IPL 2023: ರೋಹಿತ್ ಪಡೆಗೆ ಸೋಲಿನ ಭಯ ಹುಟ್ಟಿಸಿದ್ದ ಕಿವೀಸ್ ಆಲ್​ರೌಂಡರ್​ಗೆ ಗಾಳ ಹಾಕಿದ ಆರ್​ಸಿಬಿ!

|

Updated on: Mar 18, 2023 | 3:16 PM

IPL 2023: ಮೈಕೆಲ್ ಬ್ರೇಸ್‌ವೆಲ್ ಅವರ ವೃತ್ತಿಜೀವನವನ್ನು ಇಲ್ಲಿಯವರೆಗೆ ನೋಡಿದರೆ, 16 ಟಿ20 ಪಂದ್ಯಗಳಲ್ಲಿ 139.50 ಸ್ಟ್ರೈಕ್ ರೇಟ್‌ನಲ್ಲಿ 113 ರನ್ ಗಳಿಸಿದ್ದಾರೆ. ಅಲ್ಲದೆ ಬೌಲಿಂಗ್​ನಲ್ಲೂ ಮಿಂಚಿರುವ ಬ್ರೇಸ್‌ವೆಲ್, ಟಿ20ಯಲ್ಲಿ 21 ವಿಕೆಟ್ ಪಡೆದಿದ್ದಾರೆ.

IPL 2023: ರೋಹಿತ್ ಪಡೆಗೆ ಸೋಲಿನ ಭಯ ಹುಟ್ಟಿಸಿದ್ದ ಕಿವೀಸ್ ಆಲ್​ರೌಂಡರ್​ಗೆ ಗಾಳ ಹಾಕಿದ ಆರ್​ಸಿಬಿ!
ಆರ್​ಸಿಬಿ ಸೇರಿದ ಮೈಕೆಲ್ ಬ್ರೇಸ್‌ವೆಲ್
Follow us on

16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭಕ್ಕೂ ಮುನ್ನವೇ ಸ್ಟಾರ್ ಬ್ಯಾಟರ್ ಇಂಜುರಿಯಿಂದ ಕಂಗೆಟ್ಟಿದ್ದ ಆರ್​ಸಿಬಿ (RCB), ಬದಲಿ ಆಟಗಾರನಾಗಿ ನ್ಯೂಜಿಲೆಂಡ್​ನ ಸ್ಫೋಟಕ ಆಲ್​ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಿನಿ ಹರಾಜಿನಲ್ಲಿ ಬರೋಬ್ಬರಿ 3.25 ಕೋಟಿ ನೀಡಿ ಖರೀದಿಸಿದ್ದ ವಿಲ್ ಜಾಕ್ಸ್ (Will Jacks), ಇಂಜುರಿಗೆ ತುತ್ತಾಗಿ ಇಡೀ ಐಪಿಎಲ್​ನಿಂದಲೇ ಹೊರಗುಳಿಯಬೇಕಾಯಿತು. ಹೀಗಾಗಿ ಅವರ ಬದಲಿ ಆಟಗಾರನನ್ನು ಹುಡುಕುತ್ತಿದ್ದ ಆರ್‌ಸಿಬಿ, ನ್ಯೂಜಿಲೆಂಡ್‌ ತಂಡದ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ (Michael Bracewell) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.

ಈ ಮಾಹಿತಿಯನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಆರ್‌ಸಿಬಿ, “ಐಪಿಎಲ್ 2023 ರಲ್ಲಿ ವಿಲ್ ಜಾಕ್ಸ್ ಬದಲಿಗೆ ನ್ಯೂಜಿಲೆಂಡ್‌ನ ಮೈಕೆಲ್ ಬ್ರೇಸ್‌ವೆಲ್ ತಂಡ ಸೇರಿಕೊಂಡಿದ್ದಾರೆ” ಎಂದು ಬದುಕೊಂಡಿದೆ. ಈ ಹಿಂದೆ ಆರ್​ಸಿಬಿ ಸೇರಿಕೊಂಡಿದ್ದ ವಿಲ್ ಜಾಕ್ಸ್, ಬಾಂಗ್ಲಾದೇಶ ಪ್ರವಾಸದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಇಂಜುರಿಗೆ ತುತ್ತಾದರು. ಈ ಕಾರಣದಿಂದಾಗಿ ಅವರು ಐಪಿಎಲ್​ನಿಂದ ಹೊರಗುಳಿದಿದ್ದಾರೆ.

