ಬರೋಬ್ಬರಿ 10 ಸೀಸನ್ಗಳ ಬಳಿಕ ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕತ್ವ ಬದಲಾಗಿದೆ. ರೋಹಿತ್ ಶರ್ಮಾ ಇದ್ದ ಜಾಗಕ್ಕೆ ಹಾರ್ದಿಕ್ ಪಾಂಡ್ಯ ನೇಮಕವಾಗಿದ್ದಾರೆ. ಕಳೆದೆರಡು ಸೀಸನ್ಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದ ಪಾಂಡ್ಯರನ್ನು ಈ ಬಾರಿಯ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡ ಟ್ರೇಡ್ ಮಾಡಿಕೊಂಡಿತ್ತು.
ಈ ಟ್ರೇಡ್ ಪ್ರಕ್ರಿಯೆಯ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ಪಟ್ಟ ನೀಡಿದ್ದರು. ಇದೀಗ ಇಬ್ಬರು ಆಟಗಾರರು ಜೊತೆಯಾಗಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದಾರೆ.
ಇದಕ್ಕೂ ಮುನ್ನ ನಡೆದ ಮುಂಬೈ ಇಂಡಿಯನ್ಸ್ ತಂಡದ ಸುದ್ದಿಗೋಷ್ಠಿಯಲ್ಲಿ ನೂತನ ನಾಯಕ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದರು. ಈ ವೇಳೆ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿರುವ ಬಗ್ಗೆ ರೋಹಿತ್ ಶರ್ಮಾ ಅವರೊಂದಿಗೆ ಚರ್ಚಿಸಿದ್ದೀರಾ ಎಂಬ ಪ್ರಶ್ನೆಗೆ ಕೇಳಲಾಗಿದೆ.
ಈ ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಹಾರ್ದಿಕ್ ಪಾಂಡ್ಯ, ಎಸ್ ಅ್ಯಂಡ್ ನೋ ಎಂದರು. ಮಾತು ಮುಂದುವರೆಸಿ, ನಾವೆಲ್ಲರೂ ವೃತ್ತಿಪರ ಆಟಗಾರರು. ರೋಹಿತ್ ಶರ್ಮಾ ಕೂಡ ಕೆಲ ಸರಣಿಗಳಲ್ಲಿ ಆಡುತ್ತಿದ್ದರು. ನಾವು ಪ್ರತಿಯೊಬ್ಬರನ್ನು ಭೇಟಿಯಾಗದೇ ಒಂದೆರಡು ತಿಂಗಳುಗಳೇ ಕಳೆದಿವೆ ಎಂದರು. ಈ ಮೂಲಕ ರೋಹಿತ್ ಶರ್ಮಾ ಜೊತೆ ಈ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂಬುದನ್ನು ಹಾರ್ದಿಕ್ ಪಾಂಡ್ಯ ಪರೋಕ್ಷವಾಗಿ ತಿಳಿಸಿದ್ದಾರೆ.
ಅಲ್ಲದೆ ರೋಹಿತ್ ಶರ್ಮಾ ಐಪಿಎಲ್ಗೆ ಆಗಮಿಸಿದಾಗ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ. ಇತ್ತ ಪಾಂಡ್ಯ ಅವರ ಈ ಹೇಳಿಕೆ ಬೆನ್ನಲ್ಲೇ ಇದೀಗ ಹಿಟ್ಮ್ಯಾನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
2015 ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ನೀವು ಪಾದಾರ್ಪಣೆ ಮಾಡಿದ್ದೀರಿ. ಹಿಟ್ಮ್ಯಾನ್ ಕ್ಯಾಪ್ಟನ್ಸಿ ಅಡಿಯಲ್ಲಿ 7 ಸೀಸನ್ ಆಡಿದ್ದೀರಿ. ಇದಾಗ್ಯೂ ಸೌಜನ್ಯಕ್ಕಾದರೂ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳುತ್ತಿರುವ ಬಗ್ಗೆ ರೋಹಿತ್ ಶರ್ಮಾ ಜೊತೆ ಚರ್ಚಿಸದಿರುವುದು ನಿಮ್ಮ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 11:24 am, Tue, 19 March 24