ಚಾಂಪಿಯನ್ ಪಟ್ಟ ಕಳೆದುಕೊಂಡ ಟೀಂ ಇಂಡಿಯಾ! ಬಿಸಿಸಿಐ ನಿರ್ಧಾರದಿಂದ ಪಾಕ್ ತಂಡಕ್ಕೆ ಬಿಗ್ ರಿಲೀಫ್
Asian Games 2023: ಏಷ್ಯನ್ ಗೇಮ್ಸ್‌ಗೆ ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿರುವುದು ಇದೇ ಮೊದಲಲ್ಲ. 2010 ಮತ್ತು 2014ರಲ್ಲೂ ಟೀಂ ಇಂಡಿಯಾ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರಲಿಲ್ಲ.
ಸದ್ಯ ಐಪಿಎಲ್ನಲ್ಲಿ (IPL 2023 ) ಬ್ಯುಸಿಯಾಗಿರುವ ಟೀಂ ಇಂಡಿಯಾ ಆಟಗಾರರು ಆ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೇರಿದಂತೆ, ಎರಡು ಪ್ರಮುಖ ಟೂರ್ನಿಗಳನ್ನು ಈ ವರ್ಷ ಆಡಲಿದೆ. ಮೊದಲು ಏಷ್ಯಾಕಪ್ ನಡೆದರೆ, ಆ ನಂತರ ಏಕದಿನ ವಿಶ್ವಕಪ್ (Asia Cup and then ODI World Cup) ಭಾರತದಲ್ಲೇ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಆಘಾತಕಾರಿ ನಿರ್ಧಾರ ಕೈಗೊಂಡಿದ್ದು, ಏಷ್ಯಾದ ಅತಿದೊಡ್ಡ ಕ್ರೀಡಾಕೂಟವಾದ ಏಷ್ಯನ್ ಗೇಮ್ಸ್‌ಗೆ ಭಾರತದ ಮಹಿಳಾ ಮತ್ತು ಪುರುಷರ ತಂಡವನ್ನು ಕಳುಹಿಸದಿರಲು ಬಿಸಿಸಿಐ (BCCI) ನಿರ್ಧರಿಸಿದೆ. ಈ ವರ್ಷ ಏಷ್ಯನ್ ಗೇಮ್ಸ್ (Asian Games) ಚೀನಾದಲ್ಲಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿದ್ದು, ಈ ಕ್ರೀಡಾಕೂಟಕ್ಕೆ ತಂಡವನ್ನು ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಈ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪ್ರತಿನಿಧಿಸುತ್ತಿರುವ ಕ್ರೀಡೆಗಳ ಬಗ್ಗೆ ಮುಖ್ಯಸ್ಥ ಭೂಪಿಂದರ್ ಬಾಜ್ವಾ ಮಾಹಿತಿ ನೀಡಿದ್ದು, ಆ ಮಾಹಿತಿಯ ಪ್ರಕಾರ ಕ್ರಿಕೆಟ್ ಹೊರತುಪಡಿಸಿ, ಎಲ್ಲಾ ಕ್ರೀಡೆಗಳಲ್ಲೂ ಭಾರತೀಯ ಸ್ಪರ್ಧಿಗಳು ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಅಲ್ಲದೆ ಏಕೆ ಕ್ರಿಕೆಟ್ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಆಡುತ್ತಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದು, ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಕ್ರಿಕೆಟ್ ತಂಡವನ್ನು ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ ಎಂದಿದ್ದಾರೆ. ಅಲ್ಲದೆ ಏಷ್ಯನ್ ಗೇಮ್ಸ್‌ಗೆ ತಂಡವನ್ನು ಕಳುಹಿಸುವ ಬಗ್ಗೆ ಸ್ಪಷ್ಟನೆ ಪಡೆಯುವ ಸಲುವಾಗಿ ಬಿಸಿಸಿಐಗೆ ಹಲವು ಮೇಲ್‌ಗಳನ್ನು ಕಳುಹಿಸಲಾಗಿದ್ದು, ಆ ಮೇಲ್ಗಳಿಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ, ತಂಡವನ್ನು ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದಿದ್ದಾರೆ.