ಟೀಂ ಇಂಡಿಯಾ ವಿರುದ್ಧ ಅಬ್ಬರ

ಸದ್ಯ ಆರ್​ಸಿಬಿ ಸೇರಿಕೊಂಡಿರುವ ಮೈಕೆಲ್ ಬ್ರೇಸ್‌ವೆಲ್ ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ತಂಡ ಭಾರತ ಪ್ರವಾಸಕ್ಕೆ ಬಂದಿತ್ತು. ಈ ಪ್ರವಾಸದಲ್ಲಿ3 ಪಂದ್ಯಗಳ ಏಕದಿನ ಸರಣಿ ಮತ್ತು 3 ಪಂದ್ಯಗಳ ಟಿ20 ಸರಣಿಯನ್ನು ಕಿವೀಸ್ ಆಡಿತ್ತು. ಈ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೈಕೆಲ್ ಬ್ರೇಸ್‌ವೆಲ್, ತಮ್ಮ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಇದಲ್ಲದೇ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಭಾರತಕ್ಕೆ ಸೋಲಿನ ಭಯ ಹುಟ್ಟಿಸಿದ್ದರು. ಮಿಚೆಲ್ ಸ್ಯಾಂಟ್ನರ್ ಜೊತೆ ಉತ್ತಮ ಜೊತೆಯಾಟ ನಡೆಸಿ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಈ ಜೊತೆಯಾಟವು ಭಾರತದ ಬಾಯಿಂದ ಗೆಲುವನ್ನು ಕಸಿದುಕೊಳ್ಳುವಂತೆ ತೋರುತ್ತಿತ್ತು. ಆದರೆ ಮೈಕೆಲ್ ಬ್ರೇಸ್‌ವೆಲ್​ಗೆ ಉತ್ತಮ ಸಾಥ್ ಸಿಗದ ಕಾರಣ ಆ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು.

IND vs AUS: ಕೊಹ್ಲಿ ಮಾತನ್ನು ಕಡೆಗಣಿಸಿದ್ರಾ ಪಾಂಡ್ಯ? ಸಖತ್ ವೈರಲ್ ಆಗುತ್ತಿದೆ ಈ ವಿಡಿಯೋ

ಮೈಕೆಲ್ ಬ್ರೇಸ್‌ವೆಲ್ ವೃತ್ತಿ ಜೀವನ

ಮೈಕೆಲ್ ಬ್ರೇಸ್‌ವೆಲ್ ಅವರ ವೃತ್ತಿಜೀವನವನ್ನು ಇಲ್ಲಿಯವರೆಗೆ ನೋಡಿದರೆ, 16 ಟಿ20 ಪಂದ್ಯಗಳಲ್ಲಿ 139.50 ಸ್ಟ್ರೈಕ್ ರೇಟ್‌ನಲ್ಲಿ 113 ರನ್ ಗಳಿಸಿದ್ದಾರೆ. ಅಲ್ಲದೆ ಬೌಲಿಂಗ್​ನಲ್ಲೂ ಮಿಂಚಿರುವ ಬ್ರೇಸ್‌ವೆಲ್, ಟಿ20ಯಲ್ಲಿ 21 ವಿಕೆಟ್ ಪಡೆದಿದ್ದಾರೆ. ಆಫ್-ಸ್ಪಿನ್ನರ್ ಆಗಿರುವ ಮೈಕೆಲ್ ಬ್ರೇಸ್‌ವೆಲ್, ಆರ್​ಸಿಬಿಗೆ ಯಾವ ರೀತಿಯಾಗಿ ನೆರವಾಗುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Sat, 18 March 23