ICC: ಭಾರತ-ಶ್ರೀಲಂಕಾ ಪಂದ್ಯದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಪಿಚ್ ಕಳಪೆ ಎಂದು ರೇಟಿಂಗ್ ಕೊಟ್ಟ ಐಸಿಸಿ

Chinnaswamy Stadium Pitch: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಕಳಪೆ ಎಂದು ನಿರ್ಧರಿಸಿದೆ. ಕರ್ನಾಟಕದ ಜಾವಗಲ್​ ಶ್ರೀನಾಥ್​ ಅವರು ಪಿಚ್​ ಗುಣಮಟ್ಟದ ವರದಿಯನ್ನು ಬಿಸಿಸಿಐಗೆ (BCCI) ರವಾನಿಸಿದ್ದಾರೆ

ICC: ಭಾರತ-ಶ್ರೀಲಂಕಾ ಪಂದ್ಯದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಪಿಚ್ ಕಳಪೆ ಎಂದು ರೇಟಿಂಗ್ ಕೊಟ್ಟ ಐಸಿಸಿ
Chinnaswamy Stadium pitch
Follow us
TV9 Web
| Updated By: Vinay Bhat

Updated on: Mar 21, 2022 | 9:58 AM

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ 2ನೇ ಟೆಸ್ಟ್​ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy Stadium) ಪಿಚ್‌ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಕಳಪೆ ಎಂದು ನಿರ್ಧರಿಸಿದೆ. ಇದಲ್ಲದೇ, ಹೊರ ಮೈದಾನದ ನಿರ್ವಹಣೆಯಲ್ಲಿ ಗುಣಮಟ್ಟ ಕಾಪಾಡದ ಹಿನ್ನೆಲೆಯಲ್ಲಿ 1 ಋಣಾತ್ಮಕ ಅಂಕ ಕೊಟ್ಟಿದೆ. ಪಂದ್ಯದ ರೆಫ್ರಿಯಾಗಿದ್ದ ಭಾರತ ತಂಡದ ಮಾಜಿ ಆಟಗಾರ, ಕರ್ನಾಟಕದ ಜಾವಗಲ್​ ಶ್ರೀನಾಥ್​ ಅವರು ಪಿಚ್​ ಗುಣಮಟ್ಟದ ವರದಿಯನ್ನು ಬಿಸಿಸಿಐಗೆ (BCCI) ರವಾನಿಸಿದ್ದಾರೆ. ಅದರಲ್ಲಿ ಮೊದಲ ದಿನವೇ ಪಿಚ್​ ಸಾಕಷ್ಟು ತಿರುವು ಪಡೆಯಿತು. ಉಭಯ ತಂಡಗಳ ಸೆಣಸಾಟಕ್ಕೆ ತಕ್ಕ ಮೈದಾನ ಇದಾಗಿರಲಿಲ್ಲ. ಬ್ಯಾಟಿಂಗ್​, ಬೌಲಿಂಗ್​ ನಡುವೆ ಸಮಬಲ ಸಾಧಿಸಲು ಮೈದಾನ ಯಶಸ್ವಿಯಾಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಬೆಂಗಳೂರಿನಲ್ಲಿ ಮಾರ್ಚ್‌ 12ರಂದು ಶುರುವಾದ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ಎದುರು ಟೀಮ್ ಇಂಡಿಯಾ ಕೇವಲ ಮೂರು ದಿನಗಳ ಒಳಗೆ 238 ರನ್‌ಗಳ ಭರ್ಜರಿ ಜಯ ದಕ್ಕಿಸಿಕೊಂಡಿತು. ಪಂದ್ಯದ ಮೊದಲ ದಿನದ ಮೊದಲ ಎಸೆತದಿಂದಲೇ ಪಿಚ್‌ ಮೇಲೆ ಧೂಳೇರಲು ಆರಂಭಿಸಿ, ಸ್ಪಿನ್‌ ಬೌಲರ್‌ಗಳಿಗೆ ಸ್ವರ್ಗತಾಣವಾಗಿ ಪರಿಣಮಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀನಾಥ್‌, “ಪಂದ್ಯದ ಮೊದಲ ದಿನವೇ ಪಿಚ್‌ನಲ್ಲಿ ಬಹಳ ತಿರುವು ಕಂಡು ಬಂದಿತ್ತು. ಅವಧಿಯಿಂದ ಅವಧಿಗೆ ಚೆಂಡು ತಿರುಗುವುದು ಹೆಚ್ಚುತ್ತಲೇ ಹೋಯಿತು. ನನ್ನ ಅಭಿಪ್ರಾಯದಲ್ಲಿ ಇದು ಚೆಂಡು ಮತ್ತು ಬ್ಯಾಟಿನ ನಡುವಿನ ಹೋರಾಟವಾಗಿ ಕಾಣಿಸಲೇ ಇಲ್ಲ’ ಎಂದು ಹೇಳಿದ್ದಾರೆ.

