ಐಪಿಎಲ್ನ 22ನೇ (IPL 2022) ಪಂದ್ಯದಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ (RCB vs CSK) ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೈದಾನಕ್ಕಿಳಿದ ಆರ್ಸಿಬಿ ಆಟಗಾರರು ತೋಳಿಗೆ ಕಪ್ಪು ಪಟ್ಟಿಯನ್ನು (Why is RCB wearing black armbands) ಧರಿಸಿದ್ದರು. ಹೀಗೆ ಬ್ಲ್ಯಾಕ್ ಬ್ಯಾಂಡ್ನೊಂದಿಗೆ ಆರ್ಸಿಬಿ ತಂಡವು ಕಣಕ್ಕಿಳಿಯಲು ಕಾರಣ ಹರ್ಷಲ್ ಪಟೇಲ್ ಅವರ ಸಹೋದರಿಯ ನಿಧನ ಎಂದು ತಿಳಿದು ತಿಳಿದು ಬಂದಿದೆ. ಆರ್ಸಿಬಿ ಆಟಗಾರ ಹರ್ಷಲ್ ಪಟೇಲ್ ಅವರ ಸಹೋದರಿ ಅರ್ಚಿತಾ ಪಟೇಲ್ ಶನಿವಾರ ನಿಧನರಾಗಿದ್ದರು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಕಪ್ಪು ಪಟ್ಟಿಗಳನ್ನು ಧರಿಸಿದ್ದರು.
ಇನ್ನು ಸಹೋದರಿಯ ನಿಧನದ ನಿಮಿತ್ತ ಹರ್ಷಲ್ ಪಟೇಲ್ ಸಿಎಸ್ಕೆ ವಿರುದ್ದದ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದ ಬಳಿಕ ಹರ್ಷಲ್ ಮನೆಗೆ ತೆರಳಿದ್ದರು. ಇನ್ನು ಐಪಿಎಲ್ಗೆ ಆಗಮಿಸಿದರೂ 3 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಇದಾಗ್ಯೂ ಹರ್ಷಲ್ ಪಟೇಲ್ ಮುಂದಿನ ಪಂದ್ಯಗಳಲ್ಲಿ ಆರ್ಸಿಬಿ ಪರ ಆಡಲಿದ್ದಾರಾ ಎಂಬುದು ಇನ್ನೂ ಕೂಡ ಖಚಿತವಾಗಿಲ್ಲ.
ಸಿಎಸ್ಕೆ ವಿರುದ್ದದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅವರ ಅಲಭ್ಯತೆಯು ಆರ್ಸಿಬಿ ತಂಡವನ್ನು ಕಾಡಿದೆ. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ನಾಲ್ಕು ಪಂದ್ಯಗಳಲ್ಲಿ 5.50 ಎಕನಾಮಿ ರೇಟ್ನಲ್ಲಿ ಹರ್ಷಲ್ ಒಟ್ಟು ಆರು ವಿಕೆಟ್‌ಗಳನ್ನು ಗಳಿಸಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಆರ್ಸಿಬಿ ಬೌಲರ್ಗಳು ದುಬಾರಿಯಾಗಿದ್ದರು. ಇನ್ನು 31ರ ಹರೆಯದ ಹರ್ಷಲ್ ಪಟೇಲ್ ಐಪಿಎಲ್ 2021ರಲ್ಲಿ 15 ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ವಿನ್ನರ್ ಕೂಡ ಆಗಿದ್ದರು.
