ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) 15ನೇ ಸೀಸನ್ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli)ಯ ಪ್ರದರ್ಶನ ಅಷ್ಟೇನೂ ವಿಶೇಷವಾಗಿಲ್ಲ. ಆದರೆ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಋತುವಿನ ಕೊನೆಯ ಲೀಗ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಗುಜರಾತ್ ವಿರುದ್ಧ ಅಮೋಘ ಅರ್ಧಶತಕವನ್ನು ಗಳಿಸಿ, ತಮ್ಮ ತಂಡಕ್ಕೆ ಎರಡು ಪ್ರಮುಖ ಅಂಕಗಳನ್ನು ತಂದುಕೊಟ್ಟರು. ಈ ಇನ್ನಿಂಗ್ಸ್ ಮೂಲಕ ಕೊಹ್ಲಿ ಕೂಡ ಅಮೋಘ ಸಾಧನೆ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೊಹ್ಲಿ 7,000 ರನ್ ಪೂರೈಸಿದ್ದಾರೆ . ಇವುಗಳಲ್ಲಿ IPL ಮತ್ತು ಚಾಂಪಿಯನ್ಸ್ ಲೀಗ್ T20 ರನ್ಗಳು ಸೇರಿವೆ. ಈ ಮೂಲಕ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಕೊಹ್ಲಿ ಐಪಿಎಲ್‌ನಲ್ಲಿ 3000 ರನ್ ಪೂರೈಸಿದ್ದಾರೆ. ಜೊತೆಗೆ ಒಂದೇ ತಂಡದ ಪರ ಗರಿಷ್ಠ ರನ್ ಗಳಿಸಿದ T20 ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ಕೊಹ್ಲಿ ಈ ಋತುವಿನಲ್ಲಿ 2 ಅರ್ಧ ಶತಕಗಳನ್ನು ಗಳಿಸಿದ್ದು, ಈ ಎರಡೂ ಅರ್ಧ ಶತಕಗಳು ಕೂಡ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧವಾಗಿ ದಾಖಲಾಗಿವೆ.
ಕೊಹ್ಲಿ ಗುಜರಾತ್ ವಿರುದ್ಧ 54 ಎಸೆತಗಳಲ್ಲಿ 73 ರನ್ ಗಳಿಸಿ ತಂಡಕ್ಕೆ ಅಮೋಘ ಜಯ ತಂದುಕೊಟ್ಟರು. ಅವರ ಇನ್ನಿಂಗ್ಸ್‌ನಲ್ಲಿ ಅವರು 8 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಹೊಡೆದರು. ಜೊತೆಗೆ ಫಾಫ್ ಡು ಪ್ಲೆಸಿಸ್ ಅವರೊಂದಿಗೆ 115 ರನ್‌ಗಳ ಮೊದಲ ವಿಕೆಟ್ ಜೊತೆಯಾಟದೊಂದಿಗೆ RCB ಗೆ ಉತ್ತಮ ಆರಂಭವನ್ನು ನೀಡಿದರು.
ಪ್ಲೇ ಆಫ್ ತಲುಪುವ ಬೆಂಗಳೂರಿನ ನಿರೀಕ್ಷೆ ಜೀವಂತವಾಗಿಯೇ ಉಳಿದಿದೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2022) ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಋತುವಿನ ಪ್ರಮುಖ ಪಂದ್ಯದಲ್ಲಿ, ಬೆಂಗಳೂರು ತಂಡದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಹಾರ್ದಿಕ್ ಪಾಂಡ್ಯ ಅವರ ಅಜೇಯ 62 ರನ್ ನೆರವಿನಿಂದ ಗುಜರಾತ್ ಟೈಟಾನ್ಸ್ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಇದಕ್ಕುತ್ತರವಾಗಿ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಅವರ ಅಮೋಘ ಇನ್ನಿಂಗ್ಸ್ ಬಲದಿಂದ ಉತ್ತಮ ಆರಂಭ ಪಡೆಯಿತು. ಬೆಂಗಳೂರು ತಂಡದ ನಾಯಕ ಡು ಪ್ಲೆಸಿಸ್ ಕೂಡ 44 ರನ್‌ಗಳ ಮಹತ್ವದ ಕಾಣಿಕೆ ನೀಡಿದರು. ಅಲ್ಲದೆ ಗ್ಲೆನ್ ಮ್ಯಾಕ್ಸ್‌ವೆಲ್ 18 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿ 18.4 ಓವರ್‌ಗಳಲ್ಲಿ ಪಂದ್ಯವನ್ನು ಮುಗಿಸಿದರು ಮತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಲೀಗ್‌ನಲ್ಲಿ ಈ ಗೆಲುವಿನೊಂದಿಗೆ ಬೆಂಗಳೂರು ತಂಡ ಪ್ಲೇ ಆಫ್‌ಗೆ ಪ್ರವೇಶಿಸುವ ಸಾಧ್ಯತೆಯೂ ಹೆಚ್ಚಿದೆ. ಮುಂಬೈ ಇಂಡಿಯನ್ಸ್ ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿದರೆ ಆರ್‌ಸಿಬಿ ಸುಲಭವಾಗಿ ನಾಲ್ಕರ ಘಟ್ಟ ತಲುಪಲಿದೆ.