LSG vs GT Live Score IPL 2023: ಗುಜರಾತ್ ಮೊದಲ ವಿಕೆಟ್ ಪತನ
ಬಿಡುವಿಲ್ಲದ ವೇಳಾಪಟ್ಟಿ
ವಾಸ್ತವವಾಗಿ ಭಾರತ ಪುರುಷರ ತಂಡ ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ಮತ್ತು ನಂತರ ಅಕ್ಟೋಬರ್‌ನಲ್ಲಿ ವಿಶ್ವಕಪ್ ಅನ್ನು ಆಡಬೇಕಾಗಿದೆ. ಆದರೆ ಈ ಬಾರಿಯ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯುತ್ತಿದ್ದು, ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಹೀಗಾಗಿ ಟೀಂ ಇಂಡಿಯಾ ಆಡಬೇಕಾದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಅದೇ ಸಮಯದಲ್ಲಿ, ಮಹಿಳಾ ಕ್ರಿಕೆಟ್‌ನ ಭವಿಷ್ಯದ ಪ್ರವಾಸ ಕಾರ್ಯಕ್ರಮವನ್ನು ಬಿಸಿಸಿಐ ಈಗಾಗಲೇ ಅಂತಿಮಗೊಳಿಸಿದೆ. ಹೀಗಾಗಿ ಏಷ್ಯನ್ ಗೇಮ್ಸ್ ನಡೆಯುವ ಸಮಯದಲ್ಲಿ ಮಹಿಳಾ ತಂಡ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಹೀಗಾಗಿ ಈ ಮಹಾ ಕ್ರೀಡಾಕೂಟಕ್ಕೆ ಕ್ರಿಕೆಟ್ ತಂಡವನ್ನು ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ.
ಪಾಕಿಸ್ತಾನಕ್ಕೆ ಬಿಗ್ ರಿಲೀಫ್
ಏಷ್ಯನ್ ಗೇಮ್ಸ್‌ಗೆ ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿರುವುದು ಇದೇ ಮೊದಲಲ್ಲ. 2010 ಮತ್ತು 2014ರಲ್ಲೂ ಟೀಂ ಇಂಡಿಯಾ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರಲಿಲ್ಲ. ಇನ್ನುಳಿದಂತೆ 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಟವನ್ನು ಸೇರಿಸಿರಲಿಲ್ಲ. ಇದೀಗ ಬಿಸಿಸಿಐ, ಭಾರತ ಕ್ರಿಕೆಟ್ ತಂಡವನ್ನು ಏಷ್ಯನ್ ಗೇಮ್ಸ್‌ಗೆ ಕಳುಹಿಸದಿರಲು ತೀರ್ಮಾನಿಸಿರುವುದು ಪಾಕಿಸ್ತಾನ ತಂಡಕ್ಕೆ ಬಿಗ್ ರಿಲೀಫ್ ತಂದುಕೊಟ್ಟಿದೆ. ಏಕೆಂದರೆ ಏಷ್ಯನ್ ರಾಷ್ಟ್ರಗಳಲ್ಲಿ ಕ್ರಿಕೆಟ್ ವಿಚಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ಭಾರತ ಪ್ರಬಲ ಎದುರಾಳಿ. ಆದರೆ ಈ ಬಾರಿ ಟೀಂ ಇಂಡಿಯಾ ಹೋಗದಿರುವುದು ಪಾಕ್ ತಂಡದ ಕಪ್ ಗೆಲ್ಲುವ ಕನಸಿಗೆ ನೀರೆರಿದೆ. ಪಾಕಿಸ್ತಾನದ ಮಹಿಳಾ ತಂಡ ಎರಡೂ ಬಾರಿ ಪ್ರಶಸ್ತಿ ಗೆದ್ದಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Sat, 22 April 23