IPL 2023: ಸೂರ್ಯನ ಬಾಯಲ್ಲಿ ಇಂಥಾ ಮಾತಾ…! ಔಟಾಗಿದ್ದಕ್ಕೆ ನಾಲಿಗೆ ಹರಿಬಿಟ್ಟ ಮಿ.360; ವಿಡಿಯೋ

IPL 2023: ಕ್ರಿಕೆಟ್​ನ ಮಿ. 360 ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಔಟಾದ ಹತಾಶೆಯಲ್ಲಿ ಬಳಸಿದ ಪದ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.

IPL 2023: ಸೂರ್ಯನ ಬಾಯಲ್ಲಿ ಇಂಥಾ ಮಾತಾ...! ಔಟಾಗಿದ್ದಕ್ಕೆ ನಾಲಿಗೆ ಹರಿಬಿಟ್ಟ ಮಿ.360; ವಿಡಿಯೋ
ಸೂರ್ಯಕುಮಾರ್ ಯಾದವ್

Updated on: May 01, 2023 | 4:27 PM

ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿದ್ದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI vs RR) ತಂಡ ರೋಚಕ ಜಯ ಸಾಧಿಸುವುದರೊಂದಿಗೆ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತಂಡ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಚೊಚ್ಚಲ ಶತಕದ ನೆರವಿನಿಂದ 20 ಓವರ್‌ಗಳ ನಂತರ 7 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ ಸೂರ್ಯಕುಮಾರ್ ಯಾದವ್ (Suryakumar Yadav ) ಅವರ ಅರ್ಧಶತಕ ಹಾಗೂ ಟಿಮ್ ಡೇವಿಡ್ (Tim David) ಅವರ ಸ್ಫೋಟಕ ಬ್ಯಾಟಿಂಗ್​​ನಿಂದಾಗಿ ಇನ್ನು 3 ಎಸೆತಗಳು ಬಾಕಿ ಇರುವಂತೆಯೇ ಗೆದ್ದುಬೀಗಿತು. ಆದರೆ ಇದೇ ಪಂದ್ಯದಲ್ಲಿ ಕ್ರಿಕೆಟ್​ನ ಮಿ. 360 ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಔಟಾದ ಹತಾಶೆಯಲ್ಲಿ ಬಳಸಿದ ಪದ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.

ವಾಸ್ತವವಾಗಿ ಈ ಐಪಿಎಲ್​ನಲ್ಲಿ ಸೂರ್ಯಕುಮಾರ್ ಯಾದವ್‌ಗೆ ಶುಭಾರಂಭ ಮಾಡಲಾಗಲಿಲ್ಲ. ಇದಕ್ಕೂ ಮುನ್ನ ಅವರು ರನ್‌ಗಾಗಿ ಪರದಾಡುತ್ತಿದ್ದರು. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆದರೆ ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಬ್ಬರಿಸಿದ ಸೂರ್ಯಕುಮಾರ್ ಬಿರುಸಿನ ಇನ್ನಿಂಗ್ಸ್ ಆಡಿದರು. ಆರಂಭಿಕರಿಬ್ಬರು ಬೇಗನೇ ಔಟಾದ ಬಳಿಕ ಕ್ಯಾಮರೂನ್ ಗ್ರೀನ್ ಮತ್ತು ಸೂರ್ಯಕುಮಾರ್ ಮತ್ತೊಮ್ಮೆ ಜವಾಬ್ದಾರಿ ವಹಿಸಿಕೊಂಡು ವೇಗವಾಗಿ ರನ್ ಗಳಿಸಿದರು. ಆದರೆ ಕ್ಯಾಮರೂನ್ ಗ್ರೀನ್ 44 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು.

IPL 2023: ಗಿಲ್​ರನ್ನು ತಂಡದಿಂದ ಕೈಬಿಟ್ಟಿದ್ದರ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಕೆಕೆಆರ್ ಸಿಇಒ

