IPL 2023: ಆರಂಭಿಕರೇ ಆರ್‌ಸಿಬಿ ಜೀವಾಳ; ಈ ಭಾರತೀಯನನ್ನು ಹೊರಗಿಡಿ ಎಂದ ಸೆಹ್ವಾಗ್!
IPL 2023: ಸೋಲಿನ ಬಳಿಕ ಆರ್‌ಸಿಬಿ ಬ್ಯಾಟಿಂಗ್ ವಿಭಾಗದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಆರ್‌ಸಿಬಿ ತಂಡದ ನ್ಯೂನತೆಯ ಬಗ್ಗೆ ಮಾತನಾಡಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ (Eden Gardens) ನಡೆದ ಐಪಿಎಲ್ನ 9 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore vs Kolkata Knight Riders) ತಂಡವನ್ನು 81 ರನ್ಗಳಿಂದ ಸೋಲಿಸಿ ಬೃಹತ್ ಜಯ ಸಾಧಿಸಿದಲ್ಲದೆ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಬೆಂಗಳೂರು ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತ ಕೋಲ್ಕತ್ತಾ ತಂಡ ಕಳಪೆ ಆರಂಭ ಪಡೆದಿದ್ದರ ಹೊರತಾಗಿಯೂ ರಹಮಾನುಲ್ಲಾ ಗುರ್ಬಾಜ್ ಅವರ ಅರ್ಧಶತಕ ಮತ್ತು ಶಾರ್ದೂಲ್-ರಿಂಕು ಅವರ 100 ರನ್ ಜೊತೆಯಾಟದಿಂದಾಗಿ ಕೋಲ್ಕತ್ತಾ ತಂಡ 205 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಬೆಂಗಳೂರು ತಂಡ ಅಬ್ಬರದ ಆರಂಭ ಪಡೆಯಿತ್ತಾದರೂ, ಆನಂತರ ಸ್ಪಿನ್ನರ್ಗಳ ವಿರುದ್ಧ ಮುಗ್ಗರಿಸಿ ಕೆವಲ 123 ರನ್‌ಗಳಿಗೆ ಆಲೌಟ್ ಆಯಿತು. ಈ ಸೋಲಿನ ಬಳಿಕ ಆರ್‌ಸಿಬಿ ಬ್ಯಾಟಿಂಗ್ ವಿಭಾಗದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಕೂಡ ಆರ್‌ಸಿಬಿ ತಂಡದ ನ್ಯೂನತೆಯ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸೆಹ್ವಾಗ್, ಆರ್‌ಸಿಬಿ ತಂಡ ಒಬ್ಬ ಅಥವಾ ಇಬ್ಬರು ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅಂದರೆ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇವರಿಬ್ಬರು ಯಾವಾಗ ಸ್ಕೋರ್ ಮಾಡುತ್ತಾರೋ ಆಗ ಮಾತ್ರ ಆರ್‌ಸಿಬಿ ಗೆಲ್ಲಲಿದೆ. ಹೀಗಾದರೆ ತಂಡಕ್ಕೆ ಕಪ್ ಗೆಲ್ಲುವ ಅವಕಾಶ ಸಿಗುವುದು ಕಷ್ಟ. ಹೀಗಾಗಿ ತಂಡದ ಮತ್ತೊಬ್ಬ ಬ್ಯಾಟರ್ ಮ್ಯಾಕ್ಸ್‌ವೆಲ್ ಕೂಡ ಬ್ಯಾಟ್ನಿಂದ ಕೊಡುಗೆ ನೀಡಬೇಕು. ಅವರೊಂದಿಗೆ ಗೇಮ್ ಫಿನಿಶರ್ ದಿನೇಶ್ ಕಾರ್ತಿಕ್ ಕೂಡ ರನ್ ಗಳಿಸಬೇಕಿದೆ. ಹಾಗೆಯೇ ತಂಡದ ಇತರ ಬ್ಯಾಟ್ಸ್‌ಮನ್‌ಗಳ ಕೊಡುಗೆಯೂ ಮುಖ್ಯವಾಗಿದೆ ಎಂದಿದ್ದಾರೆ.
