IPL 2022: ಈ ಐಪಿಎಲ್​ನಲ್ಲಿ ಮುಂಬೈ- ಚೆನ್ನೈ ಕಳಪೆ ಪ್ರದರ್ಶನ ನೀಡಲು ಕಾರಣವೇನು ಗೊತ್ತಾ?

IPL 2022: ಈ ಐಪಿಎಲ್​ನಲ್ಲಿ ಮುಂಬೈ- ಚೆನ್ನೈ ಕಳಪೆ ಪ್ರದರ್ಶನ ನೀಡಲು ಕಾರಣವೇನು ಗೊತ್ತಾ?
MI vs Csk

IPL 2022: ಹಾಲಿ ಚಾಂಪಿಯನ್ ಚೆನ್ನೈ ತಂಡ ಆಡಿರುವ 8 ಪಂದ್ಯಗಳಲ್ಲಿ 6 ರಲ್ಲಿ ಸೋತಿದೆ. ಎರಡು ಗೆಲುವುಗಳೊಂದಿಗೆ ಕೇವಲ 4 ಅಂಕಗಳೊಂದಿಗೆ, ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಸ್ಟಾರ್ ಆಟಗಾರರಿಂದ ತುಂಬಿವೆ.

TV9kannada Web Team

| Edited By: pruthvi Shankar

Apr 27, 2022 | 3:42 PM

ಐಪಿಎಲ್ (IPL 2022) ಅರ್ಧ ಹಂತ ತಲುಪಿದೆ. ಇಂದು 40ನೇ ಲೀಗ್ ಪಂದ್ಯ ನಡೆಯಲಿದೆ. ಈ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಈ ಲೀಗ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಹೆಚ್ಚು ಆಶ್ಚರ್ಯಚಕಿತಗೊಳಿಸಿದರೆ ಅದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನವಾಗಿದೆ. ಮುಂಬೈ ಮತ್ತು ಚೆನ್ನೈ (MI vs CSK) ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಾಗಿವೆ. ಮುಂಬೈ ಇಂಡಿಯನ್ಸ್ ಐದು ಬಾರಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಆದರೆ ಈ ಬಾರಿ ಈ ಎರಡೂ ತಂಡಗಳು ಕೊನೆಯ ಸ್ಥಾನದಲ್ಲಿವೆ. ಮುಂಬೈ ತಂಡ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ ಸೋತಿದೆ. ಪಾಯಿಂಟ್ ಟೇಬಲ್ (IPL 2022 Points Table) ನಲ್ಲಿ ಅವರಿಗೆ ಖಾತೆಯನ್ನು ತೆರೆಯಲಾಗಿಲ್ಲ.

ಹಾಲಿ ಚಾಂಪಿಯನ್ ಚೆನ್ನೈ ತಂಡ ಆಡಿರುವ 8 ಪಂದ್ಯಗಳಲ್ಲಿ 6 ರಲ್ಲಿ ಸೋತಿದೆ. ಎರಡು ಗೆಲುವುಗಳೊಂದಿಗೆ ಕೇವಲ 4 ಅಂಕಗಳೊಂದಿಗೆ, ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಸ್ಟಾರ್ ಆಟಗಾರರಿಂದ ತುಂಬಿವೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಇಶಾನ್ ಕಿಶನ್, ಕೀರಾನ್ ಪೊಲಾರ್ಡ್ ಅವರಂತಹ ಆಟಗಾರರ ಹೊರತಾಗಿಯೂ, ಚೆನ್ನೈ ಮತ್ತು ಮುಂಬೈ ತಂಡವು ಕೆಟ್ಟ ಸ್ಥಿತಿಯಲ್ಲಿವೆ. ಚೆನ್ನೈ ಮತ್ತು ಮುಂಬೈ ತಂಡಗಳ ಈ ಸ್ಥಿತಿಗೆ ಕಾರಣ ಏನು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅಷ್ಟಕ್ಕೂ ಉಭಯ ತಂಡಗಳು ಮಾಡಿದ ತಪ್ಪದಾರೂ ಯಾವುದು? ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದೇನೆ.

