IPL 2023: ಐಪಿಎಲ್ ಇತಿಹಾಸದಲ್ಲಿ ಕನ್ನಡಿಗನ ಹೆಸರಿನಲ್ಲಿದೆ ಅದೊಂದು ವಿಶೇಷ ದಾಖಲೆ..!

|

Updated on: Mar 25, 2023 | 11:54 AM

IPL: ಮೇ 2009 ರಂದು, ಆರ್​ಸಿಬಿ, ಡೆಕ್ಕನ್ ಚಾರ್ಜರ್ಸ್ ವಿರುದ್ಧ ಪಂದ್ಯವನ್ನು ಆಡಿತ್ತು. ಆ ಪಂದ್ಯದಲ್ಲಿ ಮನೀಶ್ 73 ಎಸೆತಗಳಲ್ಲಿ 114 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ್ದರು.

IPL 2023: ಐಪಿಎಲ್ ಇತಿಹಾಸದಲ್ಲಿ ಕನ್ನಡಿಗನ ಹೆಸರಿನಲ್ಲಿದೆ ಅದೊಂದು ವಿಶೇಷ ದಾಖಲೆ..!
ಮನೀಶ್ ಪಾಂಡೆ
Follow us on

ಮತ್ತೊಂದು ಐಪಿಎಲ್ (IPL) ಸೀಸನ್ ಬರುತ್ತಿದೆ. ಐಪಿಎಲ್ ಎಂದರೆ ರೆಕಾರ್ಡ್ ಬ್ರೇಕಿಂಗ್ ಲೀಗ್ ಎಂತಲೇ ಹೇಳಬಹುದು. ಈ ಪದ್ಧತಿ ಟೂರ್ನಿಯ ಮೊದಲ ಸೀಸನ್​ನಿಂದಲೂ ಕಂಡುಬರುತ್ತಿದೆ. ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್ ಸ್ಟಾರ್ ಕ್ರಿಕೆಟಿಗ ಬ್ರೆಂಡನ್ ಮೆಕಲಮ್ (Brendon McCullum) ಇಂಡಿಯನ್ ಪ್ರೀಮಿಯರ್ ಲೀಗ್ (IPL Century) ಇತಿಹಾಸದಲ್ಲಿ ಮೊದಲ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದರು. ಈ ಮೂಲಕ ಐಪಿಎಲ್​ನಲ್ಲಿ ಶತಕ ಬಾರಿಸಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೂ ಮೆಕಲಮ್ ಪಾತ್ರರಾಗಿದ್ದರು. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಶತಕ ಬಾರಿಸಿದ ಭಾರತೀಯ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದು ಮಾತ್ರ ಆಗಷ್ಟೇ ಕ್ರಿಕೆಟ್ ಲೋಕಕ್ಕೆ ಕಾಲಿಡುತ್ತಿದ್ದ ಕರ್ನಾಟಕದ ಯುವ ಕ್ರಿಕೆಟಿಗ ಮನೀಶ್ ಪಾಂಡೆ (Manish Pandey). ತನ್ನ ಚೊಚ್ಚಲ ಆವೃತ್ತಿಯಲ್ಲೇ ಆರ್​ಸಿಬಿ (RCB) ಪರ ಕಣಕ್ಕಿಳಿದಿದ್ದ ಮನೀಶ್ ದಾಖಲೆ ಶತಕ ಸಿಡಿಸಿದ್ದರು.

73 ಎಸೆತಗಳಲ್ಲಿ 114 ರನ್

19ನೇ ವಯಸ್ಸಿನಲ್ಲೇ ಐಪಿಎಲ್‌ನಲ್ಲಿ ಶತಕ ಬಾರಿಸುವ ಮೂಲಕ ಮನೀಶ್ ಇತಿಹಾಸದ ಪುಟ ಸೇರಿದ್ದರು. 21 ಮೇ 2009 ರಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಪಂದ್ಯವನ್ನು ಆಡಿತ್ತು. ಆ ಪಂದ್ಯದಲ್ಲಿ ಮನೀಶ್ 73 ಎಸೆತಗಳಲ್ಲಿ 114 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ 12 ರನ್‌ಗಳಿಂದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಮಣಿಸಿದಲ್ಲದೆ, ಐಪಿಎಲ್‌ನ ಸೆಮಿಫೈನಲ್ ತಲುಪಿತ್ತು. ಗೆಲುವಿನ ಇನ್ನಿಂಗ್ಸ್ ಆಡಿದ್ದ ಮನೀಶ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

IPL 2023: ಕೊಹ್ಲಿ, ರೋಹಿತ್, ಧೋನಿ ಅಲ್ಲ; ಈ ಆವೃತ್ತಿಯ ಅತ್ಯಂತ ದುಬಾರಿ ಆಟಗಾರರು ಯಾರು ಗೊತ್ತಾ?

ಐಪಿಎಲ್‌ನಲ್ಲಿ 7 ಮಂದಿ ಕ್ರಿಕೆಟಿಗರು ಶತಕ ಬಾರಿಸಿದ್ದರು

ವಾಸ್ತವವಾಗಿ ಮನೀಶ್ ಪಾಂಡೆ ಭಾರತ ಅಂಡರ್ 19 ತಂಡದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರು. ಆದರೆ ವಿರಾಟ್‌ಗಿಂತ ಮೊದಲು ಐಪಿಎಲ್‌ನಲ್ಲಿ ಶತಕ ಬಾರಿಸುವ ಮೂಲಕ ಗಮನ ಸೆಳೆದವರು. ಮನೀಶ್ ಪಾಂಡೆಗಿಂತಲೂ ಮೊದಲು ಐಪಿಎಲ್‌ನಲ್ಲಿ 7 ಮಂದಿ ಕ್ರಿಕೆಟಿಗರು ಶತಕ ಬಾರಿಸಿದ್ದರು. ಹೀಗಾಗಿ ಮನೀಶ್ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಎಂಟನೇ ಕ್ರಿಕೆಟಿಗ ಎನಿಸಿಕೊಂಡರು. ಐಪಿಎಲ್‌ನಲ್ಲಿ ದಾಖಲೆಯ ಶತಕ ಬಾರಿಸಿದ ಮನೀಶ್​, 2015 ರಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಇದುವರೆಗೆ ಟೀಂ ಇಂಡಿಯಾ ಪರ 29 ಏಕದಿನ ಮತ್ತು 39 ಟಿ20 ಪಂದ್ಯಗಳನ್ನು ಆಡಿರುವ ಮನೀಶ್ ಈ ಎರಡು ಸ್ವರೂಪಗಳಲ್ಲಿ ಕ್ರಮವಾಗಿ 566 ಮತ್ತು 709 ರನ್ ಬಾರಿಸಿದ್ದಾರೆ.

ದೆಹಲಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್‌ನಲ್ಲಿ ಇದುವರೆಗೆ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ ವಾರಿಯರ್ಸ್ ಇಂಡಿಯಾ, ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪರ ಮನೀಶ್ ಆಡಿದ್ದಾರೆ. ಪ್ರಸ್ತುತ ಐಪಿಎಲ್ ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮನೀಶ್ ಅವರನ್ನು 2.4 ಕೋಟಿ ರೂ.ಗೆ ಖರೀದಿಸಿದೆ. ಇದರಿಂದಾಗಿ ಐಪಿಎಲ್ 16ನೇ ಆವೃತ್ತಿಯಲ್ಲಿ ಮನೀಶ್ ದೆಹಲಿಯ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:51 am, Sat, 25 March 23