All England Open 2022 Final: ಲಕ್ಷ್ಯ ಸೇನ್ ಐತಿಹಾಸಿಕ ಚಿನ್ನ ಗೆಲ್ಲುವ ಕನಸು ಭಗ್ನ: ಫೈನಲ್​​ನಲ್ಲಿ ಸೋಲು

Lakshya Sen: ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಆಟಗಾರ ಲಕ್ಷ್ಯ ಸೇನ್​ಗೆ ಹಿನ್ನಡೆಯಾಗಿದೆ. ಭಾನುವಾರ ನಡೆದ ಫೈನಲ್‌ನಲ್ಲಿ 20 ವರ್ಷದ ಲಕ್ಷ್ಯ ವೀರೋಚಿತ ಸೋಲುಂಡು ರನ್ನರ್ ಅಪ್ ‍ಪ್ರಶಸ್ತಿಗೆ ತೃಪ್ತರಾಗಿದ್ದಾರೆ.

All England Open 2022 Final: ಲಕ್ಷ್ಯ ಸೇನ್ ಐತಿಹಾಸಿಕ ಚಿನ್ನ ಗೆಲ್ಲುವ ಕನಸು ಭಗ್ನ: ಫೈನಲ್​​ನಲ್ಲಿ ಸೋಲು
Lakshya Sen
Follow us
TV9 Web
| Updated By: Vinay Bhat

Updated on: Mar 21, 2022 | 8:28 AM

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ (All England Championships) ಫೈನಲ್​ ವರೆಗೆ ತಲುಪಿ ಐತಿಹಾಸಿಕ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಆಟಗಾರ ಲಕ್ಷ್ಯ ಸೇನ್​ಗೆ (Lakshya Sen) ಹಿನ್ನಡೆಯಾಗಿದೆ. ಭಾನುವಾರ ನಡೆದ ಫೈನಲ್‌ನಲ್ಲಿ 20 ವರ್ಷದ ಲಕ್ಷ್ಯ ವೀರೋಚಿತ ಸೋಲುಂಡು ರನ್ನರ್ ಅಪ್ ‍ಪ್ರಶಸ್ತಿಗೆ ತೃಪ್ತರಾಗಿದ್ದಾರೆ. ಲಂಡನ್​​ನಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್​​​ನಲ್ಲಿ ಹಾಲಿ ಚಾಂಪಿಯನ್ ಹಾಲೆಂಡ್ ನ ವಿಕ್ಟರ್ ಅಕ್ಸಲೆಸೆನ್ (Viktor Axelsen) ವಿರುದ್ಧ 21-10, 21-15 ಸೆಟ್ ಗಳಿಂದ ಸೋಲುಂಡರು. ಸೆಮಿಫೈನಲ್ ನಲ್ಲಿ ವಿಶ್ವದ ನಂ.1 ಆಟಗಾರ ಜೀ ಜಿಯಾ ಅವರನ್ನು ಸೋಲಿಸಿದ್ದ ಲಕ್ಷ್ಯ ಸೇನ್ ಫೈನಲ್ ನಲ್ಲೂ ಅದೇ ಸಾಧನೆ ಮಾಡಲಿದ್ದಾರೆ ಎಂಬ ವಿಶ್ವಾಸ ಮೂಡಿಸಿದ್ದರು. ಆದರೆ ತೀವ್ರ ಹೋರಾಟದ ಹೊರತಾಗಿಯೂ ಸೋಲುಂಡು ಪ್ರಶಸ್ತಿ ಗೆದ್ದು ಇತಿಹಾಸ ಬರೆಯುವ ಅವಕಾಶದಿಂದ ವಂಚಿತರಾದರು. ಆದರೆ, ಟೂರ್ನಿಯ ಇತಿಹಾಸದಲ್ಲಿ ಪುರುಷರ ಸಿಂಗಲ್ಸ್‌ ಫೈನಲ್ ತಲುಪಿದ ಭಾರತದ ಮೂರನೇ ಆಟಗಾರನೆಂಬ ಹೆಗ್ಗಳಿಕೆ ಲಕ್ಷ್ಯ ಸೇನ್ ಅವರಿಗಿದೆ.

ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ 20 ವರ್ಷದ ಉದಯೋನ್ಮುಖ ಆಟಗಾರ ಫೈನಲ್ ಕೋರ್ಟ್‍ನಲ್ಲಿ ಹಲವು ತಪ್ಪುಗಳನ್ನು ಎಸಗಿದರು. ಪಂದ್ಯದ ಮೊದಲ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ವಿಕ್ಟರ್ ಅಕ್ಸಲೆಸೆನ್ ಬಿಡುವಿನ ವೇಳೆಗೆ 11-2ರ ಮುನ್ನಡೆ ಪಡೆದರು. ಲಕ್ಷ್ಯ ಪುಟಿದೇಳುವ ವೇಳೆಗೆ ಬಹಳ ಮುಂದೆ ಹೋಗಿದ್ದ ಡೆನ್ಮಾರ್ಕ್ ಶಟ್ಲರ್‌, ಸುಲಭವಾಗಿ ಮೊದಲ ಗೇಮ್‌ ತಮ್ಮದಾಗಿಸಿಕೊಂಡರು.  ಎರಡನೇ ಗೇಮ್‌ನಲ್ಲಿ ವಿರೋಚಿತ ಆಟವಾಡಿದ ಲಕ್ಷ್ಯ ಗಮನ ಸೆಳೆದರು. ಆದರೆ ವಿಕ್ಟರ್ ಅವರ ಅನುಭವದ ಮುಂದೆ ಲಕ್ಷ್ಯ ಪ್ರಯತ್ನ ಸಾಕಾಗಲಿಲ್ಲ ಒಂದು ಗಂಟೆಯೊಳಗೆ ಪಂದ್ಯ ಮುಕ್ತಾಯಗೊಂಡಿತು.

