Virat Kohli: T20 ಕ್ರಿಕೆಟ್​ನಲ್ಲಿ ಮತ್ತೊಂದು ಮೈಲುಗಲ್ಲು ದಾಟಿದ ಕಿಂಗ್ ಕೊಹ್ಲಿ

| Updated By: ಝಾಹಿರ್ ಯೂಸುಫ್

Updated on: Mar 28, 2022 | 5:18 PM

IPL 2022: ವಿರಾಟ್ ಕೊಹ್ಲಿ ಐಪಿಎಲ್ ಹಾಗೂ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಒಟ್ಟು 310 ಇನ್ನಿಂಗ್ಸ್‌ಗಳನ್ನು ಆಡಿದ್ದು, ಈ ಮೂಲಕ 10314 ರನ್ ಗಳಿಸಿದ್ದಾರೆ.

Virat Kohli: T20 ಕ್ರಿಕೆಟ್​ನಲ್ಲಿ ಮತ್ತೊಂದು ಮೈಲುಗಲ್ಲು ದಾಟಿದ ಕಿಂಗ್ ಕೊಹ್ಲಿ
Virat Kohli
Follow us on

ಐಪಿಎಲ್​ನ 3ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಆರ್​ಸಿಬಿ (PBKS vs RCB) ಸೋತಿರಬಹುದು. ಆದರೆ ಈ ಸೋಲಿಗೆ ಕಾರಣ ಬೌಲರ್​ಗಳು ಎಂಬುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಆರ್​ಸಿಬಿ ಪರ ಕಣಕ್ಕಿಳಿದ ಬ್ಯಾಟ್ಸ್​ಮನ್ ಅಬ್ಬರಿಸುವ ಮೂಲಕ 205 ರನ್​ಗಳ ಬೃಹತ್ ಟಾರ್ಗೆಟ್ ನೀಡಿದ್ದರು. ನಾಯಕ ಫಾಫ್ ಡುಪ್ಲೆಸಿಸ್ 57 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್​ನೊಂದಿಗೆ ಡುಪ್ಲೆಸಿಸ್ 88 ರನ್​ ಸಿಡಿಸಿದರೆ, ವಿರಾಟ್ ಕೊಹ್ಲಿ (Virat Kohli) 29 ಎಸೆತಗಳಲ್ಲಿ ಅಜೇಯ 41 ರನ್ ಬಾರಿಸಿದ್ದರು. ಹಾಗೆಯೇ ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಕೇವಲ 14 ಎಸೆತಗಳಲ್ಲಿ 32 ರನ್ ಚಚ್ಚಿದ್ದರು. ಈ ಮೂಲಕ ಪಂಜಾಬ್ ಕಿಂಗ್ಸ್​ಗೆ 205 ರನ್​ಗಳ ಟಾರ್ಗೆಟ್ ನೀಡಿದ ಆರ್​ಸಿಬಿ ಬೌಲರುಗಳ ತಪ್ಪುಗಳಿಂದಾಗಿ ಸೋಲಬೇಕಾಯಿತು. ಆದರೆ ಈ ಸೋಲಿನ ಹೊರತಾಗಿಯೂ ಆರ್​ಸಿಬಿ ತಂಡದ ಮಾಜಿ ನಾಯಕ ಕೊಹ್ಲಿ ವಿಶೇಷ ಮೈಲುಗಲ್ಲೊಂದನ್ನು ದಾಟಿದ್ದಾರೆ.

29 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು ಒಂದು ಬೌಂಡರಿಯೊಂದಿಗೆ 41 ರನ್ ಗಳಿಸುವ ಮೂಲಕ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಒಟ್ಟಾರೆ 10314 ರನ್ ಗಳಿಸಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ ಕಲೆಹಾಕಿದ ವಿಶ್ವದ 5ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಈ ಹಿಂದೆ 6ನೇ ಸ್ಥಾನದಲ್ಲಿದ್ದ ಕೊಹ್ಲಿ ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿ ಇದೀಗ 5ನೇ ಸ್ಥಾನಕ್ಕೇರಿದ್ದಾರೆ. ವಾರ್ನರ್ 10308 ರನ್‌ಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್ ಹಾಗೂ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಒಟ್ಟು 310 ಇನ್ನಿಂಗ್ಸ್‌ಗಳನ್ನು ಆಡಿದ್ದು, ಈ ಮೂಲಕ 10314 ರನ್ ಗಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಸದ್ಯ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದು, ಗೇಲ್ ಒಟ್ಟು 14562 ರನ್ ಬಾರಿಸಿದ್ದಾರೆ. ಹಾಗೆಯೇ 2ನೇ ಸ್ಥಾನದಲ್ಲಿ ಪಾಕಿಸ್ತಾನದ ಶೋಯೆಬ್ ಮಲಿಕ್ (11698 ರನ್) ಮತ್ತು 3ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್​ನ ಕೀರನ್ ಪೊಲಾರ್ಡ್ (11430 ರನ್) ಇದ್ದಾರೆ.

ಹಾಗೆಯೇ ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಇದ್ದು, ಫಿಂಚ್ ಒಟ್ಟಾರೆ 10444 ರನ್ ಗಳಿಸಿದ್ದಾರೆ. ಇದೀಗ ಆರೋನ್ ಫಿಂಚ್ ಅವರನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿಗೆ 130 ರನ್​ಗಳ ಅವಶ್ಯಕತೆಯಿದೆ. ಹೀಗಾಗಿ ಈ ಬಾರಿಯ ಐಪಿಎಲ್​ ಮೂಲಕ ವಿರಾಟ್ ಕೊಹ್ಲಿ ಫಿಂಚ್ ಅವರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು