ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆರ್‌ಸಿಬಿ (RCB) ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ದ ನಡೆದ ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕೇವಲ 23 ಎಸೆತಗಳಲ್ಲಿ ಅಜೇಯ 44 ರನ್ ಗಳಿಸಿ ಆರ್ಸಿಬಿಗೆ ರೋಚಕ ಗೆಲುವು ತಂದುಕೊಟ್ಟಿದ್ದರು. ಈ ಗೆಲುವಿನ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್, ದಿನೇಶ್ ಕಾರ್ತಿಕ್ ಅವರನ್ನು ಎಂಎಸ್ ಧೋನಿಗೆ ಹೋಲಿಸಿದ್ದಾರೆ. ಧೋನಿ (ಎಂಎಸ್ ಧೋನಿ) ವಿಶ್ವದ ಅತ್ಯುತ್ತಮ ಫಿನಿಶರ್. ದಿನೇಶ್ ಕಾರ್ತಿಕ್ ಅವರಲ್ಲೂ ಅಂತಹ ಸಾಮರ್ಥ್ಯವಿದೆ. ಅವರು ಒತ್ತಡ ಸಮಯದಲ್ಲಿ ಬ್ಯಾಟ್ ಬೀಸಿದ ರೀತಿ ಶ್ಲಾಘನೀಯ ಎಂದು ಡು ಪ್ಲೆಸಿಸ್ ಹೇಳಿದರು .
ನಾನು ನೋಡಿದಂತೆ ಎಂಎಸ್ ಧೋನಿ ವಿಶ್ವದ ಅತ್ಯುತ್ತಮ ಮ್ಯಾಚ್ ಫಿನಿಶರ್. ದಿನೇಶ್ ಕಾರ್ತಿಕ್ ಕೂಡ ಅತ್ಯಂತ ಅಪಾಯಕಾರಿ ಆಟಗಾರ. ಧೋನಿಯಂತೆ ದಿನೇಶ್ ಕಾರ್ತಿಕ್ ಪಂದ್ಯದ ಒತ್ತಡದ ಸಮಯದಲ್ಲಿ ಶಾಂತವಾಗಿರುತ್ತಾರೆ. ಇದಾಗ್ಯೂ ಪಂದ್ಯಗಳನ್ನು ಮುಗಿಸುವ ಆತ್ಮವಿಶ್ವಾಸವನ್ನು ಹೊಂದಿರುವ ರೀತಿ ನಿಜವಾಗಿಯೂ ಅದ್ಭುತವಾಗಿದೆ ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.
ಟೀಮ್ ಇಂಡಿಯಾ ಆಯ್ಕೆ ಮಾಡಿ:
ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಕ್ರಿಕೆಟ್ ಆಡಬೇಕು ಎಂದು RCB ವೆಬ್‌ಸೈಟ್‌ನಲ್ಲಿ ನಡೆದ ಸಂಭಾಷಣೆಯ ಸಮಯದಲ್ಲಿ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ. ‘ದಿನೇಶ್ ಕಾರ್ತಿಕ್ ಆಡುತ್ತಿರುವ ರೀತಿ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಹೆಸರು ಮತ್ತೊಮ್ಮೆ ಬರಬೇಕು ಎಂದು ನಾನು ಬಯಸುತ್ತೇನೆ’ ಎಂದು ಡು ಪ್ಲೆಸಿಸ್ ಹೇಳಿದ್ದಾರೆ. ದಿನೇಶ್ ಕಾರ್ತಿಕ್ 2019 ರಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ಇದೀಗ ಐಪಿಎಲ್ನಲ್ಲಿ ಅಬ್ಬರಿಸುತ್ತಿರುವ ಡಿಕೆಗೆ ಮತ್ತೊಮ್ಮೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡಬೇಕೆಂದು ಡುಪ್ಲೆಸಿಸ್ ಅಭಿಪ್ರಾಯಪಟ್ಟಿದ್ದಾರೆ.
ಏಕೆಂದರೆ ಈ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಐಪಿಎಲ್ 2022ರಲ್ಲಿ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿದರೆ ಮುಂಬರುವ ವಿಶ್ವಕಪ್ಗೆ ಡಿಕೆ ಹೆಸರನ್ನು ಪರಿಗಣಿಸಬಹುದು. ಇದೀಗ ಫಾಫ್ ಡುಪ್ಲೆಸಿಸ್ ಹೇಳಿಕೆಯಿಂದಾಗಿ ಟೀಮ್ ಇಂಡಿಯಾಗೆ ಡಿಕೆಯ ಕಂಬ್ಯಾಕ್ ಮಹತ್ವ ಪಡೆದುಕೊಂಡಿದೆ.
ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ದ ಅಬ್ಬರಿಸಿರುವ ಬಗ್ಗೆ ಮಾತನಾಡಿರುವ ದಿನೇಶ್ ಕಾರ್ತಿಕ್, ‘ನಾನು ತಂಡಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇನೆ. ಕಳೆದ ಕೆಲವು ವರ್ಷಗಳಲ್ಲಿ ನಾನು ಉತ್ತಮವಾಗಿ ಆಡಬಹುದೆಂದು ನಾನು ಭಾವಿಸಿದ್ದೇನೆ. ನನ್ನ ಇನ್ನಿಂಗ್ಸ್ ಇನ್ನೂ ಮುಗಿದಿಲ್ಲ ಎಂದು ನಾನೇ ಹೇಳಿಕೊಳ್ಳುತ್ತಿದ್ದೇನೆ. ನನಗೆ ಒಂದು ಗುರಿ ಇದೆ ಮತ್ತು ನಾನು ಏನನ್ನಾದರೂ ಸಾಧಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಇನ್ನು ಅತ್ಯುತ್ತಮ ಇನ್ನಿಂಗ್ಸ್‌ಗಾಗಿ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇಲ್ಲಿಯವರೆಗಿನ ಎಲ್ಲಾ ಮೂರು ಪಂದ್ಯಗಳಲ್ಲಿ ಕಾರ್ತಿಕ್ ಅದ್ಭುತ ಕೊಡುಗೆ ನೀಡಿದ್ದಾರೆ. ಅದರಲ್ಲಿ ಆರ್‌ಸಿಬಿ ತಂಡವು ಎರಡರಲ್ಲಿ ಗೆದ್ದಿದೆ. ವಿಶೇಷ ಎಂದರೆ ಈ ಮೂರು ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಔಟಾಗಿಲ್ಲ.
ಇದನ್ನೂ ಓದಿ: KL Rahul: ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಸಾಧನೆ ಮಾಡಿದ ಕೆಎಲ್ ರಾಹುಲ್