬಾಜ್ ಹಾಗೂ ದಿನೇಶ್ ಕಾರ್ತಿಕ್ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 189 ಕ್ಕೆ ತಂದು ನಿಲ್ಲಿಸಿದರು.
190 ರನ್ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 66 ರನ್ ಬಾರಿಸಿ ಅಬ್ಬರಿಸಿದರೆ, ಮಧ್ಯಮ ಕ್ರಮಾಂಕದಲ್ಲಿ 17 ಎಸೆತಗಳಲ್ಲಿ 34 ರನ್ ಬಾರಿಸಿ ರಿಷಭ್ ಪಂತ್ ಪಂದ್ಯ ಗೆಲ್ಲಿಸುವ ಭರವಸೆಯನ್ನು ಹುಟ್ಟುಹಾಕಿದ್ದರು. ಆದರೆ ಪಂತ್ ಔಟ್ ಆಗುತ್ತಿದ್ದಂತೆ ಡೆಲ್ಲಿ ತಂಡವು ದಿಢೀರ್ ಕುಸಿತಕ್ಕೊಳಗಾಯಿತು. ತಂಡದ ಪರ ಪೃಥ್ವಿ ಶಾ 16, ಮಿಚೆಲ್ ಮಾರ್ಷ್ 14, ರೋವ್ಮನ್ ಪೊವೆಲ್ 0, ಲಲಿತ್ ಯಾದವ್ 1 ವಿಫಲರಾಗಿದ್ದರು. ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 173 ರನ್ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 16 ರನ್ಗಳಿಂದ ಸೋಲೋಪ್ಪಿಕೊಂಡಿತು.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