ಬಹುನಿರೀಕ್ಷಿತ 2022ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಟೂರ್ನಿ ನಿಮಿತ್ತ ಎಲ್ಲಾ ತಂಡಗಳು ಈಗಾಗಲೇ ಸಕಲ ಸಿದ್ದತೆಯಲ್ಲಿ ತೊಡಗಿವೆ. ಈ ಬಾರಿ 10 ತಂಡಗಳೊಂದಿಗೆ ನಡೆಯಲಿರುವ ಐಪಿಎಲ್ 2022ಕ್ಕೆ ಇದೇ ಮಾರ್ಚ್ 26 ರಂದು ಭರ್ಜರಿ ಚಾಲನೆ ಸಿಗಲಿದ್ದು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಶ್ರೇಯಸ್ ಅಯ್ಯರ್ ನಾಯಕನಾಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಬಹುತೇಕ ಆಟಗಾರರು ತಂಡ ಸೇರಿಕೊಳ್ಳುವುದಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಬಯೋ ಬಬಲ್ನಿಂದ ನೇರವಾಗಿ ಆಗಮಿಸುವವರಿಗೆ ಎರಡು ದಿನಗಳ ಕ್ವಾರಂಟೈನ್ ಇದ್ದರೆ, ಉಳಿದವರಿಗೆ ಒಂದು ವಾರಗಳ ಕಾಲ ಕಡ್ಡಾಯ ಕ್ವಾರಂಟೈನ್ ಏರ್ಪಡಿಸಲಾಗಿದೆ. ಈ ಬಾರಿ ನೂತನ ತಂಡವನ್ನು ಕಟ್ಟಿಕೊಂಡು ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರುವ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ ಮೈದಾನದಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ.
ಪ್ರ್ಯಾಕ್ಟೀಸ್ ನಡೆಸುತ್ತಿರುವ ವಿಡಿಯೋವನ್ನು ಎಸ್ಆರ್ಹೆಚ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ಯಾರ್ಕರ್ ಕಿಂಗ್ ಎಂದೇ ಪ್ರಸಿದ್ಧಿ ಪಡೆದಿರುವ ಟಿ. ನಟರಾಜನ್ ಅಭ್ಯಾಸ ನಡೆಸುತ್ತಿದ್ದು ಬೆಂಕಿಯ ಚೆಂಡು ಉಗುಳುತ್ತಿದ್ದಾರೆ. ಅದರಲ್ಲೂ ಇವರು ಪ್ರ್ಯಾಕ್ಟೀಸ್ನಲ್ಲೇ ಚೆಂಡನ್ನು ನೇರವಾಗಿ ವಿಕೆಟ್ಗೆ ಎಸೆದಿದ್ದು, ಆ ವೇಗಕ್ಕೆ ವಿಕೆಟ್ ಕೂಡ ಪೀಸ್ ಪೀಸ್ ಆಗಿದೆ. ನಟರಾಜ್ ಅವರನ್ನು ಹೈದರಾಬಾದ್ ಹರಾಜಿನಲ್ಲಿ 4 ಕೋಟಿ ಕೊಟ್ಟು ಖರೀದಿ ಮಾಡಿತ್ತು.
ಐಪಿಎಲ್ 2020 ಟೂರ್ನಿಯಲ್ಲಿ ಬೆಳಕಿಗೆ ಬಂದ ಟಿ ನಟರಾಜನ್, ಯಾರ್ಕರ್ ಎಸೆಯುವುದರಲ್ಲಿನ ತಮ್ಮ ಅಮೋಘ ಸ್ಥಿರತೆ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದರು. ಯುಎಇ ಆತಿಥ್ಯದಲ್ಲಿ ನಡೆದ ಆ ಟೂರ್ನಿಯಲ್ಲಿ ಸನ್‌ರೈಸರ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ವೇಗಿ ಎನಿಸಿಕೊಳ್ಳುವ ಮೂಲಕ, ಅದೇ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಭಾರತ ತಂಡದಲ್ಲಿಯೂ ನಟರಾಜನ್ ಸ್ಥಾನ ಗಿಟ್ಟಿಸಿದ್ದರು. ಅಷ್ಟೇ ಅಲ್ಲದೆ, ಆಸೀಸ್ ಪ್ರವಾಸದಲ್ಲಿ ಮೂರೂ ಮಾದರಿಯಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿ ಸಂಚಲಸ ಸೃಷ್ಟಿಸಿದ್ದರು.
ಡೇಲ್ ಸ್ಟೇನ್ ಬಲ:
ದಕ್ಷಿಣ ಆಫ್ರಿಕಾ ಕ್ರಿಕೆಟ್ನ ದಂತಕಥೆ ಡೇಲ್ ಸ್ಟೇನ್ ಐಪಿಎಲ್ 2022ಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಇವರು ಎಸ್ ಆರ್ಎಚ್ ತಂಡದ ವೇಗದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇದೀಗ ತಂಡದ ಕಾರ್ಯತಂತ್ರದ ಸಲಹೆಗಾರ ಮತ್ತು ಬ್ಯಾಟಿಂಗ್ ಕೋಚ್ ಆಗಿರುವ ಬ್ಯಾಟಿಂಗ್ ದೈತ್ಯ ಬ್ರಿಯಾನ್ ಲಾರಾ ಜೊತೆ ಸ್ಟೇಯ್ನ ಕೂಡ ಸೇರಿಕೊಂಡಿದ್ದಾರೆ. ಅಲ್ಲದೆ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರು ಸ್ಪಿನ್ ಕೋಚ್ ಮತ್ತು ಹೇಮಾಂಗ್ ಬದಾನಿ ಅವರು ಫೀಲ್ಡಿಂಗ್ ಕೋಚ್ ಆಗಿದ್ದು ಹೈದರಾಬಾದ್ ತಂಡ ಅತ್ಯಂತ ಬಲಿಷ್ಠವಾದಂತೆ ಗೋಚರಿಸುತ್ತಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ: ಕೇನ್ ವಿಲಿಯಮ್ಸನ್, ಉಮ್ರಾನ್ ಮಲಿಕ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ನಿಕೋಲಸ್ ಪೂರನ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಪ್ರಿಯಮ್ ಗರ್ಗ್, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್, ಫಜಲ್ಹಕ್ ಫಾರೂಕಿ, ರೊಮಾರಿಯೊ ಶೆಫರ್ಡ್, ಶಶಾಂಕ್ ಸಿಂಗ್, ಸೌರಭ್ ದುಬೆ, ವಿಷ್ಣು ವಿನೋದ್, ಶೇನ್ ಅಬಾಟ್, ಆರ್ ಸಮರ್ಥ್, ಜಗದೀಶ ಸುಚಿತ್, ಏಡೆನ್ ಮಾರ್ಕ್ರಮ್, ಮಾರ್ಕೊ ಯೆನ್ಸನ್, ಗ್ಲೆನ್ ಫಿಲಿಪ್ಸ್.
ICC: ಭಾರತ-ಶ್ರೀಲಂಕಾ ಪಂದ್ಯದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಪಿಚ್ ಕಳಪೆ ಎಂದು ರೇಟಿಂಗ್ ಕೊಟ್ಟ ಐಸಿಸಿ
All England Open 2022 Final: ಲಕ್ಷ್ಯ ಸೇನ್ ಐತಿಹಾಸಿಕ ಚಿನ್ನ ಗೆಲ್ಲುವ ಕನಸು ಭಗ್ನ: ಫೈನಲ್ನಲ್ಲಿ ಸೋಲು