Virat Kohli: ರವಿಶಾಸ್ತ್ರಿ ಕೊಹ್ಲಿಗೆ ಐಪಿಎಲ್‌ನಿಂದ ಹೊರ ಬಾ ಅಂತ ಹೇಳಿದ್ದು ಯಾಕೆ?
ವಿರಾಟ್ ಕೊಹ್ಲಿ ಶತಕ ಬಾರಿಸಿ 3 ವರ್ಷಗಳೇ ಕಳೆದಿವೆ. ಕೊಹ್ಲಿಯ ಬ್ಯಾಟ್ನಿಂದ ಕೊನೆಯ ಶತಕ ಮೂಡಿಬಂದಿದ್ದು 2019 ರಲ್ಲಿ. ಬಾಂಗ್ಲಾದೇಶದ ವಿರುದ್ಧ ಡೇ-ನೈಟ್ ಟೆಸ್ಟ್‌ನಲ್ಲಿ ಕೊಹ್ಲಿಯ ಕೊನೆಯ ಅಂತರಾಷ್ಟ್ರೀಯ ಶತಕ ಬಾರಿಸಿದ್ದರು.
0,0,9…ಇದು ಈ ಬಾರಿಯ ಐಪಿಎಲ್ನ ಕೊನೆಯ ಮೂರು ಇನಿಂಗ್ಸ್ನಲ್ಲಿನ ವಿರಾಟ್ ಕೊಹ್ಲಿಯ ಸ್ಕೋರ್. ಅಂದರೆ ಈ ಬಾರಿ 9 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಕಲೆಹಾಕಿದ್ದು ಕೇವಲ 128 ರನ್ ಮಾತ್ರ. ಹೀಗಾಗಿಯೇ ಆರ್ಸಿಬಿಗೆ ಸೋಲಿನ ಜೊತೆಗೆ ಕೊಹ್ಲಿಯ ಕಳಪೆ ಫಾರ್ಮ್ ಚಿಂತೆ ಕೂಡ ಶುರುವಾಗಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ನೀಡಿರುವ ಹೇಳಿಕೆಯೊಂದು ಎಲ್ಲರ ಗಮನ ಸೆಳೆದಿದೆ. ಹೌದು, ವಿರಾಟ್ ಕೊಹ್ಲಿ ಐಪಿಎಲ್‌ನಿಂದ ಹೊರಗುಳಿಯುವುದು ಉತ್ತಮ ಎಂದಿದ್ದಾರೆ ಶಾಸ್ತ್ರಿ. ಏಕೆಂದರೆ ಕೊಹ್ಲಿಗೆ ಸದ್ಯ ಬಿಡುವಿನ ಅಗತ್ಯವಿದೆ. ಹೀಗಾಗಿ ಅವರು ಐಪಿಎಲ್‌ನಿಂದ ಹೊರಗುಳಿದು ಮನಸ್ಸನ್ನು ರಿಫ್ರೆಶ್ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ತಡೆರಹಿತ ಕ್ರಿಕೆಟ್ ಆಡಿದ್ದಾರೆ. ಅವರು ಎಲ್ಲಾ ಸ್ವರೂಪಗಳಲ್ಲಿ ತಂಡದ ನಾಯಕತ್ವ ವಹಿಸಿರುವುದರಿಂದ ಅವರಿಗೆ ಈಗ ವಿರಾಮವು ಸೂಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ. ವಿರಾಮ ತೆಗೆದುಕೊಳ್ಳುವುದು ಬುದ್ದಿವಂತಿಕೆ. ಇಂತಹ ಸಂಕಷ್ಟದ ಸಮಯದಲ್ಲಿ ನೀವು ಟೂರ್ನಿಯಿಂದ ಹೊರಗುಳಿದರೆ, ಅದು ನಿಮ್ಮ ಕ್ರಿಕೆಟ್ ಕೆರಿಯರ್ಗೆ ಪ್ಲಸ್ ಪಾಯಿಂಟ್ ಆಗಲಿದೆ. ಅಲ್ಲದೆ ನಿಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ವಿಸ್ತರಿಸಲು ಮತ್ತು 6-7 ವರ್ಷಗಳ ಕಾಲ ಛಾಪು ಮೂಡಿಸಲು ಬಯಸಿದರೆ, ಐಪಿಎಲ್‌ನಿಂದ ಹೊರಗುಳಿಯಿರಿ. ನಿಮ್ಮ ಕಾಳಜಿಗಾಗಿ ನಾನು ಈ ಸಲಹೆ ನೀಡುತ್ತಿದ್ದೇನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ .
ನೀವು ಈಗಾಗಲೇ 14-15 ವರ್ಷಗಳ ಕಾಲ ಆಡಿದ್ದೀರಿ, ನೀವು ಮಾತ್ರವಲ್ಲ, ಬೇರೆ ಯಾವುದೇ ಆಟಗಾರನಿಗೆ ನಾನು ಇದನ್ನೇ ಹೇಳುತ್ತೇನೆ. ನೀವು ಭಾರತಕ್ಕಾಗಿ ಆಡಬೇಕು. ಉತ್ತಮ ಪ್ರದರ್ಶನ ನೀಡಬೇಕಾದರೆ, ನೀವು ಕೆಲ ಮಿತಿಗಳನ್ನು ಇಡಬೇಕಾಗುತ್ತದೆ. ನೀವು ವಿರಾಮವನ್ನು ತೆಗೆದುಕೊಳ್ಳಲು ಬಯಸಿದರೆ, ಭಾರತ ಕ್ರಿಕೆಟ್ನ ಆಫ್ ಸೀಸನ್ನಲ್ಲಿ ತೆಗೆದುಕೊಳ್ಳಿ. ಸದ್ಯ ಭಾರತ ಆಡದಿರುವ ಆಫ್ ಸೀಸನ್ ಐಪಿಎಲ್ ಆಗಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಿದೆ. ಅಥವಾ ಫ್ರಾಂಚೈಸಿಗೆ ನಾನು ಅರ್ಧ ಸೀಸನ್ ಮಾತ್ರ ಆಡುತ್ತೇನೆ ಎಂದು ತಿಳಿಸಬೇಕು. ನೀವು ಅಂತರಾಷ್ಟ್ರೀಯ ಆಟಗಾರನಾಗಿ ನಿಮ್ಮ ವೃತ್ತಿಯ ಉತ್ತುಂಗವನ್ನು ತಲುಪಲು ಬಯಸಿದರೆ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ವಿರಾಟ್ ಇನ್ನೂ ಚಿಕ್ಕವ. ಅವನ ಮುಂದೆ 5-6 ವರ್ಷಗಳ ಕ್ರಿಕೆಟ್ ಉಳಿದಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಅವರು ಏನನ್ನು ಅನುಭವಿಸಿದ್ದಾರೆಂದು ಅವರು ಅರಿತುಕೊಂಡಿದ್ದಾರೆ. ಹೀಗಾಗಿ ಅವರು ಮೊದಲಿನಿಂದಲೇ ಆರಂಭಿಸಬೇಕಿದೆ. ಇದಕ್ಕಾಗಿ ಮೊದಲು ಮಾಡಬೇಕಿರುವುದು ವಿಶ್ರಾಂತಿ ಪಡೆಯುವುದು. ಹಾಗಾಗಿ ವಿರಾಟ್ ಕೊಹ್ಲಿ ಐಪಿಎಲ್‌ನಿಂದ ಹೊರಗುಳಿಯುವುದು ಉತ್ತಮ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಶತಕ ಬಾರಿಸಿ 3 ವರ್ಷಗಳೇ ಕಳೆದಿವೆ. ಕೊಹ್ಲಿಯ ಬ್ಯಾಟ್ನಿಂದ ಕೊನೆಯ ಶತಕ ಮೂಡಿಬಂದಿದ್ದು 2019 ರಲ್ಲಿ. ಬಾಂಗ್ಲಾದೇಶದ ವಿರುದ್ಧ ಡೇ-ನೈಟ್ ಟೆಸ್ಟ್‌ನಲ್ಲಿ ಕೊಹ್ಲಿಯ ಕೊನೆಯ ಅಂತರಾಷ್ಟ್ರೀಯ ಶತಕ ಬಾರಿಸಿದ್ದರು. ಇದಾದ ಬಳಿಕ ಅವರು ಐಪಿಎಲ್ನಲ್ಲಾಗಲಿ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಾಗಲಿ ಒಂದೇ ಒಂದು ಶತಕ ಬಾರಿಸಿಲ್ಲ ಎಂಬುದೇ ಅಚ್ಚರಿ.
ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
Published On - 11:47 am, Wed, 27 April 22