IPL 2023: ಲೀಗ್‌ನ ಸಾವಿರನೇ ಪಂದ್ಯ ಯಾರ ನಡುವೆ ಗೊತ್ತಾ? ಇಲ್ಲಿವೆ 16ನೇ ಆವೃತ್ತಿಯ 16 ವಿಶೇಷತೆಗಳು
IPL 2023: ಸುಮಾರು ಎರಡು ತಿಂಗಳ ಕಾಲ ಟಿ20 ಕ್ರಿಕೆಟ್ನ ಪ್ರಚಂಡ ಕದನ ನಡೆಯಲಿದ್ದು, ಬಳಿಕ ಚಾಂಪಿಯನ್ ಯಾರು ಎಂಬುದು ನಿರ್ಧಾರವಾಗಲಿದೆ.
16ನೇ ಆವೃತ್ತಿಯ ಐಪಿಎಲ್ಗೆ ದಿನಗಣನೆ ಆರಂಭವಾಗಿದೆ. 2008 ರಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ನ 16 ನೇ ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಹತ್ತು ತಂಡಗಳ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Gujarat Titans and Chennai Super Kings) ಪೈಪೋಟಿ ನಡೆಸಲಿವೆ. ಮತ್ತೊಮ್ಮೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಬೆನ್ ಸ್ಟೋಕ್ಸ್ (Virat Kohli, Rohit Sharma, Mahendra Singh Dhoni, Ben Stokes,) ಸೇರಿದಂತೆ ವಿಶ್ವದ ಹಲವು ದಿಗ್ಗಜ ಕ್ರಿಕೆಟಿಗರ ನಡುವೆ ಸುಮಾರು ಎರಡು ತಿಂಗಳ ಕಾಲ ಟಿ20 ಕ್ರಿಕೆಟ್ನ (T20 cricket) ಪ್ರಚಂಡ ಕದನ ನಡೆಯಲಿದ್ದು, ಬಳಿಕ ಚಾಂಪಿಯನ್ ಯಾರು ಎಂಬುದು ನಿರ್ಧಾರವಾಗಲಿದೆ. ಆದರೆ ಅದಕ್ಕೂ ಮುನ್ನ ಈ 16ನೇ ಆವೃತ್ತಿಯ ಐಪಿಎಲ್ನ ವಿಶೇಷತೆಗಳೇನು ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ.
IPL: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿರುವ ತಂಡ ಯಾವುದು ಗೊತ್ತಾ?
16ನೇ ಆವೃತ್ತಿಯ 16 ವಿಶೇಷ ಸಂಗತಿಗಳು
- ಈ ಬಾರಿಯ ಐಪಿಎಲ್‌ನಲ್ಲಿ ಎಂದಿನಂತೆ ಎಲ್ಲಾ 10 ತಂಡಗಳನ್ನು ತಲಾ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಕಳೆದ ಸೀಸನ್‌ನಲ್ಲಿಯೂ ಇದೇ ರೀತಿ ಮಾಡಲಾಗಿತ್ತು. ಒಂದೇ ವ್ಯತ್ಯಾಸವೆಂದರೆ ಈ ಬಾರಿ ಪ್ರತಿ ಗುಂಪಿನ ತಂಡವು ಇತರ ಗುಂಪಿನ ಇತರ ಐದು ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಆಡುತ್ತದೆ. ಆದರೆ ತಮ್ಮದೇ ಗುಂಪಿನ ಉಳಿದ 4 ತಂಡಗಳ ವಿರುದ್ಧ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಲಾಗುತ್ತದೆ.
- ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿದ್ದು, ಈ ಪೈಕಿ 70 ಪಂದ್ಯಗಳು ಲೀಗ್ ಹಂತದಲ್ಲಿರಲಿವೆ. ಈ 70 ಪಂದ್ಯಗಳು 12 ನಗರಗಳಲ್ಲಿ ನಡೆಯಲಿವೆ. ಈ ಪೈಕಿ ಎಲ್ಲಾ 10 ತಂಡಗಳ ತವರು ಮೈದಾನದ ಹೊರತಾಗಿ ಗುವಾಹಟಿ ಮತ್ತು ಧರ್ಮಶಾಲಾದಲ್ಲಿಯೂ ಪಂದ್ಯಗಳು ನಡೆಯಲಿವೆ. ಗುವಾಹಟಿಯಲ್ಲಿ ಮೊದಲ ಬಾರಿಗೆ ಐಪಿಎಲ್ ಪಂದ್ಯಗಳು ನಡೆಯಲಿವೆ.