ಅಸಭ್ಯ ಪದ ಬಳಿಸಿದ ಸೂರ್ಯ

ಇದಾದ ನಂತರವೂ ಸೂರ್ಯಕುಮಾರ್ ವೇಗಕ್ಕೆ ಬ್ರೇಕ್ ಹಾಕದೆ ವೇಗದ ಬ್ಯಾಟಿಂಗ್ ಮುಂದುವರಿಸಿ 24 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅರ್ಧಶತಕ ಗಳಿಸಿದ ನಂತರವೂ ಹೆಚ್ಚು ಆಕ್ರಮಣಕಾರಿಯಾಗಲು ಮುಂದಾದ ಸೂರ್ಯ ಕ್ಯಾಚಿತ್ತು ಔಟಾದರು. ರಾಜಸ್ಥಾನ್ ಬೌಲರ್ ಸಂದೀಪ್ ಶರ್ಮಾ ಶಾರ್ಟ್ ಫೈನ್ ಲೆಗ್‌ನಲ್ಲಿ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಸೂರ್ಯ ಅವರ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಸೂರ್ಯಕುಮಾರ್ ಕೇವಲ 29 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 55 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸೆಟಲ್ ಆದ ಬಳಿಕ ತಂಡಕ್ಕೆ ಗೆಲುವು ತಂದುಕೊಡಲಾಗದೆ ವಿಕೆಟ್ ಒಪ್ಪಿಸಿದ ಸೂರ್ಯ, ಪೆವಿಲಿಯನ್​​ಗೆ ಮರಳುವ ವೇಳೆ ಅದೊಂದು ಅವಾಚ್ಯ ಶಬ್ದ ಬಳಸಿದ್ದಾರೆ. ಇದೀಗ ಸೂರ್ಯ ಈ ರೀತಿಯ ಪದ ಬಳಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ನಿರ್ಣಾಯಕ ಇನ್ನಿಂಗ್ಸ್ ಆಡಿದ ಸೂರ್ಯ

ಸೂರ್ಯಕುಮಾರ್ ಈ ಪಂದ್ಯದಲ್ಲಿ ತಮ್ಮ ಚಿರಪರಿಚಿತ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಮೈದಾನದ ಎಲ್ಲಾ ಕಡೆಗಳಲ್ಲಿ ರನ್ ಕಲೆಹಾಕಿದರು. ವಾಸ್ತವವಾಗಿ ಸೂರ್ಯ ಜೊತೆಗೆ ಟಿಮ್ ಡೇವಿಡ್ ಕೂಡ ಮುಂಬೈ ಇಂಡಿಯನ್ಸ್ ಗೆಲುವಿನ ಹೀರೋ ಎನಿಸಿಕೊಂಡರು. ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 17 ರನ್‌ಗಳ ಅಗತ್ಯವಿತ್ತು. ಜೇಸನ್ ಹೋಲ್ಡರ್ ಎಸೆದ ಈ ಓವರ್‌ನಲ್ಲಿ ಟಿಮ್ ಡೇವಿಡ್ ಸತತ ಮೂರು ಸಿಕ್ಸರ್ ಬಾರಿಸುವ ಮೂಲಕ ಮುಂಬೈಗೆ ಜಯ ತಂದುಕೊಟ್ಟರು.

ಕಳೆದ ವರ್ಷದ ಆಕ್ಷನ್ ರಿಪ್ಲೇ

ಸೂರ್ಯಕುಮಾರ್ ಅವರ ಈ ಇನ್ನಿಂಗ್ಸ್ ಕಳೆದ ವರ್ಷ ಈ ದಿನದಂದು ಅಂದರೆ ರೋಹಿತ್ ಅವರ ಜನ್ಮದಿನದಂದು ಆಡಿದ ಇನ್ನಿಂಗ್ಸ್‌ನ ಆಕ್ಷನ್ ರಿಪ್ಲೇ ಆಗಿತ್ತು. ಕಳೆದ ವರ್ಷವೂ ಏಪ್ರಿಲ್ 30ರಂದು ರಾಜಸ್ಥಾನ ತಂಡ ಮುಂಬೈ ತಂಡವನ್ನು ಐಪಿಎಲ್​ನಲ್ಲಿ ಎದುರಿಸಿತ್ತು. ಈ ಪಂದ್ಯದಲ್ಲೂ ಸೂರ್ಯಕುಮಾರ್ ಅರ್ಧಶತಕ ಬಾರಿಸಿದ್ದರು. 39 ಎಸೆತಗಳಲ್ಲಿ 51 ರನ್ ಗಳಿಸಿ ತಂಡಕ್ಕೆ ಐದು ವಿಕೆಟ್​ಗಳ ಜಯ ತಂದುಕೊಟ್ಟಿದ್ದರು. ಆ ಪಂದ್ಯದಲ್ಲಿ ರಾಜಸ್ಥಾನ ಮುಂಬೈಗೆ 159 ರನ್‌ಗಳ ಗುರಿಯನ್ನು ನೀಡಿತ್ತು, ಅದನ್ನು ಮುಂಬೈ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Mon, 1 May 23