IPL 2024: ಆರ್​ಸಿಬಿ ಸೋಲಿಗೆ ಮಮ್ಮಲ ಮರುಗಿದ ಎಬಿ ಡಿವಿಲಿಯರ್ಸ್​; ವಿಡಿಯೋ ವೈರಲ್

|

Updated on: May 23, 2024 | 4:44 PM

IPL 2024: ಆರ್​ಸಿಬಿ ಈ ಬಾರಿ ಕಪ್ ಗೆಲ್ಲುವ ಭರವಸೆಯಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಂಡಿದ್ದ ತಂಡದ ಮಾಜಿ ಅನುಭವಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್, ರಾಜಸ್ಥಾನ್ ವಿರುದ್ಧ ಆರ್​ಸಿಬಿ ಸೋತ ಬಳಿಕ ಹತಾಶೆ ಹೊರಹಾಕಿದ್ದಾರೆ. ಇದಲ್ಲದೆ ಪಂದ್ಯದುದ್ದಕ್ಕೂ ಆರ್​ಸಿಬಿ ಗೆಲುವಿಗೆ ಪ್ರಾರ್ಥಿಸಿದ್ದ ಡಿವಿಲಿಯರ್ಸ್ ಕಣ್ಣಂಚಲ್ಲಿ ನೀರು ಕಂಡುಬಂತು.

IPL 2024: ಆರ್​ಸಿಬಿ ಸೋಲಿಗೆ ಮಮ್ಮಲ ಮರುಗಿದ ಎಬಿ ಡಿವಿಲಿಯರ್ಸ್​; ವಿಡಿಯೋ ವೈರಲ್
ಎಬಿ ಡಿವಿಲಿಯರ್ಸ್​
Follow us on

ಐಪಿಎಲ್ 2024 (IPL 2024) ರ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು (RCB vs CSK) ಸೋಲಿಸಿ ಪ್ಲೇಆಫ್‌ಗೆ ಪ್ರವೇಶಿಸಿದಾಗ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಮೊದಲ 8 ಪಂದ್ಯಗಳಲ್ಲಿ 7 ಸೋಲು ಕಂಡಿದ್ದ ತಂಡ ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಕೊನೆಯ ನಾಲ್ಕರ ಘಟ್ಟಕ್ಕೆ ತಲುಪಿತ್ತು. ಆದರೆ ಅಭಿಮಾನಿಗಳ ಈ ಸಂತಸಕ್ಕೆ ಕೇವಲ ಎರಡೇ ದಿನಗಳಲ್ಲಿ ತೆರೆ ಬಿದ್ದಿದೆ. ಈ ಬಾರಿ ಚಾಂಪಿಯನ್ ಆಗಲು ಪ್ರಬಲ ಸ್ಪರ್ಧಿಯಾಗಿ ಕಂಡುಬಂದಿದ್ದ ಆರ್​ಸಿಬಿಯ (RCB) ಪಯಣ ಎಲಿಮಿನೇಟರ್ ಪಂದ್ಯದಲ್ಲಿಯೇ ಅಂತ್ಯಗೊಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದ ರಾಜಸ್ಥಾನ ಕ್ವಾಲಿಫೈಯರ್ 2 ಗೆ ಎಂಟ್ರಿಕೊಟ್ಟಿದೆ. ಇತ್ತ ಈ ಬಾರಿಯೂ ಕಪ್ ಗೆಲ್ಲಲಾಗಲಿಲ್ಲವಲ್ಲ ಎಂಬ ನೋವು ಅಭಿಮಾನಿಗಳು, ಆಟಗಾರರಿಗೆ ಮಾತ್ರವಲ್ಲದೆ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ಗೂ (AB de Villiers) ಬೇಸರ ತರಿಸಿದೆ.

ವಿಡಿಯೋ ವೈರಲ್

ಆರ್​ಸಿಬಿ ಈ ಬಾರಿ ಕಪ್ ಗೆಲ್ಲುವ ಭರವಸೆಯಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಂಡಿದ್ದ ತಂಡದ ಮಾಜಿ ಅನುಭವಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್, ರಾಜಸ್ಥಾನ್ ವಿರುದ್ಧ ಆರ್​ಸಿಬಿ ಸೋತ ಬಳಿಕ ಹತಾಶೆ ಹೊರಹಾಕಿದ್ದಾರೆ. ಇದಲ್ಲದೆ ಪಂದ್ಯದುದ್ದಕ್ಕೂ ಆರ್​ಸಿಬಿ ಗೆಲುವಿಗೆ ಪ್ರಾರ್ಥಿಸಿದ್ದ ಡಿವಿಲಿಯರ್ಸ್ ಕಣ್ಣಂಚಲ್ಲಿ ನೀರು ಕಂಡುಬಂತು. ಪಂದ್ಯದಲ್ಲಿ ಆರ್​ಸಿಬಿ ಸೋತ ಬಳಿಕ ಕಾಮೆಂಟೆಟರಿ ಮಾಡುತ್ತಿದ್ದ ಎಬಿ ಡಿವಿಲಿಯರ್ಸ್ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡರು. ಬಳಿಕ ಮೇಜಿನ ಮೇಲೆ ಮಲಗಿ ನೋವು ಹೊರಹಾಕಿದರು. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಟ್ವೀಟ್ ಮೂಲಕ ಹುರಿದುಂಬಿಸಿದ ಎಬಿಡಿ

ರಾಜಸ್ಥಾನ್ ವಿರುದ್ಧ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ಸೋತ ಬಳಿಕ ಟ್ವೀಟ್ ಮಾಡಿರುವ ಎಬಿ ಡಿವಿಲಿಯರ್ಸ್ ‘ಸೋಲು ಸದಾ ದುಃಖಕರವಾಗಿರುತ್ತದೆ. ಆದರೆ ಒಬ್ಬ ಆರ್​ಸಿಬಿ ಅಭಿಮಾನಿಯಾಗಿ ನನಗೆ ತುಂಬಾ ಹೆಮ್ಮೆ ಇದೆ. ಆರಂಭದ ದಿನಗಳಲ್ಲಿ ಸತತ ಸೋಲುಗಳಿಂದ ಟೂರ್ನಿಯಿಂದ ಹೊರಗುಳಿಯುವ ಹಂತದಲ್ಲಿದ್ದರೂ ಕುಗ್ಗದೆ ಈ ಸಾಧನೆ ಮಾಡಿದ್ದು, ಅಮೋಘವಾಗಿದೆ. ಮುಂದಿನ ಸೀಸನ್​ನಲ್ಲಿ ಬೆಂಗಳೂರು ತಂಡ ಭರ್ಜರಿ ಪುನರಾಗಮನ ಮಾಡಲಿದೆ ಎಂದು ಬರೆದುಕೊಂಡಿದ್ದಾರೆ.

ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣ

ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇನ್ನಿಂಗ್ಸ್ ಬಗ್ಗೆ ಹೇಳುವುದಾದರೆ, ಈ ಮಹತ್ವದ ಪಂದ್ಯದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಅರ್ಧ ಶತಕ ಸಹ ಬಾರಿಸಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ 33 ರನ್ ಗಳಿಸಿದರೆ, ರಜತ್ ಪಾಟಿದಾರ್ 34 ರನ್, ಮಹಿಪಾಲ್ ಲೊಮ್ರೋರ್ 17 ಎಸೆತಗಳಲ್ಲಿ 32 ರನ್ ಬಾರಿಸಿದರು. ಇದರ ಆಧಾರದ ಮೇಲೆ ತಂಡವು 20 ಓವರ್‌ಗಳಲ್ಲಿ 172 ರನ್ ಗಳಿಸಲು ಸಾಧ್ಯವಾಯಿತು. ಈ ಪಂದ್ಯದಲ್ಲಿ ರಾಜಸ್ಥಾನ ತಂಡದಿಂದ ಅದ್ಭುತ ಬೌಲಿಂಗ್ ಪ್ರದರ್ಶನ ಕಂಡುಬಂದಿದ್ದು, ಅವೇಶ್ ಖಾನ್ 3 ವಿಕೆಟ್, ಅಶ್ವಿನ್ 2 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್ ಮತ್ತು ಸಂದೀಪ್ ಶರ್ಮಾ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Thu, 23 May 24