ಗುಣಮಟ್ಟದ ಸ್ಪಿನ್ನರ್‌ಗಳ ಕೊರತೆ ಎರಡೂ ತಂಡಗಳ ದೊಡ್ಡ ಸಮಸ್ಯೆಯಾಗಿದೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಚೆನ್ನೈ ಮತ್ತು ಮುಂಬೈ ತಂಡ ದುರ್ಬಲವಾಗಿರುವುದು ಮೆಗಾ ಹರಾಜಿನ ನಂತರವೇ ಗೋಚರಿಸಿತು. ಇದರಲ್ಲಿ ಚೆನ್ನೈ ತಂಡ ಒಂದಕ್ಕಿಂತ ಹೆಚ್ಚು ಲೆಜೆಂಡರಿ ಸ್ಪಿನ್ನರ್‌ಗಳನ್ನು ಹೊಂದಿದೆ. ಈ ಬಾರಿ ಅವರು ಮಿಚೆಲ್ ಸ್ಯಾಂಟ್ನರ್, ಮಹೇಶ್ ಟೀಕ್ಷಣ ಮತ್ತು ಮೊಯಿನ್ ಅಲಿ ಅವರ ಮೇಲೆ ಅವಲಂಬಿತವಾಗಿದೆ. ರವೀಂದ್ರ ಜಡೇಜಾ ರೂಪದಲ್ಲಿ ಮತ್ತೊಂದು ಸ್ಪಿನ್ ಆಯ್ಕೆ ಇತ್ತು. ಆದರೆ ಮಹೇಶ್ ಟೀಕ್ಷಣ ಹೊರತುಪಡಿಸಿ ಮೂವರೂ ನಿರಾಸೆ ಮೂಡಿಸಿದರು. ಮಿಚೆಲ್ ಸ್ಯಾಂಟ್ನರ್ ಕೇವಲ ಮೂರು ಪಂದ್ಯಗಳನ್ನು ಆಡುವ ಅವಕಾಶ ಪಡೆದರು. ಮೊಯಿನ್ ಅಲಿ ಐದು ಪಂದ್ಯಗಳನ್ನು ಆಡಿದರು, ಬೌಲಿಂಗ್​ನಲ್ಲಿ ಹೆಚ್ಚು ಅವಕಾಶ ಪಡೆಯಲಿಲ್ಲ. ರವೀಂದ್ರ ಜಡೇಜಾ ಇದುವರೆಗೆ ಕೇವಲ ಐದು ವಿಕೆಟ್ ಪಡೆಯಲ್ಲಷ್ಟೇ ಶಕ್ತರಾದರು. ಮಹೇಶ್ ಟೀಕ್ಷಣ 5 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್‌ನ ಸ್ಪಿನ್ ವಿಭಾಗದ ಸರಾಸರಿ ಪ್ರದರ್ಶನವೂ ಇದೇ ಆಗಿದೆ. ಮುರುಗನ್ ಅಶ್ವಿನ್ ಮುಂಬೈ ತಂಡದಲ್ಲಿದ್ದು, ಅವರು 6 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ. ಮಯಾಂಕ್ ಮಾರ್ಕಂಡೇ ಮುಂಬೈ ತಂಡದಲ್ಲಿದ್ದರೂ ಅವರಿಗೆ ಇನ್ನೂ ಆಡುವ ಅವಕಾಶ ಸಿಕ್ಕಿಲ್ಲ. ಕೃನಾಲ್ ಪಾಂಡ್ಯ, ಜಯಂತ್ ಯಾದವ್, ರಾಹುಲ್ ಚಹಾರ್ ಅವರಂತಹ ಸ್ಪಿನ್ನರ್‌ಗಳ ಕೊರತೆಯನ್ನು ಮುಂಬೈ ತಂಡವು ಸ್ಪಷ್ಟವಾಗಿ ಎದುರಿಸುತ್ತಿದೆ.

