ಇಂಡಿಯನ್ ಪ್ರೀಮಿಯರ್ ಲೀಗ್ 2022 ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಇಶಾನ್ ಕಿಶನ್ ಬಿಕರಿಯಾಗಿದ್ದರು. ಯುವ ವಿಕೆಟ್ ಕೀಪರ್ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡವು 15.25 ಕೋಟಿ ನೀಡಿ ಕಿಶನ್ ಅವರನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೂಡ ಇಶಾನ್ ಕಿಶನ್ ಮೇಲೆ ಕಣ್ಣಿಟ್ಟಿದ್ದರೂ, ಕೊನೆಗೂ ಖರೀದಿಸಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೆ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಅವರನ್ನು SRH ಫ್ರಾಂಚೈಸಿ 10.75 ಕೋಟಿಗೆ ಖರೀದಿಸಿದಾಗ ಅಭಿಮಾನಿಗಳು ಆಶ್ಚರ್ಯಚಕಿತರಾದರು . ಏಕೆಂದರೆ ಈ ಎಡಗೈ ಬ್ಯಾಟ್ಸ್‌ಮನ್ ಐಪಿಎಲ್‌ನಲ್ಲಿ ಅಂತಹ ಪ್ರದರ್ಶನ ನೀಡಿರಲಿಲ್ಲ. ಇದಾಗ್ಯೂ ಸನ್‌ರೈಸರ್ಸ್ ಹೈದರಾಬಾದ್ ಪೂರನ್‌ಗಾಗಿ ಸುಮಾರು 10.75 ಕೋಟಿ ಖರ್ಚು ಮಾಡಿತು.
ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಇಷ್ಟೊಂದು ಮೊತ್ತ ನೀಡಿ ಪೂರನ್ ಅವರನ್ನು ಯಾಕೆ ಖರೀದಿಸಿತು ? ಎಂಬ ಪ್ರಶ್ನೆಗೆ ಇದೀಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ಉತ್ತರ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಮುರಳೀಧರನ್, ನಾವು ಇಶಾನ್ ಕಿಶನ್ ಅವರನ್ನು ಖರೀದಿಸಲು ಬಯಸಿದ್ದೆವು. ಆದರೆ ಬಿಡ್ ನಮ್ಮ ಬಜೆಟ್‌ಗಿಂತ ಹೆಚ್ಚಾದಾಗ ನಾವು ಇತರ ಆಯ್ಕೆಗಳನ್ನು ಹುಡುಕಲು ಪ್ರಾರಂಭಿಸಿದ್ದೇವೆ. ಜಾನಿ ಬೈರ್‌ಸ್ಟೋವ್ ಲಭ್ಯವಿದ್ದರು. ಆದರೆ ಅವರು ಇಡೀ ಸೀಸನ್ನಲ್ಲಿ ಇರುತ್ತಾರೋ ಇಲ್ಲವೋ ಎಂಬ ಅನುಮಾನ ನಮಗೆ ಇತ್ತು. ಪ್ರತಿ ಪಂದ್ಯದಲ್ಲೂ ಆಡಬಲ್ಲ ಅಂತರಾಷ್ಟ್ರೀಯ ವಿಕೆಟ್ ಕೀಪರ್ ನಮಗೆ ಅವಶ್ಯಕತೆಯಿತ್ತು. ಹಾಗಾಗಿ ಪೂರನ್ ಉತ್ತಮ ಆಯ್ಕೆ ಎಂದು ಭಾವಿಸಿದ್ದೆವು. ಅದರಂತೆ ಪೂರನ್ ಅವರನ್ನು ಖರೀದಿಸಲಾಯಿತು ಎಂದು ಮುರಳೀಧರನ್ ತಿಳಿಸಿದ್ದಾರೆ.
ಪೂರನ್ ಅಬ್ಬರ ಶುರು:
ಮೆಗಾ ಹರಾಜಿಗೂ ಮುನ್ನ ನಿಕೋಲಸ್ ಪೂರನ್ ಅವರನ್ನು ಖರೀದಿಸುವುದು ದೊಡ್ಡ ಅಪಾಯ ಎಂದು ಹೇಳಲಾಗುತ್ತಿತ್ತು. ಆದರೆ ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಈ ವೆಸ್ಟ್ ಇಂಡೀಸ್ ಆಟಗಾರ ಅದ್ಭುತ ಪ್ರದರ್ಶನ ನೀಡುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್‌ಗೆ ರಿಲೀಫ್ ನೀಡಿದೆ. ನಿಕೋಲಸ್ ಪೂರನ್ T20I ಸರಣಿಯಲ್ಲಿ ಅತ್ಯಧಿಕ 184 ರನ್ ಗಳಿಸಿದ್ದಾರೆ. ಮೂರು ಪಂದ್ಯಗಳಲ್ಲಿ ಅರ್ಧ ಶತಕಗಳನ್ನು ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಪೂರನ್ ಇಡೀ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ವಿರುದ್ದ ಟಿ20 ಸರಣಿಯ ಮೂಲಕ ಇದೀಗ ಪೂರನ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಪೂರನ್ ಅವರ ಐಪಿಎಲ್ ದಾಖಲೆ:
ನಿಕೋಲಸ್ ಪೂರನ್ ಐಪಿಎಲ್‌ನಲ್ಲಿ ಇದುವರೆಗೆ 33 ಪಂದ್ಯಗಳಲ್ಲಿ 606 ರನ್ ಗಳಿಸಿದ್ದಾರೆ. ಅದರಲ್ಲೂ ಕಳೆದ ಸೀಸನ್ನಲ್ಲಿ ಪೂರನ್ 12 ಪಂದ್ಯಗಳಲ್ಲಿ 7.72 ಸರಾಸರಿಯಲ್ಲಿ 85 ರನ್ ಮಾತ್ರ ಗಳಿಸಿದ್ದರು. ಇಡೀ ಸೀಸನ್ನಲ್ಲಿ ಕೇವಲ 5 ಸಿಕ್ಸ್ ಮತ್ತು 3 ಬೌಂಡರಿಗಳನ್ನು ಮಾತ್ರ ಬಾರಿಸಿದ್ದರು. ಇದಾಗ್ಯೂ ಈ ಬಾರಿ ಪೂರನ್ 10.75 ಕೋಟಿ ಕೋಟಿಗೆ ಹರಾಜಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದೀಗ ಟೀಮ್ ಇಂಡಿಯಾ ವಿರುದ್ದದ ಸರಣಿಯಲ್ಲಿ ಅಬ್ಬರಿಸುವ ಮೂಲಕ ಎಸ್ಆರ್ಹೆಚ್ ತಂಡದ ಖರೀದಿಯನ್ನು ನಿಕೋಲಸ್ ಪೂರನ್ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?
ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ
ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್
(IPL 2022: Muttiah Muralitharan Explains Why SRH Bought Nicholas Pooran)