- ಪಂದ್ಯಾವಳಿಯು ಮಾರ್ಚ್ 31 ರಿಂದ ಆರಂಭವಾಗಿ ಮೇ 28ರವರೆಗೆ ನಡೆಯಲ್ಲಿದ್ದು, ಇದರಲ್ಲಿ ಒಟ್ಟು 18 ಡಬಲ್ ಹೆಡರ್ ಪಂದ್ಯಗಳು ನಡೆಯಲ್ಲಿವೆ. ಅಂದರೆ ಒಂದೇ ದಿನದಲ್ಲಿ ಎರಡು ಪಂದ್ಯಗಳು ನಡೆಯಲ್ಲಿವೆ. ಕಳೆದ ಬಾರಿಯಂತೆ ದಿನದ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದ್ದು, ಸಂಜೆಯ ಎಲ್ಲಾ ಪಂದ್ಯಗಳು ರಾತ್ರಿ 7.30ರಿಂದ ಆರಂಭವಾಗಲಿವೆ.
- ಈ ಸೀಸನ್ನ ಇನ್ನೊಂದು ವಿಶೇಷ ಸಂಗತಿಯೆಂದರೆ ಲೀಗ್‌ನ 1000ದ ಪಂದ್ಯ ನಡೆಯಲಿದೆ. ಕಾಕತಾಳೀಯವೆಂದರೆ ಈ ಪಂದ್ಯವು ಲೀಗ್‌ನ ಎರಡು ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೇ.6ರಂದು ನಡೆಯಲಿದೆ.
- ಬಿಸಿಸಿಐ ಇದುವರೆಗೆ ಲೀಗ್ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದ್ದು, ಇದು ಮಾರ್ಚ್ 31 ರಿಂದ ಮೇ 21 ರವರೆಗೆ ನಡೆಯಲಿದೆ. ಫೈನಲ್ ಸೇರಿದಂತೆ ಪ್ಲೇಆಫ್‌ನ 4 ಪಂದ್ಯಗಳ ವೇಳಾಪಟ್ಟಿಯನ್ನು ಪಂದ್ಯಾವಳಿಯ ಮಧ್ಯದಲ್ಲಿ ಬಿಡುಗಡೆ ಮಾಡಲಾಗುತ್ತದೆ.
- ಈ ಬಾರಿಯ ಐಪಿಎಲ್‌ನಲ್ಲಿ ಭಾರತದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಮುಂಬೈ ಇಂಡಿಯನ್ಸ್ ಪರ ಆಡದ ಮೊದಲ ಸೀಸನ್ ಇದಾಗಿರುತ್ತದೆ. ಬುಮ್ರಾ ಹೊರತುಪಡಿಸಿ, ರಿಷಬ್ ಪಂತ್ ಕೂಡ ಮೊದಲ ಬಾರಿಗೆ ಐಪಿಎಲ್ನಿಂದ ಹೊರಬಿದ್ದಿದ್ದಾರೆ.
- ಈ ಬಾರಿಯ ಐಪಿಎಲ್‌ನಲ್ಲಿ ಮೂವರು ಹೊಸ ನಾಯಕರು ತಂಡಗಳ ನಾಯಕತ್ವವನ್ನು ನಿಭಾಯಿಸಲಿದ್ದಾರೆ. ಪಂಜಾಬ್ ಕಿಂಗ್ಸ್ ಶಿಖರ್ ಧವನ್ ಅವರನ್ನು ನಾಯಕನನ್ನಾಗಿ ಮಾಡಿದ್ದರೆ, ಎಸ್‌ಆರ್‌ಹೆಚ್ ಐಡೆನ್ ಮಾರ್ಕ್ರಾಮ್‌ಗೆ ಜವಾಬ್ದಾರಿಯನ್ನು ನೀಡಿದೆ. ಅದೇ ಸಮಯದಲ್ಲಿ, ರಿಷಬ್ ಪಂತ್ ಅನುಪಸ್ಥಿತಿಯಲ್ಲಿ, ಡೇವಿಡ್ ವಾರ್ನರ್ ದೆಹಲಿಯನ್ನು ಮುನ್ನಡೆಸಲಿದ್ದಾರೆ. ಅಂದಹಾಗೆ, ಕೆಕೆಆರ್ ಕೂಡ ಹೊಸ ನಾಯಕನನ್ನು ಮಾಡಬೇಕಾಗಿದೆ ಏಕೆಂದರೆ ಶ್ರೇಯಸ್ ಅಯ್ಯರ್ ಐಪಿಎಲ್ ಆಡುವುದು ಕೂಡ ಅನುಮಾನವಾಗಿದೆ.
