IPL 2023: ಸಿಎಸ್‌ಕೆ ತಂಡಕ್ಕೆ ಬಿಗ್ ಶಾಕ್; ಸ್ಟಾರ್ ಆಲ್‌ರೌಂಡರ್ ಒಂದು ವಾರ ತಂಡದಿಂದ ಔಟ್..!
IPL 2023: ಏಪ್ರಿಲ್ 8 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಾಲ್ಬೆರಳು ಗಾಯಕ್ಕೆ ತುತ್ತಾಗುವ ಮೊದಲು ಸ್ಟೋಕ್ಸ್ ಈ ಸೀಸನ್ನಲ್ಲಿ ಚೆನ್ನೈ ಪರ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದರು.
ಐಪಿಎಲ್ 2023ರಲ್ಲಿ (IPL 2023) ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ (CSK vs SRH) ನಡುವಣ ಪಂದ್ಯ ಕೂಡ ಹೈವೋಲ್ಟೇಜ್ನಿಂದ ಕೂಡಿತ್ತು. ಇದರಲ್ಲಿ ಎಂಎಸ್ ಧೋನಿ ಪಡೆ 7 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನಕ್ಕೇರಿದೆ. ಇದು ಸಿಎಸ್‌ಕೆಗೆ ಈ ಸೀಸನ್ನಲ್ಲಿ ನಾಲ್ಕನೇ ಗೆಲುವಾಗಿದ್ದು, ಇದು ಪ್ಲೇಆಫ್ ಹಾದಿಯನ್ನು ಸುಲಭಗೊಳಿಸುತ್ತಿದೆ. ಆದರೆ ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಕೆಟ್ಟ ಸುದ್ದಿ ಇದ್ದು, ತಂಡದ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಇನ್ನೂ ಒಂದು ವಾರ ತಂಡದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಚೆನ್ನೈ ತಂಡದ ಮುಂದಿನ ಕೆಲವು ಪಂದ್ಯಗಳಲ್ಲಿ ಅವರು ಆಡುವ ಸಾಧ್ಯತೆ ಕಡಿಮೆ ಇದೆ ಎಂಬ ಮಾಹಿತಿ ಹೊರಬಿದ್ದಿದೆ.
ಕನಿಷ್ಠ ಎರಡು ಪಂದ್ಯಗಳಿಂದ ಔಟ್
ಬೆನ್ ಸ್ಟೋಕ್ಸ್ ಅವರ ಫಿಟ್ನೆಸ್ ಬಗ್ಗೆ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಮಾಹಿತಿ ನೀಡಿದ್ದು, ಬೆನ್ ಸ್ಟೋಕ್ಸ್ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅವರು ಸಂಪೂರ್ಣ ಫಿಟ್ ಆಗಲು ಇನ್ನೂ ಒಂದು ವಾರ ಬೇಕು. ಹೀಗಾಗಿ ಬೆನ್ ಸ್ಟೋಕ್ಸ್ ಕನಿಷ್ಠ ಎರಡು ಪಂದ್ಯಗಳಿಂದ ತಂಡದಿಂದ ಹೊರಗುಳಿಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಏಪ್ರಿಲ್ 8 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಾಲ್ಬೆರಳು ಗಾಯಕ್ಕೆ ತುತ್ತಾಗುವ ಮೊದಲು ಸ್ಟೋಕ್ಸ್ ಈ ಸೀಸನ್ನಲ್ಲಿ ಚೆನ್ನೈ ಪರ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದರು. ಆ ಬಳಿಕ ಚೆನ್ನೈ 4 ಪಂದ್ಯಗಳನ್ನಾಡಿದ್ದು, ಈ 4 ಪಂದ್ಯಗಳಿಂದಲೂ ಸ್ಟೋಕ್ಸ್ ತಂಡದಿಂದ ಹೊರಗುಳಿದಿದ್ದಾರೆ.
ಚಾಂಪಿಯನ್ ಪಟ್ಟ ಕಳೆದುಕೊಂಡ ಟೀಂ ಇಂಡಿಯಾ! ಬಿಸಿಸಿಐ ನಿರ್ಧಾರದಿಂದ ಪಾಕ್ ತಂಡಕ್ಕೆ ಬಿಗ್ ರಿಲೀಫ್
ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 17 ಕೋಟಿ ರೂ.ಗೆ ಖರೀದಿಸಿತು. ಆದಾಗ್ಯೂ, ಈ ಆಟಗಾರ ಸಿಎಸ್‌ಕೆಗೆ ಯಾವುದೇ ಪ್ರಯೋಜನವನ್ನು ತೋರುತ್ತಿಲ್ಲ. ಇದುವರೆಗೆ ಈ ಬಾರಿಯ ಐಪಿಎಲ್ನಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿರುವ ಸ್ಟೋಕ್ಸ್ ಬ್ಯಾಟಿಂಗ್ನಲ್ಲಿ ಕೇವಲ 15 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಅಲ್ಲದೆ ಗಾಯದಿಂದಾಗಿ ಸ್ಟೋಕ್ಸ್ ಹೆಚ್ಚಾಗಿ ಬೌಲಿಂಗ್ ಮಾಡುತ್ತಿಲ್ಲ.
ಪೂರ್ಣ ಐಪಿಎಲ್ ಆಡುತ್ತಾರಾ ಸ್ಟೋಕ್ಸ್?
ಪ್ಲೇಆಫ್‌ಗೂ ಮುನ್ನ ಬೆನ್ ಸ್ಟೋಕ್ಸ್ ಇಂಗ್ಲೆಂಡ್‌ಗೆ ಮರಳುವ ಸಾಧ್ಯತೆ ಇದೆ. ಇಂಗ್ಲೆಂಡ್ ಪರ ಟೆಸ್ಟ್ ಆಡುವುದು ತನ್ನ ಆದ್ಯತೆ ಎಂದು ಬೆನ್ ಸ್ಟೋಕ್ಸ್ ಸ್ಪಷ್ಟಪಡಿಸಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ಆಶಸ್ ಸರಣಿಯ ತಯಾರಿಯನ್ನು ಗಮನದಲ್ಲಿಟ್ಟುಕೊಂಡು ಸ್ಟೋಕ್ಸ್ ಐಪಿಎಲ್ ಅನ್ನು ಮಧ್ಯದಲ್ಲಿಯೇ ಬಿಟ್ಟು ಇಂಗ್ಲೆಂಡ್‌ಗೆ ಹೋಗಬಹುದು ಎಂದು ತೋರುತ್ತದೆ.
ಸ್ಟೋಕ್ಸ್ ಆಡದಿದ್ದರೂ ಸಿಎಸ್‌ಕೆಗೆ ಹೆಚ್ಚು ಹಿನ್ನಡೆಯಾಗುವ ಸಾಧ್ಯತೆಗಳಿಲ್ಲ. ಏಕೆಂದರೆ, ಸಿಎಸ್‌ಕೆ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, 4ರಲ್ಲಿ ಗೆದ್ದಿದೆ. ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಜೊತೆಗೆ ಕಾನ್ವೆ, ರುತುರಾಜ್, ರಹಾನೆ ಮತ್ತು ಶಿವಂ ದುಬೆ ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಸ್ಟೋಕ್ಸ್ ಅಲಭ್ಯತೆ ಚೆನ್ನೈ ಪಾಳಯಕ್ಕೆ ಹೆಚ್ಚು ಪರಿಣಾಮ ಬೀರುವುದಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Sat, 22 April 23