IPL 2022: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ (RCB vs LSG) ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಸೋತ ತಂಡ ಐಪಿಎಲ್ನಿಂದ ಹೊರಬೀಳಲಿದೆ. ಹೀಗಾಗಿ ಇದು ಉಭಯ ತಂಡಗಳಿಗೂ ನಿರ್ಣಾಯಕ ಪಂದ್ಯ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳಿಂದ ಭರ್ಜರಿ ಪೈಪೋಟಿಯನ್ನಂತು ಕಂಡು ಬರಲಿದೆ. ಇಲ್ಲಿ ಯಾವ ತಂಡ ಬಲಿಷ್ಠ ಎಂದು ನೋಡುವುದಾದರೆ, ಸಮಬಲ ಹೊಂದಿದೆ ಎನ್ನಬಹುದು. ಇದಾಗ್ಯೂ ಆರ್ಸಿಬಿ ತಂಡ ತುಸು ಮೇಲುಗೈ ಹೊಂದಿದೆ.
ಏಕೆಂದರೆ ಐಪಿಎಲ್ 15ನೇ ಸೀಸನ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ 14 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿ ಮೂರನೇ ಸ್ಥಾನ ಗಳಿಸಿದೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸಿದೆ. ಲಕ್ನೋ ತಂಡವು ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರೂ ಆರ್ಸಿಬಿ ವಿರುದ್ದ ಮಾತ್ರ ಮುಗ್ಗರಿಸಿದೆ.
ಲೀಗ್ ಹಂತದಲ್ಲಿ ಉಭಯ ತಂಡಗಳು ಒಂದು ಪಂದ್ಯವನ್ನಾಡಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಟಾಸ್ ಗೆದ್ದ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಇತ್ತ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೇವಲ 64 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 11 ಬೌಂಡರಿಯೊಂದಿಗೆ 96 ರನ್ ಬಾರಿಸಿದ್ದರು. ಈ ಮೂಲಕ ಆರ್ಸಿಬಿ 6 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತ್ತು.
ಚೇಸಿಂಗ್ ಪಿಚ್ನಲ್ಲಿ ಟಾರ್ಗೆಟ್ ಬೆನ್ನತ್ತುವ ವಿಶ್ವಾಸದೊಂದಿಗೆ ಇನಿಂಗ್ಸ್ ಆರಂಭಿಸಿದ ಲಕ್ನೋ ತಂಡಕ್ಕೆ ಆರ್ಸಿಬಿ ಬೌಲರ್ಗಳು ಯಶಸ್ವಿಯಾಗಿದ್ದರು. ಅದರಲ್ಲೂ ಮಾರಕ ದಾಳಿ ಸಂಘಟಿಸಿದ ಜೋಶ್ ಹ್ಯಾಝಲ್ವುಡ್ 4 ಓವರ್ಗಳಲ್ಲಿ ಕೇವಲ 25 ರನ್ ನೀಡಿ 4 ವಿಕೆಟ್ ಉರುಳಿಸಿದ್ದರು. ಇನ್ನು ಉಳಿದ ಬೌಲರ್ಗಳು ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಪರಿಣಾಮ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್ಸಿಬಿ 18 ರನ್ಗಳಿಂದ ಕೆಎಲ್ ರಾಹುಲ್ ಪಡೆಗೆ ಸೋಲುಣಿಸಿತ್ತು.
ಅಂದರೆ ಇಲ್ಲಿ ಆರ್ಸಿಬಿ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಆಡಿದ್ದ ಮೊದಲ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತ್ತು. ಅದರಲ್ಲೂ ಟಾಸ್ ಸೋತರೂ ಆರ್ಸಿಬಿ ಬೌಲಿಂಗ್ ಮೂಲಕ ಗೆಲುವನ್ನು ತನ್ನದಾಗಿಸಿಕೊಂಡಿತು. ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದದ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡದ ಒಟ್ಟಾರೆ ಪ್ರದರ್ಶನ ಅತ್ಯುತ್ತಮವಾಗಿತ್ತು. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಉಭಯ ತಂಡಗಳು ಸಮಬಲ ಹೊಂದಿದ್ದರೂ ಆರ್ಸಿಬಿ ತಂಡ ಗೆಲ್ಲುವ ಚಾನ್ಸ್ ಹೆಚ್ಚಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.