- ಕೊರೊನಾದಿಂದಾಗಿ ಕಳೆದ 3 ಸೀಸನ್ಗಳನ್ನು ಬಯೋ-ಬಬಲ್‌ನಲ್ಲಿ ಆಯೋಜಿಸಲಾಗಿತ್ತು. ಆದರೆ ಈಗ ಅಂತಿಮವಾಗಿ ಐಪಿಎಲ್ ಬಯೋ-ಬಬಲ್ ಇಲ್ಲದೆ ನಡೆಯಲಿದೆ.
- ಇದರೊಂದಿಗೆ ಪಂದ್ಯಾವಳಿಯು ತನ್ನ ಹಳೆಯ ‘ಹೋಮ್ ಅಂಡ್ ಅವೇ’ ಸ್ವರೂಪಕ್ಕೆ ಮರಳಿದೆ. ಕಳೆದ 3 ಸೀಸನ್‌ಗಳಲ್ಲಿ, 2020 ರ ಸಂಪೂರ್ಣ ಸೀಸನ್ ಮತ್ತು 2021 ರ ಅರ್ಧದಷ್ಟು ಸೀಸನ್ ಯುಎಇಯಲ್ಲಿ ನಡೆದಿತ್ತು. ಅದೇ ಸಮಯದಲ್ಲಿ, 2021 ರ ಅರ್ಧ ಸೀಸನ್ನ ಪಂದ್ಯಗಳನ್ನು ಕೆಲವು ನಗರಗಳಲ್ಲಿ ಆಡಿಸಲಾಗಿತ್ತು. ಬಳಿಕ 2022 ರ ಸಂಪೂರ್ಣ ಆವೃತ್ತಿಯ ಲೀಗ್ ಪಂದ್ಯಗಳನ್ನು ಮುಂಬೈನಲ್ಲಿ ಆಡಿಸಿದ್ದರೆ, ಫೈನಲ್ ಸೇರಿದಂತೆ ಪ್ಲೇಆಫ್ ಪಂದ್ಯಗಳನ್ನು ಅಹಮದಾಬಾದ್ ಮತ್ತು ಕೋಲ್ಕತ್ತಾದಲ್ಲಿ ಆಡಿಸಲಾಗಿತ್ತು.
- ಈ ಆವೃತ್ತಿಯಿಂದ ಬಯೋ ಬಬಲ್ ಅನ್ನು ತೆಗೆದುಹಾಕಿದ್ದರೂ, ಬಿಸಿಸಿಐ ಕೊರೊನಾ ಸೋಂಕಿನ ನಿಯಮಗಳನ್ನು ಮೊದಲಿನಂತೆಯೇ ಇರಿಸಿದೆ. ಅಂದರೆ, ಯಾವುದಾದರೂ ಆಟಗಾರ ಕೊರೊನಾ ಸೋಂಕಿತರಾದರೆ, ಆತ ಒಂದು ವಾರದವರೆಗೆ ಪ್ರತ್ಯೇಕವಾಗಿರಬೇಕಾಗುತ್ತದೆ.
- ಈ ಬಾರಿ ಐಪಿಎಲ್‌ನಲ್ಲೂ ಹೊಸ ನಿಯಮಗಳು ಬಂದಿವೆ. ಇವುಗಳಲ್ಲಿ ಪ್ರಮುಖವಾದದ್ದು ಇಂಪ್ಯಾಕ್ಟ್ ಪ್ಲೇಯರ್. ಇದರ ಅಡಿಯಲ್ಲಿ, ಪ್ರತಿ ತಂಡವು ಪಂದ್ಯದ ಸಮಯದಲ್ಲಿ ಯಾವುದೇ ಇನ್ನಿಂಗ್ಸ್‌ನಲ್ಲಿ ಒಬ್ಬ ಆಟಗಾರನನ್ನು ಬದಲಾಯಿಸುವ ಅವಕಾಶವನ್ನು ಹೊಂದಿರುತ್ತವೆ. ಆದರೆ, ಹೊರಗೆ ಹೋದ ಆಟಗಾರ ಆ ಪಂದ್ಯದಲ್ಲಿ ಮತ್ತೆ ಆಡಲು ಸಾಧ್ಯವಾಗುವುದಿಲ್ಲ.