ಅಂತಿಮವಾಗಿ ವಿಕ್ಟರ್ ಅಕ್ಸಲೆಸೆನ್ ವಿರುದ್ಧ ಲಕ್ಷ್ಯ 10-21, 15-21 ಗೇಮ್‍ಗಳಿಂದ ಎದುರಾಳಿಗೆ ಶರಣಾದರು. ಈ ಮೂಲಕ ಐತಿಹಾಸಿಕ ವಿಜಯ ಸಾಧಿಸುವ ಮೂಲಕ ಇತಿಹಾಸ ಬರೆಯುವ ಅವಕಾಶ ತಪ್ಪಿಸಿಕೊಂಡರು. ಕೇವಲ 53 ನಿಮಿಷಗಳ ಹೋರಾಟದಲ್ಲಿ ಅಕ್ಸಲೆಸೆನ್ ಗೆಲುವಿನ ನಗೆ ಬೀರಿದರು. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಲಕ್ಷ್ಯ ಸೆನ್, ಫೈನಲ್ ಪಂದ್ಯಕ್ಕೆ ವಿಕ್ಟರ್‌ ಆಕ್ಸೆಲ್ಸೆನ್‌ ವಿರುದ್ದ ಒಳ್ಳೆಯ ರಣತಂತ್ರ ಹೆಣೆಯಲಾಗಿತ್ತು. ಕಳೆದ ವಾರ ನಾನು ಅವರ ವಿರುದ್ದ ಹೋರಾಡಿ ಗೆದ್ದಿದ್ದೆ. ಆದರೆ ಇಂದು ಅವರು ಬಲಿಷ್ಠ ಆಕ್ರಮಣ ಹಾಗೂ ರಕ್ಷಣಾತ್ಮಕ ಆಟವಾಡಿದರು. ಪಂದ್ಯದುದ್ದಕ್ಕೂ ಅವರು ತಾಳ್ಮೆ ಕಳೆದುಕೊಳ್ಳದೇ ಉತ್ತಮ ಆಟವನ್ನು ಅಡಿದರು ಎಂದು 20 ಆಟಗಾರ ಲಕ್ಷ್ಯ ಹೇಳಿದ್ದಾರೆ.

ಪ್ರಧಾನಿ ಮೋದಿಯಿಂದ ಅಭಿನಂದನೆ:

ಫೈನಲ್​​ನಲ್ಲಿ ಸೋತರೂ ವಿಶೇಷ ಸಾಧನೆ ಮಾಡಿದ ಲಕ್ಷ್ಯ ಸೇನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ, “ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ. ನೀವು ಗಮನಾರ್ಹವಾದ ಅತ್ಯುತ್ತಮ ಪ್ರದರ್ಶನವನ್ನು ತೋರಿಸಿದ್ದೀರಿ. ನೀವು ಉತ್ಸಾಹಭರಿತ ಹೋರಾಟವನ್ನು ಮಾಡಿದ್ದೀರಿ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ. ನೀವು ಯಶಸ್ಸಿನ ಉತ್ತುಂಗಕ್ಕೆ ಏರುತ್ತೀರಿ ಎಂಬ ವಿಶ್ವಾಸ ನನಗಿದೆ”, ಎಂದು ಬರೆದುಕೊಂಡಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, “ಮುಂಬರುವ ಪಂದ್ಯಾವಳಿಗಳಿಗೆ ನಿಮಗೆ ಶುಭ ಹಾರೈಸುತ್ತೇನೆ”, ಎಂದು ಹೇಳಿದ್ದಾರೆ.

ತ್ರಿಷಾ-ಗಾಯತ್ರಿಗೆ ಸೋಲು:

ಮಹಿಳೆಯರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಭಾರತದ ತ್ರಿಷಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ನಿರಾಶೆ ಅನುಭವಿಸಿದರು. ಈ ಜೋಡಿಯು ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ತ್ರಿಷಾ ಮತ್ತು ಗಾಯತ್ರಿ 17-21, 16-21ರಿಂದ ಚೀನಾದ ಶೂ ಶಿಯಾನ್ ಝಾಂಗ್ ಮತ್ತು ಯೂ ಝೆಂಗ್ ವಿರುದ್ಧ ಸೋತರು. 51 ನಿಮಿಷಗಳ ಹೋರಾಟದಲ್ಲಿ ಚೀನಾದ ಆಟಗಾರ್ತಿಯರ ವೇಗದ ಮುಂದೆ ಭಾರತದ ಜೋಡಿಯ ಪ್ರಯತ್ನ ಸಾಕಾಗಲಿಲ್ಲ. ಗಾಯತ್ರಿ-ತ್ರಿಷಾ ಜೋಡಿಯು ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ಈ ವಿಭಾಗದ ಫೈನಲ್‌ನಲ್ಲಿ ಜಪಾನಿನ ನಮಿ ಮಟ್ಸುಯಾಮಾ ಮತ್ತು ಚಾಹಿರು ಶಿದಾ 21-13, 21-9ರಿಂದ ಚೀನಾದ ಝಾಂಗ್ ಮತ್ತು ಝೇಂಗ್ ವಿರುದ್ಧ ಗೆಲುವು ಸಾಧಿಸಿದರು.

WI vs ENG: ಟೆಸ್ಟ್ ಕ್ರಿಕೆಟ್​​ನಲ್ಲಿ ಬ್ರಾಥ್ ವೈಟ್ ದಾಖಲೆ: ವೆಸ್ಟ್ ಇಂಡೀಸ್- ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಡ್ರಾನಲ್ಲಿ ಅಂತ್ಯ