2018ರಲ್ಲಿ ಐಸಿಸಿ ಪಿಚ್‌ ಗುಣಮಟ್ಟದ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಕಳಪೆ ಪಿಚ್‌ ಎಂದು ನೀಡಲಾಗುವ ಡೀಮೆರಿಟ್‌ ಅಂಕಗಳು 5 ವರ್ಷಗಳ ಕಾಲ ಉಳಿಯಲಿದೆ. ಈ ಅವಧಿಯಲ್ಲಿ ಒಟ್ಟು 5 ಡೀಮೆರಿಟ್‌ ಅಂಕಗಳು ಕ್ರೀಡಾಂಗಣ ಒಂದಕ್ಕೆ ಲಭ್ಯವಾದರೆ, 12 ತಿಂಗಳ ಕಾಲ (1 ವರ್ಷ) ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸುವಂತ್ತಿಲ್ಲ. ಒಂದು ವೇಳೆ ಐದು ವರ್ಷಗಳ ಅವಧಿಯಲ್ಲಿ ಏನಾದರೂ 10 ಡೀಮೆರಿಟ್‌ ಅಂಕ ಸಿಕ್ಕರೆ, 24 ತಿಂಗಳು ಕಾಲ (2 ವರ್ಷ) ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಅವಕಾಶ ಸಿಗುವುದಿಲ್ಲ.

ಈ ಹಿಂದೆ 2017 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದ ಆತಿಥ್ಯ ವಹಿಸಿದ್ದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಸಿಸಿ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಆಗಲೂ ಕೂಡ ಸಾಧಾರಣಕ್ಕಿಂತ ಕಡಿಮೆ ರೇಟ್​ ನೀಡಿದ್ದರು. ಪಿಚ್‌ ಬದಲು ಔಟ್‌ ಫೀಲ್ಡ್‌ ಮಾತ್ರ ಕಳಪೆಯಾಗಿದ್ದರೆ ಯಾವುದೇ ಡೀ ಮೆರಿಟ್‌ ಅಂಕ ನೀಡಲಾಗುವುದಿಲ್ಲ. ಒಂದು ವೇಳೆ ಔಟ್‌ ಫೀಲ್ಡ್‌ ತೀರಾ ಹೀನಾಯವಾದ ಸ್ಥಿತಿಯಲ್ಲಿದ್ದರೆ, 2 ರಿಂದ 5 ಡೀಮೆರಿಟ್‌ ಅಂಕಗಳನ್ನು ಐಸಿಸಿ ಕೊಡಬಹುದು.

All England Open 2022 Final: ಲಕ್ಷ್ಯ ಸೇನ್ ಐತಿಹಾಸಿಕ ಚಿನ್ನ ಗೆಲ್ಲುವ ಕನಸು ಭಗ್ನ: ಫೈನಲ್​​ನಲ್ಲಿ ಸೋಲು