- ಇದಲ್ಲದೇ ಪ್ಲೇಯಿಂಗ್ ಇಲೆವೆನ್ನಲ್ಲಿಯೂ ಬದಲಾವಣೆ ಮಾಡಬಹುದಾಗಿದೆ. ಅಂದರೆ, ಇನ್ನು ಮುಂದೆ ಪ್ರತಿ ತಂಡದ ನಾಯಕ ಟಾಸ್ ವೇಳೆ ಎರಡು ಪ್ಲೇಯಿಂಗ್ ಇಲೆವೆನ್ ಅನ್ನು ಸಿದ್ಧವಾಗಿ ಇರಿಸಿಕೊಳ್ಳಬಹುದಾಗಿದೆ. ಟಾಸ್ ನಂತರ, ಮೊದಲ ಬ್ಯಾಟಿಂಗ್ ಅಥವಾ ಬೌಲಿಂಗ್ ಪ್ರಕಾರ ಸಿದ್ಧಪಡಿಸಿದ ಪ್ಲೇಯಿಂಗ್ ಇಲೆವೆನ್ ಕಣಕ್ಕಿಳಿಸಬಹುದಾದ ಆಯ್ಕೆ ಇರುತ್ತದೆ.
- ಇಷ್ಟೇ ಅಲ್ಲ, ಈ ಬಾರಿ ಆಟಗಾರರು ವೈಡ್ ಅಥವಾ ನೋ ಬಾಲ್ ನಿರ್ಧಾರಗಳ ಮೇಲೆಯೂ ಡಿಆರ್‌ಎಸ್ ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ.
- ಅಲ್ಲದೆ, ನಿಧಾನಗತಿಯ ಓವರ್ಗೂ ದಂಡ ವಿಧಿಸಲಾಗಿದ್ದು, ಈ ನಿಯಮದ ಪ್ರಕಾರ ಬೌಲಿಂಗ್ ಮಾಡುವ ತಂಡ ನಿಗಧಿತ ಸಮಯದಲ್ಲಿ ಓವರ್ ಮುಗಿಸದಿದ್ದರೆ, ಉಳಿದ ಓವರ್‌ಗಳಲ್ಲಿ, ಫೀಲ್ಡಿಂಗ್ ತಂಡವು 30 ಯಾರ್ಡ್ ವೃತ್ತದ ಹೊರಗೆ 5 ಫೀಲ್ಡರ್‌ಗಳ ಬದಲಿಗೆ ಕೇವಲ 4 ಫೀಲ್ಡರ್‌ಗಳನ್ನು ಮಾತ್ರ ಫೀಲ್ಡಿಂಗ್ ಮಾಡಿಸಬೇಕಾಗುತ್ತದೆ.
- ಮತ್ತೊಂದೆಡೆ, ಬೌಲಿಂಗ್ ಸಮಯದಲ್ಲಿ ವಿಕೆಟ್ ಕೀಪರ್ ಅಥವಾ ಫೀಲ್ಡರ್‌ಗಳು ತಮ್ಮ ಸ್ಥಾನ ಪಲ್ಲಟ ಮಾಡಿದರೆ ಆ ಬಾಲನ್ನು ಡೆಡ್ ಬಾಲ್ ಎಂದು ಘೋಷಿಸುವುದರೊಂದಿಗೆ, ಬ್ಯಾಟಿಂಗ್ ಮಾಡುವ ತಂಡಕ್ಕೆ 5 ರನ್ಗಳನ್ನು ಬೋನಸ್ ಆಗಿ ನೀಡಲಾಗುತ್ತದೆ.
- ಐಪಿಎಲ್ 16 ನೇ ಸೀಸನ್‌ನಲ್ಲಿ, ಕೆಲವು ಪ್ರಸಿದ್ಧ ವಿದೇಶಿ ಮುಖಗಳು ಸಹ ಕಾಣಿಸಿಕೊಳ್ಳಲಿದ್ದು, ಅವರು ಮೊದಲ ಬಾರಿಗೆ ಲೀಗ್‌ನ ಭಾಗವಾಗುತ್ತಿದ್ದಾರೆ. ಇವರಲ್ಲಿ ಇಂಗ್ಲೆಂಡ್‌ನ ಅನುಭವಿ ಜೋ ರೂಟ್, ಸ್ಫೋಟಕ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್, ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್, ಬಾಂಗ್ಲಾದೇಶದ ಡ್ಯಾಶಿಂಗ್ ಬ್ಯಾಟ್ಸ್‌ಮನ್ ಲಿಟನ್ ದಾಸ್, ನ್ಯೂಜಿಲೆಂಡ್‌ನ ಮೈಕೆಲ್ ಬ್ರೇಸ್‌ವೆಲ್ ಮತ್ತು ಐರ್ಲೆಂಡ್‌ನ ವೇಗಿ ಜೋಶ್ ಲಿಟಲ್ ಅವರ ಹೆಸರನ್ನು ಒಳಗೊಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:49 am, Sat, 25 March 23