IPL 2022: ಮನಸ್ಸಿದ್ದರೆ ಮಾರ್ಗ ಎಂಬ ಮಾತಿದೆ, ಆದರೆ ಸಾಧನೆಯ ಹಾದಿಯಲ್ಲಿ ಮನೆಯ ಮಾರ್ಗವನ್ನೇ ಮರೆತರೆ..? ಇಂತಹದೊಂದು ಕಹಾನಿಯ ಹೀರೋ ಮುಂಬೈ ಇಂಡಿಯನ್ಸ್ ತಂಡದ ಸ್ಪಿನ್ನರ್ ಕಾರ್ತಿಕೇಯ ಸಿಂಗ್. ಮುಂಬೈ ಇಂಡಿಯನ್ಸ್ (Mumbai Indians) ತಂಡದ ಮೊದಲ 8 ಪಂದ್ಯಗಳ ವೇಳೆ ಕಾರ್ತಿಕೇಯ ಎನ್ನುವ ಹೆಸರನ್ನು ಯಾರು ಕೂಡ ಕೇಳಿರಲಿಲ್ಲ. ಅಷ್ಟೇ ಯಾಕೆ ತಂಡದಲ್ಲೂ ಅವರ ಹೆಸರು ಇರಲಿಲ್ಲ. ಯಾವಾಗ ಅರ್ಷದ್ ಖಾನ್ ಗಾಯಗೊಂಡರೋ ಮುಂಬೈ ಇಂಡಿಯನ್ಸ್ ತಂಡವು ಬದಲಿ ಆಟಗಾರನ ಆಯ್ಕೆಗೆ ಮುಂದಾಯಿತು. ಹೊರಗಿನಿಂದ ಆಟಗಾರನನ್ನು ಕರೆಸಿಕೊಳ್ಳುವ ಬದಲು ತಂಡದಲ್ಲೇ ನೆಟ್ ಬೌಲರ್ ಆಗಿದ್ದ ಎಡಗೈ ಸ್ಪಿನ್ನರ್ ಕಾರ್ತಿಕೇಯ ಸಿಂಗ್ ಅವರಿಗೆ ಅವಕಾಶ ನೀಡಲಾಯಿತು. ಅದಾಗಲೇ ನೆಟ್ಸ್ನಲ್ಲಿ ಸ್ಪಿನ್ ಬೌಲಿಂಗ್ ಮೂಲಕ ಕೋಚ್ ಹಾಗೂ ನಾಯಕ ರೋಹಿತ್ ಶರ್ಮಾ ಅವರ ಗಮನ ಸೆಳೆದಿದ್ದ ಕಾರ್ತಿಕೇಯ ತಂಡಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪ್ಲೇಯಿಂಗ್ 11 ನಲ್ಲೂ ಅವಕಾಶ ಪಡೆದರು. ಅದರಂತೆ ರಾಜಸ್ಥಾನ್ ರಾಯಲ್ಸ್ ಪರ ಚೊಚ್ಚಲ ಪಂದ್ಯವಾಡಿದರು. ವಿಶೇಷ ಎಂದರೆ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ಖಾತೆ ತೆರೆಯಿತು. ಅಂದರೆ ಆಡಿದ ಮೊದಲ ಪಂದ್ಯದಲ್ಲೇ ಕಾರ್ತಿಕೇಯ ಸಿಂಗ್ ಗೆಲುವಿನ ರುಚಿ ನೋಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಕಾರ್ತಿಕೇಯ ಸಿಂಗ್ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಬಿಗಿಯಾದ ಎಡಗೈ ಬೌಲಿಂಗ್‌ನಿಂದ ಎಲ್ಲರನ್ನು ಆಕರ್ಷಿಸಿದರು. ಈ ಪಂದ್ಯದಲ್ಲಿ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರ ಅಮೂಲ್ಯ ವಿಕೆಟ್ ಪಡೆಯುವ ಮೂಲಕ 4 ಓವರ್‌ಗಳಲ್ಲಿ ಕೇವಲ 19 ರನ್‌ಗಳನ್ನು ಮಾತ್ರ ನೀಡಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ರನ್ಗತಿಯನ್ನು ನಿಯಂತ್ರಿಸುವಲ್ಲಿ ಕಾರ್ತಿಕೇಯ ಯಶಸ್ವಿಯಾಗಿದ್ದರು. ಹೀಗೆ ಮೊದಲ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿರುವ ಕಾರ್ತಿಕೇಯ ಸಿಂಗ್ ಅವರ ಜರ್ನಿ ಅಂತಿಂಥದಲ್ಲ ಎಂಬುದು ವಿಶೇಷ.