ಸ್ಪಿನ್ ಬೌಲರ್ಗಳನ್ನು ಸರಿಯಾಗಿ ಬಳಸುವುದರಲ್ಲಿಯೂ ವಿಫಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ ಬೌಲರ್‌ಗಳ ಬಳಕೆಯಲ್ಲಿಯೂ ತಪ್ಪು ನಡೆದಿದೆ. ಇದಕ್ಕೆ ಉದಾಹರಣೆ ಎಂಬಂತೆ ತಂಡದಲ್ಲಿ ಮಿಚೆಲ್ ಸ್ಯಾಂಟ್ನರ್ ಪಾತ್ರವು ಸ್ಪಷ್ಟವಾಗಿಲ್ಲ. ಅವರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಗುತ್ತಿದೆ. ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೇಲೆ ಹೋಗಿ ರನ್ ಗಳಿಸಿದ ಆಟಗಾರರಲ್ಲಿ ಎಂದಿಗೂ ಗುರುತಿಸಲ್ಪಟ್ಟಿಲ್ಲ. ಆದರೆ ಚೆನ್ನೈ ತಂಡ ರಿಸ್ಕ್ ತೆಗೆದುಕೊಂಡಿತು. ಒಂದು ಕಾಲದಲ್ಲಿ ಸುನಿಲ್ ನರೈನ್ ಅವರ ಪಾತ್ರದಲ್ಲಿ ಮಿಚೆಲ್ ಸ್ಯಾಂಟ್ನರ್ ಅವರನ್ನು ಉಳಿಸಿಕೊಳ್ಳುವುದು ತಂಡದ ತಂತ್ರವಾಗಿತ್ತು. ಆದರೆ ಈ ತಂತ್ರವು ಸರಿಯಾಗಿಲ್ಲ ಎಂಬುದು ಈಗ ಸಾಬೀತಾಗಿದೆ. ರವೀಂದ್ರ ಜಡೇಜಾ ಅವರು ತಮ್ಮ ಸಂಪೂರ್ಣ ಕೋಟಾ ಓವರ್‌ಗಳನ್ನು ಬೌಲಿಂಗ್ ಮಾಡುತ್ತಿಲ್ಲ. ಆದರೆ ಈ ಹಿಂದೆ ಚೆನ್ನೈ ತಂಡದಲ್ಲಿ ಧೋನಿ, ಜಡೇಜಾ ಬೌಲಿಂಗ್ ಅನ್ನು ಟ್ರಂಪ್ ಕಾರ್ಡ್ ಆಗಿ ಬಳಸುತ್ತಿದ್ದರು. ಆದರೆ ಈ ಬಾರಿ ಜಡೇಜಾ ಹಿನ್ನಡೆ ಅನುಭವಿಸಿದ್ದಾರೆ. ಅವರು ಇಲ್ಲಿಯವರೆಗೆ 8.19 ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ನಾಯಕತ್ವದ ಒತ್ತಡ ಅವರಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಸ್ಪಿನ್ ಬೌಲರ್‌ಗಳ ಪ್ರಾಬಲ್ಯ ಇನ್ನುಳಿದ ತಂಡದ ಸ್ಪಿನ್ ಬೌಲರ್​ಗಳು ಮುಂಬೈ ಮತ್ತು ಚೆನ್ನೈಗಿಂತ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರ 5 ಬೌಲರ್‌ಗಳಲ್ಲಿ ಮೂವರು ಸ್ಪಿನ್ನರ್‌ಗಳಿದ್ದಾರೆ. ಹಲವು ದಿನಗಳಿಂದ ಪರ್ಪಲ್ ಕ್ಯಾಪ್ ವಶಪಡಿಸಿಕೊಂಡಿರುವ ಯುಜ್ವೇಂದ್ರ ಚಹಾಲ್ 18 ವಿಕೆಟ್ ಪಡೆದಿದ್ದಾರೆ. ಚಾಹಲ್ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ಅವರ ಎಕಾನಮಿ 7.09. ಅಗ್ರ 5ರಲ್ಲಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಸ್ಪಿನ್ ಬೌಲರ್‌ಗಳಿದ್ದಾರೆ. ಕುಲದೀಪ್ ಯಾದವ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕುಲದೀಪ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. 8.47ರ ಎಕಾನಮಿಯಲ್ಲಿ 13 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ಹಸರಂಗ 13 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ.

ಸ್ಪಿನ್ ಬೌಲರ್‌ಗಳು ಏಕೆ ಪರಿಣಾಮಕಾರಿ? ಕೊರೊನಾ ಆತಂಕವನ್ನು ಕಡಿಮೆ ಮಾಡಲು, ಈ ಋತುವಿನಲ್ಲಿ ಎಲ್ಲಾ ಪಂದ್ಯಗಳನ್ನು ಕೇವಲ ನಾಲ್ಕು ಕ್ರೀಡಾಂಗಣಗಳಲ್ಲಿ ಆಡಲು ನಿರ್ಧರಿಸಲಾಯಿತು. ಈ ನಿರ್ಧಾರದ ನೇರ ಪರಿಣಾಮವೆಂದರೆ ಪಿಚ್‌ಗೆ ಅಗತ್ಯ ನಿರ್ವಹಣೆಗೆ ಸಿಗಬೇಕಾದ ಸಮಯ ಸಿಗುತ್ತಿಲ್ಲ. ಪಂದ್ಯಗಳು ಕಳೆದಂತೆಲ್ಲ ಪಿಚ್ ನಿಧಾನವಾಗುತ್ತಿದೆ. ಚೆಂಡು ನಿಂತು ಬರಲು ಆರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಪಿನ್ ಬೌಲರ್​ಗಳ ಪಾತ್ರ ಸಾಕಷ್ಟು ಹೆಚ್ಚಿದೆ. ಮುಂಬೈ ಮತ್ತು ಪುಣೆಯಲ್ಲೂ ಬಿಸಿಲಿನ ತಾಪ ನಿರಂತರವಾಗಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪಿಚ್ ಬಿರುಕು ಬಿಡುವುದು ಸಹಜ. ಕಡಿಮೆ ಸಮಯ ಇರುವುದರಿಂದ ಮೈದಾನದ ಸಿಬ್ಬಂದಿಗೆ ಪಿಚ್​ ಅನ್ನು ಸರಿಯಾಗಿ ಸಿದ್ದಪಡಿಸಲು ಸಾಧ್ಯವಾಗುತ್ತಿಲ್ಲ. ಅದರ ನೇರ ಪರಿಣಾಮವೇ ಸ್ಪಿನ್ ಬೌಲರ್​ಗಳಿಗೆ ಈ ಆವೃತ್ತಿಯಲ್ಲಿ ಸಿಗುತ್ತಿರುವ ಯಶಸ್ಸಾಗಿದೆ.

ಇದನ್ನೂ ಓದಿ:IPL 2022: ಮೇ 29 ರಂದು ಅಹಮದಾಬಾದ್​ನಲ್ಲಿ ಫೈನಲ್! ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

Follow us on

Related Stories

Most Read Stories

Click on your DTH Provider to Add TV9 Kannada