IPL 2023: ಶೂನ್ಯ ಸುತ್ತುವುದರಲ್ಲಿ ಹಿಟ್ಮ್ಯಾನ್ ರೋಹಿತ್ರನ್ನೇ ಹಿಂದಿಕ್ಕಿದ ಕೆಕೆಆರ್ ಬ್ಯಾಟರ್..!
ಅನುಜ್ ಬದಲಿಗೆ ಬೇರೆಯವರನ್ನು ಆಡಿಸಬೇಕು
ವಾಸ್ತವವಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಅನುಜ್ ರಾವತ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿತ್ತು. ಆದರೆ ಅನುಜ್ ಯಾವುದೇ ರೀತಿಯಾಗಿ ಇಂಪ್ಯಾಕ್ಟ್ ಮಾಡಲಿಲ್ಲ. ಈ ಕುರಿತು ಮಾತನಾಡಿರುವ ಸೆಹ್ವಾಗ್, ಅನುಜ್ ಉತ್ತಮ ಪ್ರದರ್ಶನ ನೀಡಬೇಕು. ಅದು ಸಾಧ್ಯವಾಗದಿದ್ದರೆ, ತಂಡದಲ್ಲಿ ಅವರಿಗಿಂತ ಉತ್ತಮ ಬ್ಯಾಟ್ಸ್‌ಮನ್ ಇದ್ದರೆ, ಅವರಿಗೆ ಅವಕಾಶ ನೀಡಬಹುದು ಎಂದು ಸೆಹ್ವಾಗ್, ಆರ್‌ಸಿಬಿಗೆ ಸಲಹೆ ನೀಡಿದ್ದಾರೆ.
ಆರ್‌ಸಿಬಿ ಬ್ಯಾಟಿಂಗ್ ವಿಫಲ
ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ಬ್ಯಾಟಿಂಗ್ ವಿಭಾಗ ತರಗೆಲೆಗಳಂತೆ ಉದುರಿತು. ಕೆಕೆಆರ್ 204 ರನ್ ಗಳಿಸಿದ್ದ ಪಿಚ್‌ನಲ್ಲಿ ಆರ್‌ಸಿಬಿ 123 ರನ್‌ಗಳಿಗೆ ಆಲೌಟ್ ಆಯಿತು. ಫಾಫ್ ಡುಪ್ಲೆಸಿ ಗರಿಷ್ಠ 23 ರನ್ ಗಳಿಸಿದರು. ವಿರಾಟ್ ಕೊಹ್ಲಿ 21 ರನ್ ಗಳಿಸಲಷ್ಟೇ ಶಕ್ತರಾದರು. ಈ ಇಬ್ಬರನ್ನು ಹೊರತುಪಡಿಸಿದರೆ ಗ್ಲೆನ್ ಮ್ಯಾಕ್ಸ್‌ವೆಲ್ 5, ಶಹಬಾಜ್ ಅಹ್ಮದ್ 1 ರನ್ ಗಳಿಸಿ ಔಟಾದರು. ದಿನೇಶ್ ಕಾರ್ತಿಕ್ ಕೂಡ ಕೇವಲ 9 ರನ್‌ಗಳಿಗೆ ಸುಸ್ತಾದರು. ಹರ್ಷಲ್ ಪಟೇಲ್ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಅನುಜ್ ರಾವತ್ 1 ರನ್ ಬಾರಿಸಿ ಬ್ಯಾಟ್ ಎತ್ತಿಟ್ಟರು. ಈ ಪಂದ್ಯದಲ್ಲಿ ಆರ್‌ಸಿಬಿಯ ಆರಂಭಿಕರಿಬ್ಬರನ್ನು ಬಿಟ್ಟರೆ ಮಧ್ಯಮ ಕ್ರಮಾಂಕ ಸಂಪೂರ್ಣವಾಗಿ ಛಿದ್ರವಾಯಿತು. ಇದೇ ಕಾರಣಕ್ಕೆ ವೀರೇಂದ್ರ ಸೆಹ್ವಾಗ್ ಆರ್‌ಸಿಬಿಯ ಬ್ಯಾಟಿಂಗ್ ಲೈನ್ ಅಪ್ ಅನ್ನು ಪ್ರಶ್ನಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Fri, 7 April 23