ಸಿಎಸ್ಕೆಗೆ ಮೊದಲ ಜಯ:
ಇನ್ನು ಐಪಿಎಲ್ನ 22ನೇ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು. ಸಿಎಸ್ಕೆ ತಂಡದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಹಾಗೂ ಆಲ್ರೌಂಡರ್ ಶಿವಂ ದುಬೆ ಅಬ್ಬರಿಸುವ ಮೂಲಕ ಮೂರನೇ ವಿಕೆಟ್ಗೆ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಜೋಡಿ 165 ರನ್ಗಳ ಜೊತೆಯಾಟವಾಡಿದರು. ಈ ವೇಳೆ 50 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 88 ರನ್ ಬಾರಿಸಿದ್ದ ರಾಬಿನ್ ಉತ್ತಪ್ಪ ಔಟಾದರು. ಆದರೆ ದುಬೆಯ ಆರ್ಭಟ ಮಾತ್ರ ಮುಂದುವರೆದಿತ್ತು. ಕೊನೆಯ ಓವರ್ವರೆಗೂ ಬ್ಯಾಟ್ ಬೀಸಿದ ದುಬೆ 8 ಸಿಕ್ಸ್ ಹಾಗೂ 5 ಬೌಂಡರಿಯೊಂದಿಗೆ ಕೇವಲ 45 ಎಸೆತಗಳಲ್ಲಿ ಅಜೇಯ 95 ರನ್ಗಳಿಸಿತ್ತು. ಅಲ್ಲಿಗೆ ಸಿಎಸ್ಕೆ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 216 ಕ್ಕೆ ಬಂದು ನಿಂತಿತು.
217 ರನ್ಗಳ ಟಾರ್ಗೆಟ್ ನೀಡಿದ ಸಿಎಸ್ಕೆ ಗೆಲುವಿನ ವಿಶ್ವಾಸದಲ್ಲೇ ಮೈದಾನಕ್ಕಿಳಿಯಿತು. ಮೂರನೇ ಓವರ್ನಲ್ಲಿ ಫಾಫ್ ಡುಪ್ಲೆಸಿಸ್, 5ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಹಾಗೂ 6ನೇ ಓವರ್ನಲ್ಲಿ ಅನೂಜ್ ರಾವತ್ ವಿಕೆಟ್ ಪಡೆಯುವ ಮೂಲಕ ಸಿಎಸ್ಕೆ ಪವರ್ಪ್ಲೇನಲ್ಲೇ ಆರ್ಸಿಬಿಗೆ ಆಘಾತ ನೀಡಿದರು. ಅಷ್ಟೇ ಅಲ್ಲದೆ ಪವರ್ಪ್ಲೇನಲ್ಲಿ ನೀಡಿದ್ದು ಕೇವಲ 42 ರನ್ ಮಾತ್ರ. ಇನ್ನು 11 ಎಸೆತಗಳಲ್ಲಿ 26 ರನ್ ಬಾರಿಸಿ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ಶಹಬಾಜ್ ಅಹ್ಮದ್ ಹಾಗೂ ಸುಯಶ್ ಪ್ರಭುದೇಸಾಯಿ ಅರ್ಧಶತಕದ ಜೊತೆಯಾಟವಾಡಿದರು.
ಅದರಲ್ಲೂ ಚೊಚ್ಚಲ ಪಂದ್ಯವಾಡಿದ ಸುಯಶ್ 18 ಎಸೆತಗಳಲ್ಲಿ 34 ರನ್ ಬಾರಿಸುವ ಮೂಲಕ ತಮ್ಮ ಪಾತ್ರ ನಿರ್ವಹಿಸಿದ್ದರು. ಮತ್ತೊಂದೆಡೆ 27 ಎಸೆತಗಳಲ್ಲಿ 41 ರನ್ ಬಾರಿಸಿ ಶಹಬಾಜ್ ಕೂಡ ಅಬ್ಬರಿಸಿದರು. ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 13 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 34 ರನ್ ಬಾರಿಸಿದರು. ಆದರೆ ಬ್ರಾವೊ ಅವರ ಬೌಲಿಂಗ್ನಲ್ಲಿ ದಿನೇಶ್ ಕಾರ್ತಿಕ್ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಔಟಾದರು. ಅಂತಿಮವಾಗಿ ಆರ್ಸಿಬಿ ತಂಡವು 9 ವಿಕೆಟ್ ನಷ್ಟಕ್ಕೆ 193 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಸಿಎಸ್ಕೆ ತಂಡವು 23 ರನ್ಗಳಿಂದ ಈ ಬಾರಿಯ ಐಪಿಎಲ್ನ ಮೊದಲ ಜಯ ದಾಖಲಿಸಿತು.
ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?