ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ (IPL 2024) 5ನೇ ಪಂದ್ಯದ ವೇಳೆ ಅಭಿಮಾನಿಗಳು ಹೊಡೆದಾಡಿಕೊಂಡ ಘಟನೆ ನಡೆದಿದೆ. ಮುಂಬೈ ಇಂಡಿಯನ್ಸ್ (Mumbai Indians) ಹಾಗೂ ಗುಜರಾತ್ ಟೈಟಾನ್ಸ್ (Gujarat Titans) ನಡುವಣ ಈ ಪಂದ್ಯದ ವೇಳೆ ಕೆಲ ಫ್ಯಾನ್ಸ್ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಈ ಪಂದ್ಯದ ವೇಳೆ ರೋಹಿತ್ ಶರ್ಮಾ (Rohit Sharma) ಅಭಿಮಾನಿಗಳು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಆರಂಭದಿಂದಲೇ ಮೂದಲಿಸುತ್ತಿದ್ದರು. ಅಲ್ಲದೆ ಪಾಂಡ್ಯ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದರು.
ಹಿಟ್ಮ್ಯಾನ್ ಅಭಿಮಾನಿಗಳಿಗೆ ಗುಜರಾತ್ ಟೈಟಾನ್ಸ್ ಫ್ಯಾನ್ಸ್ ಕೂಡ ಸಾಥ್ ನೀಡಿದ್ದರು. ಇದರಿಂದ ಹಾರ್ದಿಕ್ ಪಾಂಡ್ಯ ಅಭಿಮಾನಿಗಳ ಸಿಟ್ಟು ನೆತ್ತಿಗೇರಿದೆ ಎನ್ನಲಾಗಿದೆ. ಇದೇ ಕಾರಣದಿಂದಾಗಿ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅಭಿಮಾನಿಗಳು ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡಿದ್ದಾರೆ. ಇದೀಗ ಫ್ಯಾನ್ಸ್ ಫೈಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಪಂದ್ಯದ ಟಾಸ್ ಪ್ರಕ್ರಿಯೆ ವೇಳೆ ಗುಜರಾತ್ ಟೈಟಾನ್ಸ್ ಅಭಿಮಾನಿಗಳು ಹಾರ್ದಿಕ್ ಪಾಂಡ್ಯರನ್ನು ಮೂದಲಿಸುವ ಮೂಲಕ ಸ್ವಾಗತಿಸಿದ್ದರು. ಇದಕ್ಕೆ ಮುಖ್ಯ ಕಾರಣ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ತಂಡ ಸೇರಿರುವುದು. ಇನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದ ಬಳಿಕ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ.
ಇದೀಗ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯರನ್ನು ಒಪ್ಪಿಕೊಳ್ಳಲು ರೋಹಿತ್ ಶರ್ಮಾ ಫ್ಯಾನ್ಸ್ ಸುತಾರಂ ಸಿದ್ಧರಿಲ್ಲ. ಇದೇ ಕಾರಣದಿಂದಾಗಿ ಪಂದ್ಯದ ನಡುವೆ ರೋಹಿತ್ ಶರ್ಮಾ ಹೆಸರಿನೊಂದಿಗೆ ಘೋಷಣೆಗಳು ಕೇಳಿ ಬಂದಿದ್ದವು. ಅಲ್ಲದೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಎನ್ನುವ ಪೋಸ್ಟರ್ಗಳು ಕೂಡ ರಾರಾಜಿಸಿದ್ದವು. ಇದೀಗ ಈ ರಾರಾಜನೆ ಹಾಗೂ ಘೋಷಣೆಗಳು ಅತಿರೇಕಕ್ಕೆ ಹೋಗಿ ಇಬ್ಬರು ಆಟಗಾರರ ಅಭಿಮಾನಿಗಳು ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡಿದ್ದಾರೆ.
ಇದನ್ನೂ ಓದಿ: IPL 2024: ನಾನೇ ನಾಯಕ: ಮೊದಲ 12 ಓವರ್ಗಳಲ್ಲಿ ಬುಮ್ರಾಗೆ ಒಂದೇ ಓವರ್ ನೀಡಿದ ಪಾಂಡ್ಯ..!
ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಸೋಲಿನೊಂದಿಗೆ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 168 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್ ಕಳೆದುಕೊಂಡು 162 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ಮೊದಲ ಪಂದ್ಯದಲ್ಲೇ 6 ರನ್ಗಳಿಂದ ಸೋಲೊಪ್ಪಿಕೊಂಡಿತು.