ಕಾರ್ತಿಕೇಯ ಉತ್ತರ ಪ್ರದೇಶದ ಸುಲ್ತಾನ್‌ಪುರದ ನಿವಾಸಿ. ಅವರ ತಂದೆ ಉತ್ತರ ಪ್ರದೇಶ ಝಾನ್ಸಿಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ಕಾರ್ತಿಕ್ ಕ್ರಿಕೆಟ್ ಕೆರಿಯರ್ ಶುರುವಾಗಿದ್ದು ಮಧ್ಯಪ್ರದೇಶ ಪರ ಎಂಬುದು ವಿಶೇಷ. ಅವರ ಕಿರಿಯ ಸಹೋದರ ಯುಪಿಯ ಜೂನಿಯರ್ ತಂಡದ ಭಾಗವಾಗಿದ್ದಾರೆ. ಇದುವರೆಗೆ 9 ಪ್ರಥಮ ದರ್ಜೆ, 19 ಲಿಸ್ಟ್-ಎ ಮತ್ತು 9 ಟಿ20 ಪಂದ್ಯಗಳನ್ನು ಆಡಿರುವ ಕಾರ್ತಿಕೇಯ ಕ್ರಮವಾಗಿ 35, 18 ಮತ್ತು 10 ವಿಕೆಟ್ ಪಡೆದಿದ್ದಾರೆ. ಇತ್ತ ಐಪಿಎಲ್ ಮತ್ತು ರಾಷ್ಟ್ರೀಯ ತಂಡದ ಪರ ಆಡುವ ಕನಸು ಹೊಂದಿದ್ದು ಕಾರ್ತಿಕೇಯ ನೇರವಾಗಿ ಸೇರಿದ್ದು, ದೆಹಲಿ ಸಂಜಯ್ ಭಾರದ್ವಾಜ್ ಅವರ ಅಕಾಡೆಮಿಯಲ್ಲಿ. ಅಲ್ಲಿ ತನ್ನ ಬೌಲಿಂಗ್ ಕರಗತ ಮಾಡಿಕೊಂಡ ಬಳಿಕ ಮಧ್ಯಪ್ರದೇಶದ ರಣಜಿ ತಂಡದಲ್ಲಿ ಸ್ಥಾನ ಪಡೆದರು. ವಿಶೇಷ ಎಂದರೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಅವರನ್ನು ಟ್ರಯಲ್ಸ್‌ಗೆ ಕರೆದಿತ್ತು. ಆದರೆ ಮುಖ್ಯ ತಂಡಕ್ಕೆ ಖರೀದಿಸಿರಲಿಲ್ಲ. ಇದಾಗ್ಯೂ ಮುಂಬೈ ಫ್ರಾಂಚೈಸಿ ಕಾರ್ತಿಕೇಯ ಸಿಂಗ್ ಅವರನ್ನು ನೆಟ್ ಬೌಲರ್ ಆಗಿ ಆಯ್ಕೆ ಮಾಡಿಕೊಂಡಿತು.
