IPL 2022: ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ 23 ಸ್ಟಾರ್ ಆಟಗಾರರು ಅಲಭ್ಯ

| Updated By: ಝಾಹಿರ್ ಯೂಸುಫ್

Updated on: Mar 26, 2022 | 3:31 PM

IPL 2022: 65 ದಿನಗಳ ನಡೆಯಲಿರುವ ಈ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಕೆಲ ವಿದೇಶಿ ಸ್ಟಾರ್ ಆಟಗಾರರು ಅಲಭ್ಯರಾಗಲಿದ್ದಾರೆ. ಅವರೆಂದರೆ...

IPL 2022: ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ 23 ಸ್ಟಾರ್ ಆಟಗಾರರು ಅಲಭ್ಯ
IPL 2022
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಸೀಸನ್ 15 ಗೆ ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ಚಾಲನೆ ದೊರೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಸೆಣಸಲಿದೆ. ಈ ಬಾರಿ ಒಟ್ಟು ಹತ್ತು ತಂಡಗಳು ಚಾಂಪಿಯನ್​ ಪಟ್ಟಕ್ಕಾಗಿ ಸೆಣಸಾಡಲಿದೆ. 65 ದಿನಗಳ ನಡೆಯಲಿರುವ ಈ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಕೆಲ ಸ್ಟಾರ್ ಆಟಗಾರರು ಅಲಭ್ಯರಾಗಲಿದ್ದಾರೆ. ಅವರೆಂದರೆ…

ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ ಮುನ್ನಡೆಸುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ಆಟಗಾರರು ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವರೆಂದರೆ ವೆಸ್ಟ್ ಇಂಡೀಸ್​ನ ಜೇಸನ್ ಹೋಲ್ಡರ್, ಕೈಲ್ ಮೇಯರ್ಸ್. ಈ ಇಬ್ಬರು ಆಟಗಾರರು ಇಂಗ್ಲೆಂಡ್ ವಿರುದ್ದ ಸರಣಿ ಆಡುತ್ತಿದ್ದಾರೆ. ಹೀಗಾಗಿ ಆ ಸರಣಿ ಮುಗಿದ ಬಳಿಕವಷ್ಟೇ ತಂಡವನ್ನು ಸೇರಿಕೊಳ್ಳಲ್ಲಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ ಮಾರ್ಕಸ್ ಸ್ಟೋಯಿನಿಸ್ ಕೂಡ ಪಾಕಿಸ್ತಾನ್ ವಿರುದ್ದ ಸರಣಿ ಆಡಬೇಕಿದ್ದು, ಹೀಗಾಗಿ ಏಪ್ರಿಲ್ 6 ರ ಬಳಿಕವಷ್ಟೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಆಟಗಾರ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಹಾಗೆಯೇ ವೆಸ್ಟ್ ಇಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ ನೇತೃತ್ವದ ಸಿಎಸ್​ಕೆ ತಂಡವು ತನ್ನ ಆರಂಭಿಕ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಡ್ವೈನ್ ಪ್ರಿಟೋರಿಯಸ್ ಸೇವೆಯನ್ನು ಕಳೆದುಕೊಳ್ಳಲಿದೆ. ಹಾಗೆಯೇ ಗಾಯಗೊಂಡಿರುವ ದೀಪಕ್ ಚಹರ್ ಕೂಡ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡವು ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು 8 ಕೋಟಿ ರೂ.ಗೆ ಖರೀದಿಸಿದೆ. ಆದರೆ ಅವರು ಗಾಯದ ಕಾರಣ ಆರ್ಚರ್ ಐಪಿಎಲ್​ನ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಕೋಲ್ಕತ್ತಾ ನೈಟ್ ರೈಡರ್ಸ್: ಪಾಕ್ ವಿರುದ್ದ ಸರಣಿ ಆಡುತ್ತಿರುವ ಆಸ್ಟ್ರೇಲಿಯಾ ಆಟಗಾರರಾದ ಪ್ಯಾಟ್ ಕಮಿನ್ಸ್ ಮತ್ತು ಆರೋನ್ ಫಿಂಚ್ ಏಪ್ರಿಲ್ 5 ರ ಬಳಿಕವಷ್ಟೇ ಕೆಕೆಆರ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಕೂಡ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ ನೇತೃತ್ವದ ಎಸ್​ಆರ್​ಹೆಚ್​ ತಂಡವು ದಕ್ಷಿಣ ಆಫ್ರಿಕಾದ ಕ್ರಿಕೆಟಿಗರಾದ ಮಾರ್ಕೊ ಜಾನ್ಸೆನ್, ಐಡೆನ್ ಮಾರ್ಕ್ರಾಮ್ ಮತ್ತು ಸೀನ್ ಅಬಾಟ್ ಅವರ ಸೇವೆಯನ್ನು ತಪ್ಪಿಸಿಕೊಳ್ಳಲಿದೆ. ಈ ಮೂವರು ಬಾಂಗ್ಲಾದೇಶ ವಿರುದ್ಧದ ಸೀಮಿತ ಓವರ್‌ಗಳ ಸರಣಿಯ ಮುಕ್ತಾಯದ ನಂತರ ಭಾರತಕ್ಕೆ ಆಗಮಿಸಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್ ನೇತೃತ್ವದ ಡೆಲ್ಲಿ ತಂಡವು ಆರಂಭಿಕ ಪಂದ್ಯಗಳಿಗೆ ಪ್ರಮುಖ ಆಟಗಾರರನ್ನೇ ಕಳೆದುಕೊಳ್ಳಲಿದೆ. ತಂಡದಲ್ಲಿರುವ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮುಸ್ತಾಫಿಜುರ್ ರೆಹಮಾನ್ ಮತ್ತು ಲುಂಗಿ ಎನ್‌ಗಿಡಿ ಅವರು ರಾಷ್ಟ್ರೀಯ ತಂಡಗಳ ಪರ ಆಡುತ್ತಿದ್ದಾರೆ. ಹೀಗಾಗಿ ಈ ಆಟಗಾರರು ಡೆಲ್ಲಿ ತಂಡದ ಮೂರು-ನಾಲ್ಕು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಇನ್ನು ಗಾಯಗೊಂಡಿರುವ ಅನ್ರಿಕ್ ನೋಕಿಯಾ ಕೂಡ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್​ಸಿಬಿ ತಂಡದ ಆರಂಭಿಕ ಪಂದ್ಯಗಳಿಗೆ ಆಸ್ಟ್ರೇಲಿಯಾದ ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಹ್ಯಾಝಲ್‌ವುಡ್ ಮತ್ತು ಜೇಸನ್ ಬೆಹ್ರೆನ್‌ಡಾರ್ಫ್ ಕಾಣಿಸಿಕೊಳ್ಳುವುದಿಲ್ಲ. ಹ್ಯಾಝಲ್‌ವುಡ್ ಮತ್ತು ಬೆಹ್ರೆನ್‌ಡಾರ್ಫ್ ಪಾಕಿಸ್ತಾನದ ವಿರುದ್ಧದ ಸೀಮಿತ-ಓವರ್‌ಗಳ ಸರಣಿಗೆ ಆಯ್ಕೆಯಾಗಿದ್ದಾರೆ. ಇನ್ನು ಮ್ಯಾಕ್ಸ್‌ವೆಲ್ ತಮ್ಮ ವಿವಾಹದ ಕಾರಣ IPL 2022 ರ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಪಂದ್ಯಗಳಿಗೆ ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಮತ್ತು ಆಸ್ಟ್ರೇಲಿಯಾದ ನಾಥನ್ ಎಲ್ಲಿಸ್ ಅಲಭ್ಯರಾಗಿದ್ದಾರೆ. ಈ ಇಬ್ಬರು ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಕಾರಣ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು