AB de Villiers: ತುಂಬಾ ನೋವಾಗುತ್ತೆ… ಮುಂದಿನ ಸಲ ಪಕ್ಕಾ ಕಪ್ ನಮ್ದೆ: ಎಬಿಡಿ
IPL 2024 RCB vs RR: ಐಪಿಎಲ್ ಸೀಸನ್ 17ರ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿತು. ಈ ಗುರಿಯನ್ನು 19 ಓವರ್ಗಳಲ್ಲಿ ಚೇಸ್ ಮಾಡಿ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Updated on: May 23, 2024 | 2:31 PM

IPL 2024: ಆರ್ಸಿಬಿ ತಂಡದ ಕಪ್ ಗೆಲ್ಲುವ ಕನಸು ಮುಂದುವರೆದಿದೆ. ಕಳೆದ 16 ಸೀಸನ್ಗಳಲ್ಲಿ ಆರ್ಸಿಬಿ ಪಾಲಿಗೆ ಮರೀಚಿಕೆಯಾಗಿದ್ದ ಟ್ರೋಫಿಯನ್ನು ಈ ಬಾರಿ ಎತ್ತಿ ಹಿಡಿಯಲಿದ್ದಾರೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ. ಅಹದಾಬಾದ್ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ತಂಡಕ್ಕೆ ಸೋಲುಣಿಸಿ ರಾಜಸ್ಥಾನ್ ರಾಯಲ್ಸ್ ತಂಡ 2ನೇ ಕ್ವಾಲಿಫೈಯರ್ ಪ್ರವೇಶಿಸಿದೆ. ಇತ್ತ ಸೋತ ಆರ್ಸಿಬಿ ತಂಡದ ಐಪಿಎಲ್ ಅಭಿಯಾನ ಅಂತ್ಯವಾಗಿದೆ.

ಆರ್ಸಿಬಿ ತಂಡದ ಈ ಸೋಲನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅತ್ತ ಇದೇ ನೋವಿನಲ್ಲಿದ್ದಾರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್. ಈ ಸೋಲಿನ ಬೆನ್ನಲ್ಲೇ ಎಬಿಡಿ ತಮ್ಮ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆರ್ಸಿಬಿ ಸೋತಿರುವುದು ನಿಜವಾಗ್ಲೂ ನೋವಿನ ಸಂಗತಿ. ಆದರೆ ಅಭಿಮಾನಿಯಾಗಿ ನೋಡುವುದಾದರೆ, ಆರ್ಸಿಬಿ ತಂಡವು ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ. ಮೇ ತಿಂಗಳ ಆರಂಭದಲ್ಲಿ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸುವ ಭರವಸೆಗಳೇ ಇರಲಿಲ್ಲ. ಆದರೆ ಆ ಬಳಿಕ ನಮ್ಮಲ್ಲಿ ಹೊಸ ಆಶಾಭಾವನೆ ಮೂಡಿಸಿದ ಆರ್ಸಿಬಿ ಹುಡುಗರ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆಯಿದೆ ಎಂದು ಎಬಿಡಿ ಹೇಳಿದ್ದಾರೆ.

ಈಗ ಸೋತಿದ್ದೇವೆ ಅಷ್ಟೇ. ಮುಂದಿನ ವರ್ಷ ಆರ್ಸಿಬಿ ಮತ್ತಷ್ಟು ಬಲಿಷ್ಠವಾಗಿ ಬರಲಿದೆ. ಅಲ್ಲದೆ ಐಪಿಎಲ್ 2025 ರಲ್ಲಿ ಆರ್ಸಿಬಿ ಟ್ರೋಫಿಯನ್ನು ಎತ್ತಿ ಹಿಡಿಯುವುದು ನಿಶ್ಚಿತ ಎಂದು ಎಬಿ ಡಿವಿಲಿಯರ್ಸ್ ಭವಿಷ್ಯ ನುಡಿದಿದ್ದಾರೆ.

ಅಂದಹಾಗೆ ಎಬಿ ಡಿವಿಲಿಯರ್ಸ್ RCB ಪರ 11 ವರ್ಷಗಳ ಕಾಲ ಆಡಿದ್ದರು. ಈ ವೇಳೆ ಹಲವು ಬಾರಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. 157 ಪಂದ್ಯಗಳಿಂದ ಒಟ್ಟು 4522 ರನ್‌ಗಳನ್ನು ಕಲೆಹಾಕಿದ್ದರು. ಅಷ್ಟೇ ಅಲ್ಲದೆ ಆರ್ಸಿಬಿ ಪರ ಅತೀ ಹೆಚ್ಚು ರನ್ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ಬರೆದಿದ್ದಾರೆ. ಇದಾಗ್ಯೂ ಆರ್ಸಿಬಿ ತಂಡಕ್ಕೆ ಚೊಚ್ಚಲ ಟ್ರೋಫಿ ಗೆಲ್ಲಿಸಿ ಕೊಡಲು ಎಬಿ ಡಿವಿಲಿಯರ್ಸ್ಗೂ ಸಾಧ್ಯವಾಗಲಿಲ್ಲ ಎಂಬುದು ನೋವಿನ ಸಂಗತಿ.
























