IPL 2022: ಐಪಿಎಲ್ನ 39ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಆರ್ಸಿಬಿ (RCB vs RR) ತಂಡವು 29 ರನ್ಗಳಿಂದ ಹೀನಾಯವಾಗಿ ಸೋತಿದೆ. ಈ ಸೋಲಿನ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (Faf du Plessis), ಈ ಸೋಲಿಗೆ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳ ವೈಫಲ್ಯ ಕಾರಣ ಎಂದಿದ್ದಾರೆ. ನಾವು ನಾಲ್ವರೂ ಕೂಡ ಟಾಪ್ನಲ್ಲಿ ಚೆನ್ನಾಗಿ ಆಡಿಲ್ಲ. ನಮ್ಮ ಟಾಪ್ ಆರ್ಡರ್ ಅನ್ನು ಸರಿಪಡಿಸಬೇಕಾಗಿದೆ. ಏಕೆಂದರೆ ಮೇಲಿನ ಕ್ರಮಾಂಕದಲ್ಲಿ ನಾವು ಸ್ಥಿರವಾದ ಪ್ರದರ್ಶನ ನೀಡಿಲ್ಲ. ಇದರಿಂದಾಗಿ ನಾವು ಈ ಪಂದ್ಯದಲ್ಲೂ ವೈಫಲ್ಯ ಹೊಂದಿದೆವು ಎಂದು ಡುಪ್ಲೆಸಿಸ್ ಹೇಳಿದರು.
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ (Virat Kohli) ಅಗ್ರ ಕ್ರಮಾಂಕದಲ್ಲಿ ಬಡ್ತಿ ನೀಡಲಾಗಿತ್ತು. ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ ಮತ್ತೊಮ್ಮೆ ವಿಫಲರಾದರು. ಕೇವಲ 9 ರನ್ಗೆ ಇನಿಂಗ್ಸ್ ಅಂತ್ಯಗೊಳಿಸಿ ಮತ್ತೆ ನಿರಾಸೆ ಮೂಡಿಸಿದರು. ಈ ಬಗ್ಗೆ ಮಾತನಾಡಿದ ಡುಪ್ಲೆಸಿಸ್, ನಾವು ಇಂದು ಬ್ಯಾಟಿಂಗ್ ಲೈನ್-ಅಪ್ ಅನ್ನು ಬದಲಾಯಿಸಲು ಪ್ರಯತ್ನಿಸಿದ್ದೇವೆ. ಅದರಂತೆ ವಿರಾಟ್ ಕೊಹ್ಲಿ ಪಾಸಿಟಿವ್ ಆಗಿ ಆಡಲು ಪ್ರಯತ್ನಿಸಬಹುದು ಎಂದು ನಾವು ಭಾವಿಸುತ್ತೇವೆ.
ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡಲು ಸಾಧ್ಯವಿಲ್ಲ. ಏಕೆಂದರೆ ಅವರು ಶ್ರೇಷ್ಠ ಆಟಗಾರ. ಈ ರೀತಿಯ ಕಳಪೆ ಫಾರ್ಮ್ ಹಂತಗಳನ್ನು ಹಾದು ಹೋಗುತ್ತಾರೆ. ಇದು ಆತ್ಮವಿಶ್ವಾಸದ ಆಟವಾಗಿದೆ. ಅವರು ಮತ್ತೆ ಪುಟಿದೇಳುವ ವಿಶ್ವಾಸವಿದೆ. ಎಲ್ಲಾ ಶ್ರೇಷ್ಠ ಆಟಗಾರರು ಇಂತಹ ದುರ್ಬಲ ಹಂತಗಳನ್ನು ಎದುರಿಸುತ್ತಾರೆ. ಹೀಗಾಗಿ ಕೊಹ್ಲಿ ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರೀಕ್ಷೆಯನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ್ದ ಆರ್ಸಿಬಿ ಬೌಲರ್ಗಳು ಆರಂಭದಲ್ಲೇ ಯಶಸ್ಸು ಸಾಧಿಸಿದ್ದರು. ಪವರ್ಪ್ಲೇನಲ್ಲೇ 3 ವಿಕೆಟ್ ಉರುಳಿಸಿ ರಾಜಸ್ಥಾನ್ ರಾಯಲ್ಸ್ಗೆ ಆಘಾತ ನೀಡಿದ್ದರು. ಆದರೆ 6ನೇ ಕ್ರಮಾಂಕದಲ್ಲಿ ಆಡಿದ ರಿಯಾನ್ ಪರಾಗ್ ಅವರು ಮಾತ್ರ ಆರ್ಸಿಬಿ ಬೌಲರ್ಗಳ ವಿರುದ್ದ ತಿರುಗಿಬಿದ್ದರು.
29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಪರಾಗ್ ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಹೋದರು. ಅಲ್ಲದೆ ಅಂತಿಮವಾಗಿ 31 ಎಸೆತಗಳಲ್ಲಿ 51 ರನ್ ಬಾರಿಸಿ ರಾಜಸ್ಥಾನ್ ರಾಯಲ್ಸ್ ತಂಡದ ಮೊತ್ತವನ್ನು 144 ಕ್ಕೆ ತಂದು ನಿಲ್ಲಿಸಿದರು. 145 ರನ್ಗಳ ಸಾಧಾರಣ ಸವಾಲು ಪಡೆದ ಆರ್ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಬಡ್ತಿ ಪಡೆದಿದ್ದ ವಿರಾಟ್ ಕೊಹ್ಲಿ ಕೇವಲ 9 ರನ್ಗಳಿಸಿ ಔಟಾಗಿದ್ದರು. ಇದರ ಬೆನ್ನಲ್ಲೇ ಡುಪ್ಲೆಸಿಸ್ (23) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (0) ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಇನ್ನುಳಿದಂತೆ ರಜತ್ ಪಾಟಿದಾರ್ (16), ಸುಯಶ್ ಪ್ರಭುದೇಸಾಯಿ (2) ಬಂದ ವೇಗದಲ್ಲೇ ಹಿಂತಿರುಗಿದರು. ಇದಾಗ್ಯೂ ಶಹಬಾಜ್ ಅಹ್ಮದ್ (17) ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತರು. ಆದರೆ ಈ ವೇಳೆ ಕೆಟ್ಟ ರನ್ ಕರೆಯಿಂದಾಗಿ ದಿನೇಶ್ ಕಾರ್ತಿಕ್ (6) ಅವರು ರನೌಟ್ ಆದರು. ಇದರೊಂದಿಗೆ ಆರ್ಸಿಬಿ ತಂಡದ ಸೋಲು ಖಚಿತವಾಗಿತ್ತು. ಅಂತಿಮವಾಗಿ ಆರ್ಸಿಬಿ 19.3 ಓವರ್ಗಳಲ್ಲಿ 115 ರನ್ಗೆ ಆಲೌಟ್ ಆಗುವ ಮೂಲಕ 29 ರನ್ಗಳಿಂದ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