ಇಲ್ಲಿ ಅಚ್ಚರಿಯ ವಿಷಯ ಎಂದರೆ ಕಾರ್ತಿಕೇಯ ಸಿಂಗ್ ಕಳೆದ 9 ವರ್ಷಗಳಿಂದ ಮನೆಗೆ ಹೋಗಿಲ್ಲ ಎಂಬುದು. ಕ್ರಿಕೆಟಿಗನಾಗಬೇಕೆಂಬ ಹಠದಿಂದ ಕಾರ್ತಿಕೇಯ 9 ವರ್ಷಗಳಿಂದ ಮನೆಯತ್ತ ಮುಖ ಮಾಡಿಲ್ಲ. ಪೋಷಕರು ಮನೆಗೆ ಹಿಂತಿರುಗಲು ಒತ್ತಾಯಿಸುತ್ತಿದ್ದರೂ, ಕಾರ್ತಿಕೇಯ ಮಾತ್ರ ಏನಾದರೂ ಸಾಧಿಸಿದ ನಂತರವೇ ಮನೆಗೆ ಹಿಂದಿರುಗುವುದಾಗಿ ನಿರ್ಧರಿಸಿದ್ದನು.
ಅದರಂತೆ ಕಠಿಣ ಪರಿಶ್ರಮದೊಂದಿಗೆ ಕಾಲ ಕಳೆದರು. ಇದೀಗ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಮೊದಲ ಪಂದ್ಯದಲ್ಲೇ 1 ವಿಕೆಟ್ ಪಡೆಯುವ ಮೂಲಕ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಾರ್ತಿಕೇಯ ಸಿಂಗ್, ತಮ್ಮ ಜೀವನದ ಪಯಣವನ್ನು ನೆನಪಿಸಿಕೊಂಡಿದ್ದಾರೆ. ನಾನು ಕಳೆದ 9 ವರ್ಷಗಳಿಂದ ಮನೆಗೆ ಹೋಗಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಿದ ಬಳಿಕವಷ್ಟೇ ಮನೆಗೆ ಹಿಂತಿರುಗುತ್ತೇನೆ ಎಂದು ನಿರ್ಧರಿಸಿದ್ದೆ.
ನನ್ನ ತಾಯಿ ಮತ್ತು ತಂದೆ ನಿರಂತರವಾಗಿ ಕರೆ ಮಾಡಿ ಮನೆಗೆ ಹಿಂತಿರುಗುವ ಬಗ್ಗೆ ಮಾತನಾಡುತ್ತಿದ್ದರು. ಆದರೆ ನನಗೆ ನನ್ನ ಮೇಲೆ ನಂಬಿಕೆಯಿತ್ತು. ಹಾಗೆಯೇ ನನ್ನ ಗುರಿ ಕೂಡ ಸ್ಪಷ್ಟವಾಗಿತ್ತು. ಹೀಗಾಗಿ ಕ್ರಿಕೆಟ್ ಜೀವನದಲ್ಲಿ ಏನನ್ನಾದರೂ ಸಾಧಿಸದೇ ಮನೆಗೆ ಹೋಗಲ್ಲ ಎಂದೇ ನಿರ್ಧರಿಸಿದ್ದೆ. ಇದೀಗ ಐಪಿಎಲ್ ಆಡುವ ನನ್ನ ಕನಸು ನನಸಾಗಿದೆ. ಹೀಗಾಗಿ ಐಪಿಎಲ್ ನಂತರ ಮನೆಗೆ ಮರಳುತ್ತೇನೆ ಎಂದು ಕಾರ್ತಿಕೇಯ ಸಿಂಗ್ ಹೇಳಿದ್ದಾರೆ. ಒಟ್ಟಿನಲ್ಲಿ ಸಾಧನೆಯ ಹಾದಿಯಲ್ಲಿ 9 ವರ್ಷಗಳಿಂದ ಮನೆಯಿಂದ ದೂರ ಉಳಿದ ಕಾರ್ತಿಕೇಯ ಸಿಂಗ್ ಅವರ ಮುಂದೊಂದು ದಿನ ಟೀಮ್ ಇಂಡಿಯಾ ಪರ ಕೂಡ ಆಡಲಿ ಎಂದು ಆಶಿಸೋಣ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.